ADVERTISEMENT

ಸೋಮವಾರಪೇಟೆ | ಭಾರಿ ಮಳೆಗೆ ಸೊರಗಿದ ಬೆಳೆ, ರೈತರ ಪರದಾಟ

ಪುಷ್ಪಗಿರಿ ಬೆಟ್ಟ ತಪ್ಪಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆ

ಡಿ.ಪಿ.ಲೋಕೇಶ್
Published 2 ಆಗಸ್ಟ್ 2025, 7:18 IST
Last Updated 2 ಆಗಸ್ಟ್ 2025, 7:18 IST
<div class="paragraphs"><p>ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದಲ್ಲಿಲ ಕಾಫಿ ಗಿಡಗಳಲ್ಲಿ ಅತಿಯಾದ ಮಳೆಯಿಂದ ಕೊಳೆರೋಗ ಬಂದಿರುವುದು.</p></div>

ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದಲ್ಲಿಲ ಕಾಫಿ ಗಿಡಗಳಲ್ಲಿ ಅತಿಯಾದ ಮಳೆಯಿಂದ ಕೊಳೆರೋಗ ಬಂದಿರುವುದು.

   

ಸೋಮವಾರಪೇಟೆ: ಪ್ರಸಕ್ತ ಸಾಲಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶಾಂತಳ್ಳಿ ಹೋಬಳಿಯಾದ್ಯಂತ ವಿವಿಧ ಫಸಲಿಗೆ ಭಾರಿ ಹಾನಿಯಾಗಿದ್ದರೆ, ಉಳಿದೆಡೆ ಬೆಳೆ ನಷ್ಟವಾಗಿದೆ. ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಾಗಿದೆ.

ವಾರ್ಷಿಕವಾಗಿ ಅತೀ ಹೆಚ್ಚು ಮಳೆ ಬೀಳುವ ತಾಲ್ಲೂಕಿನ ಪುಷ್ಪಗಿರಿ ಬೆಟ್ಟ ತಪ್ಪಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಾಫಿ, ಏಲಕ್ಕಿ, ಕಾಳುಮೆಣಸು ಗಿಡಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ.

ADVERTISEMENT

ಗ್ರಾಮೀಣ ಭಾಗದಲ್ಲಿ ನದಿ, ಕೊಲ್ಲಿಗಳು ಉಕ್ಕಿ ಕೃಷಿ ಭೂಮಿ ಮೇಲೆ ಹರಿದು ನಷ್ಟ ಸಂಭವಿಸಿದೆ. ಬಿರುಗಾಳಿ ಸಹಿತ ಮಳೆಗೆ ಮರ ಗಿಡಗಳು ಬುಡಸಮೇತ ಬಿದ್ದು ಗಿಡಗಳಿಗೆ ಹಾನಿಯಾಗಿದೆ. ವಾತಾವರಣ ಅತೀ ಶೀತದಿಂದ ಕೂಡಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಸೂರ್ಲಬ್ಬಿ ಗ್ರಾಮದಲ್ಲಿ ಜಯಂತಿ ಎಂಬುವವರ ಎರಡು ಹಸುಗಳು ಶೀತ ಗಾಳಿಯಿಂದ ಮೃತಪಟ್ಟಿವೆ.

ಪುಷ್ಪಗಿರಿ ಬೆಟ್ಟಶ್ರೇಣಿಯ ಗ್ರಾಮಗಳಾದ ಬೆಟ್ಟದಳ್ಳಿ, ಪುಷ್ಪಗಿರಿ, ಹಂಚಿನಳ್ಳಿ, ಕುಮಾರಳ್ಳಿ, ಹೆಗ್ಗಡಮನೆ, ಮಂಡ್ಯಾ, ಕುಂಬಾರಗಡಿಗೆ, ಕಿಕ್ಕರಳ್ಳಿ, ಸೂರ್ಲಬ್ಬಿ, ಕುಡಿಗಾಣ, ಬೀದಳ್ಳಿ, ಕೊಪ್ಪಳ್ಳಿ, ತಡ್ಡಿಕೊಪ್ಪ, ಹರಗ, ಬೆಟ್ಟದಕೊಪ್ಪ, ನಾಡ್ನಳ್ಳಿ, ಕುಂದಳ್ಳಿ, ಬೇಕಳ್ಳಿ, ನಡ್ಲಕೊಪ್ಪ, ಸಿಂಗನಹಳ್ಳಿ, ಹೆಮ್ಮನಗದ್ದೆ ಗ್ರಾಮಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಭತ್ತದ ಸಸಿ ಮಡಿ ಮಳೆಯಲ್ಲಿ ಕೊಚ್ಚಿ ಹೋಗಿವೆ. ಕೆಲ ಗ್ರಾಮಗಳಲ್ಲಿ ಕಾಡು ಪ್ರಾಣಿಗಳು ಸಸಿಮಡಿ ತಿಂದಿವೆ. ನಾಟಿ ಮಾಡಿದ ಭತ್ತದ ಗದ್ದೆಗಳು ನೀರಿನಿಂದ ಆವೃತವಾಗಿದೆ.

ಸುರಿಯುತ್ತಿರುವ ಮಳೆ ಎಲ್ಲದಕ್ಕೂ ತಡೆಯೊಡ್ಡಿದೆ. ಈಗಾಗಲೇ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 625 ಸೆಂ.ಮೀ  ಮಳೆ ಸುರಿದಿದೆ. ಶಾಂತಳ್ಳಿಗೆ ಸರಾಸರಿ 450 ಸೆಂ.ಮೀ ದಾಖಲೆಯ ಮಳೆ ಯಾಗಿದೆ. ಬೆಟ್ಟತಪ್ಪಲಿನ ಹೆಗ್ಗಡಮನೆ, ಸೂರ್ಲಬ್ಬಿ, ಮಲ್ಲಳ್ಳಿ, ಕೊತ್ನಳ್ಳಿ ಸುತ್ತಮುತ್ತಲ ಗ್ರಾಮಗಳಿಗೆ ಈಗಾಗಲೇ ಸಾಮಾನ್ಯ ಮಲೆಗಿಂತಲೂ ಹೆಚ್ಚು ಮಳೆಯಾಗಿದೆ.

‘ಇನ್ನು ಮಳೆಗಾಲ ಮುಗಿಯಲು ಎರಡು ತಿಂಗಳಿದ್ದು, ಶೀತ ಹೆಚ್ಚಾಗುವುದರಿಂದ ಉಳಿದ ಬೆಳೆಯುವ ನೆಲ ಕಚ್ಚುವುದರಲ್ಲಿ ಯಾವುದೇ ಸಂಶಯ ಇಲ್ಲ’ ಎಂದು ಗರ್ವಾಲೆ ಗ್ರಾಮದ ಲೋಕೇಶ್ ತಿಳಿಸಿದರು.

‘ಕಳೆದ ವರ್ಷ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಆಗಮಿಸಿ ನಡುವೆ ಕೊಂಚ ಬಿಡುವು ನೀಡಿದ್ದರಿಂದ ಸಾಧಾರಣ ಕಾಫಿ ಫಸಲು ಕೈಸೇರಿತ್ತು. ಆದರೆ, ಪ್ರಸ್ತುತ ವರ್ಷ ಬಿರುಗಾಳಿ ಸಹಿತ ಮಳೆ ಹಾಗೂ ಶೀತದಿಂದ ಭಾರೀ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಇದೆ. ಜೊತೆಗೆ, ಕೊಳೆರೋಗದಿಂದ ಕಾಫಿ ಗಿಡಗಳಲ್ಲಿ ಕಾಫಿ ಎಲೆಗಳು ಕೊಳೆಯುತ್ತಿದೆ. ನಿರಂತರ ಮಳೆಯಿಂದ ಕಾಳುಮೆಣಸಿನ ಬಳ್ಳಿಗಳಲ್ಲಿ ಫಸಲುಗಟ್ಟುತ್ತಿಲ್ಲ’ ಎಂದು ಸೋಮೇಶ್ ತಿಳಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಮುಕ್ಕೋಡ್ಲು ಗ್ರಾಮದಲ್ಲಿ ಭಾರಿ ಮಳೆಗೆ ಸೇತುವೆ ಮೇಲೆ ನೀರು ಹರಿಯುತ್ತಿರುವುದು.

ಅಮೋನಿಯಂ ಸಲ್ಫೇಟ್ ಎಂಒಪಿ ಸೂಕ್ತ

ಕಾಫಿ ಮಂಡಳಿಯ ಉಪನಿರ್ದೇಶಕ ವಿ.ಚಂದ್ರಶೇಖರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ಪ್ರತಿ ವರ್ಷ ಒಂದು ಎಕರೆ ಕಾಫಿ ತೋಟಕ್ಕೆ ಒಂದು ಚೀಲ ಯೂರಿಯಾ ಅರ್ಧ ಚೀಲ ‘ಎಂಒಪಿ’ ಹಾಕಲಾಗುತ್ತಿತ್ತು. ಆದರೆ ಈಗಿನ ಹವಾಗುಣಕ್ಕೆ ಇದರ ಬದಲು 2 ಬ್ಯಾಗ್‌ ಅಮೋನಿಯಂ ಸಲ್ಫೇಟ್ ಮತ್ತು ‘ಎಂಒಪಿ’ ಅರ್ಧ ಬ್ಯಾಗ್‌ ಹಾಕುವುದು ಅತಿ ಸೂಕ್ತ. ಇದರಿಂದ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಗಿಡಗಳಿಗೆ ದಕ್ಕುತ್ತವೆ. ಇದರಿಂದ ಕಾಫಿ ಉದುರುವುದನ್ನು ತಡೆಯಬಹುದು. ಮಳೆ ಬಿಡುವು ಕೊಟ್ಟ ತಕ್ಷಣ ಈ ಕ್ರಮ ಅನುಸರಿಸಬೇಕು’ ಎಂದು ತಿಳಿಸಿದರು

ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆಯಿಂದ ಕಾಫಿ ನೆಲಕಚ್ಚಿದೆ. ಸರ್ಕಾರ ತಕ್ಷಣ ಹಾನಿಗೀಡಾದ ಕಾಫಿ ತೋಟಗಳಲ್ಲಿ ಸಮೀಕ್ಷೆ ನಡೆಸಿ ರೈತರಿಗ ಪರಿಹಾರ ನೀಡಬೇಕು.
–ಕೆ.ಎಂ.ದಿನೇಶ್, ಅಧ್ಯಕ್ಷ ತಾಲ್ಲೂಕು ರೈತ ಸಂಘ ಸೋಮವಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.