ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾನುವಾರ ಪುನರ್ವಸು ಮಳೆ ಅಕ್ಷರಶಃ ಅಬ್ಬರಿಸಿದೆ. ಬುಸುಗುಡುತ್ತಾ ವೇಗವಾಗಿ ಬೀಸುತ್ತಿರುವ ಗಾಳಿಗೆ ಗಿಡ, ಮರಗಳು ತತ್ತರಿಸಿವೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಸೋಮವಾರವೂ ಗಾಳಿಯು ಪ್ರತಿ ಗಂಟೆಗೆ ಗರಿಷ್ಠ 28.8 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಂದೇ ದಿನ ಸುಮಾರು 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿದ್ದರೆ, 3 ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹಾಗೂ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಎಫ್‌ಎಂಸಿ ಕಾಲೇಜಿನ ಹಿಂದಿನ ರಸ್ತೆಯಲ್ಲಿ ವಿದ್ಯುತ್ ಕಂಬಗಳು ನೆಲಕಚ್ಚಿದ್ದರೆ, ಹಲವೆಡೆ ಮರಗಳು ಧರೆಗುರುಳಿವೆ. ವಿದ್ಯುತ್ ವ್ಯತ್ಯಯ ಅಲ್ಲಲ್ಲಿ ಆಗುತ್ತಿದ್ದದ್ದು ಸಾಮಾನ್ಯ ಎನಿಸಿತ್ತು. ಸೆಸ್ಕ್ ಸಿಬ್ಬಂದಿ ಸುರಿಯುವ ಮಳೆಯಲ್ಲೂ ದುರಸ್ತಿ ಕಾರ್ಯ ನಡೆಸಿದರು.
ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಮಳೆ ಬಿರುಸುಗೊಂಡಿತ್ತು. ಬೆಳಗಿನ ಅವಧಿಯಲ್ಲಿ ಮಳೆ ಕಡಿಮೆ ಇತ್ತು. ಮಧ್ಯಾಹ್ನದ ನಂತರ ಬಿರುಸಿನ ಮಳೆ ಸುರಿಯಿತು. ಮಳೆಯಿಂದಾಗಿ ಸಮೀಪದ ಚೋನ ಕೆರೆ ಎಂಬಲ್ಲಿ ಭಾನುವಾರ ಮಧ್ಯಾಹ್ನ ಮರವೊಂದು ರಸ್ತೆ ಅಡ್ಡಲಾಗಿ ಮುರಿದು ಬಿದ್ದು, ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಪೊಲೀಸ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ಮರವನ್ನು ತೆರವುಗೊಳಿಸಲಾಯಿತು.
ಸೋಮವಾರಪೇಟೆಯಲ್ಲಿ ಜಾನುವಾರು ಸಾವು
ಸೋಮವಾರಪೇಟೆ: ಭಾನುವಾರ ಬೆಳಿಗ್ಗೆಯಿಂದಲೇ ತಾಲೂಕಿನಾದ್ಯಂತ ಮಳೆಯ ಪ್ರಮಾಣ ಹೆಚ್ಚುತ್ತಿದ್ದು, ಗ್ರಾಮಾಂತರ ಪ್ರದೇಶದಲ್ಲಿ ತೀವ್ರ ಮಳೆ, ಗಾಳಿಗೆ ಮನೆಯ ಗೋಡೆ ಕುಸಿದಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಹಸವೊಂದು ಮೃತಪಟ್ಟಿದೆ.
ಬೆಟ್ಟದಳ್ಳಿ ಪಂಚಾಯಿತಿ ವ್ಯಾಪ್ತಿಯ ಆಯಾತಾನ್ ರೆಸಾರ್ಟ್ ಎದುರು ಬೃಹತ್ ಮರ ಬಿದ್ದು 6 ಕಾರುಗಳು ಜಖಂಗೊಂಡಿವೆ. ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ ರಸ್ತೆ ನಿವಾಸಿ ಸಿ.ಜಿ.ಸುರೇಶ್ ಅವರಿಗೆ ಸೇರಿದ ಗಬ್ಬದ ಹಸು ಭಾನುವಾರ ಮಧ್ಯಾಹ್ನ ಮೇಯುತ್ತಿದ್ದ ಸಂದರ್ಭ ಭಾರೀ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯುತ್ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದೆ.
ವಿರಾಜಪೇಟೆ, ಕುಶಾಲನಗರ, ಪೊನ್ನಂಪೇಟೆ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗಿದೆ.
ಮಳೆಗೆ ವಾಸದ ಮನೆಯ ಗೋಡೆ ಕುಸಿತ ಶನಿವಾರಸಂತೆ: ಮಳೆ ಗಾಳಿಗೆ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಚನ್ನಾಪುರ ಗ್ರಾಮದ ಲಕ್ಷ್ಮಿ ಎಂಬುವವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿದಿದೆ. ಲಕ್ಷ್ಮಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಮಧ್ಯೆ ಅವರ ವಾಸದ ಮನೆಯು ಬಹುತೇಕವಾಗಿ ಕುಸಿದು ಬಿದ್ದಿದ್ದು ಸರ್ಕಾರ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ಈ ಕುರಿತು ಗ್ರಾಮಸ್ಥರು ಕಂದಾಯ ಇಲಾಖೆಗೆ ಮನವಿ ಮಾಡಿದ್ದಾರೆ.
ಭಾನುವಾರ ಸುರಿದ ಮಳೆಯ ವಿವರ ಕೊಡಗು ಜಿಲ್ಲೆಯಲ್ಲಿ ಭಾನುವಾರ ಸಂಜೆಯವರೆಗೆ ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಸೆಂ.ಮೀನಷ್ಟು ಮಳೆ ಸುರಿದಿದೆ. ಉಳಿದಂತೆ ಕರಿಕೆ ಕೆ.ನಿಡುಗಣೆಯಲ್ಲಿ ತಲಾ 6 ಕಡಗದಾಳು ಕೆದಕಲ್‌ನಲ್ಲಿ ತಲಾ 5 ಕಿರಂಗದೂರು ಹಾನಗಲ್ಲುವಿನಲ್ಲಿ ತಲಾ 4 ಕಾಕೋಟುಪರಂಬು ಹಾಗೂ ವಿರಾಜಪೇಟೆಯಲ್ಲಿ ತಲಾ 3 ಸೆಂ.ಮೀನಷ್ಟು ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.