ಮೈಸೂರು/ ಚಿಕ್ಕಮಗಳೂರು: ಹಾಸನ , ಮೈಸೂರು, ಮತ್ತು ಕೊಡಗು ಜಿಲ್ಲೆಗಳಲ್ಲಿ ಬುಧವಾರ ಜೋರು ಮಳೆಯಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬಿ.ಶೆಟ್ಟಿಗೇರಿಯಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ 20 ಸೆಂ.ಮೀನಷ್ಟು ಭಾರಿ ಮಳೆ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ಬಹುತೇಕ ಭಾಗಗಳಲ್ಲಿ ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಜಲಾಶಯಗಳು ಭರ್ತಿಯಾಗುತ್ತಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸುತ್ತಿರುವುದರಿಂದಾಗಿ ಪ್ರವಾಹದ ಆತಂಕ ಮನೆಮಾಡಿದೆ. ಕಾವೇರಿ, ಕಪಿಲಾ ನದಿ ದಂಡೆಯಲ್ಲಿರುವ ಜನರಿಗೆ ಕಾವೇರಿ ನೀರಾವರಿ ನಿಗಮವು ಮುನ್ನೆಚ್ಚರಿಕೆ ನೀಡಿದೆ.
ಕೊಡಗಿನ ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ, ಪೊನ್ನಂಪೇಟೆಯ ತಗ್ಗು ಪ್ರದೇಶಗಳು ಹಾಗೂ ಗುಡ್ಡದಲ್ಲಿ, ಕೆಳಗೆ ವಾಸಿಸುವ ಜನರಲ್ಲಿ ಆತಂಕ ಮೂಡಿದೆ. ಎನ್‌ಡಿಆರ್‌ಎಫ್ ಸಹಾಯಕ ಕಮಾಂಡೆಂಟ್ ಕಿರಣ್ ಕುಮಾರ್ ಅವರು ಭೂಕುಸಿತದ ಅಪಾಯವುಳ್ಳ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ರಾಜ್ಯದ ಇತರ ಕೆಲವೆಡೆಯೂ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ, ಕೊಪ್ಪ, ಶೃಂಗೇರಿ, ಚಿಕ್ಕಮಗಳೂರು, ಮುಳ್ಳಯ್ಯನ ಗಿರಿ ಸುತ್ತಮುತ್ತ ಸೇರಿದಂತೆ ವಿವಿಧೆಡೆ ಮಳೆ ಜೋರಾಗಿತ್ತು. ಶೃಂಗೇರಿ ಸಮೀಪದ ನೆಮ್ಮಾರ್ ಬಳಿ ಕಾರ್ಕಳ–ಶೃಂಗೇರಿ ರಸ್ತೆಗೆ ಮಣ್ಣು ಜರಿದು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಗುರುವಾರ (ಜೂನ್ 26) ಕೊಡಗು ಜಿಲ್ಲೆಯ (ಕುಶಾಲನಗರ ತಾಲ್ಲೂಕು ಹೊರತುಪಡಿಸಿ) ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಬೆಳಗಾವಿ ವರದಿ: ಬೆಳಗಾವಿ, ಖಾನಾಪುರ ಹಾಗೂ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಜೂನ್ 26ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಬುಧವಾರವೂ ಧಾರಾಕಾರ ಮಳೆ ಸುರಿದಿದ್ದು
ಜಿಲ್ಲೆಯ 16 ಸೇತುವೆಗಳು ಜಲಾವೃತಗೊಂಡಿವೆ.
ಜಡಿಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆ ಬಳಿಯ ಕಪಿಲಾ ನದಿಯ ್ರವಾಹ ಹೆಚ್ಚಿದ್ದು, ನದಿಯ ನೀರು ಶಿಶಿಲ ಗ್ರಾಮದಲ್ಲಿರುವ ಶಿಶಿಲೇಶ್ವರ ದೇವಾಲಯ ಗರ್ಭಗುಡಿಗೆ ನುಗ್ಗಿದೆ.
ಬೀದರ್, ಕಲಬುರಗಿ ಜಿಲ್ಲೆಯಲ್ಲೂ ಉತ್ತಮ ಮಳೆ ಸುರಿದಿದೆ.
ದೋಣಿ ವಿಹಾರ ಸ್ಥಗಿತ: ನಿಷೇಧಾಜ್ಞೆ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದ್ದು, ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಜಲಾಶಯದ ಪ್ಲಸ್ 80 ಅಡಿ ಮಟ್ಟದ ಗೇಟ್‌ಗಳ ಮೂಲಕ ಬುಧವಾರ ಮಧ್ಯಾಹ್ನದಿಂದ 30 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ನದಿ ತೀರದ ಅಪಾಯಕಾರಿ ಸ್ಥಳಗಳಲ್ಲಿ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿಗೆ ನಿಷೇಧಾಜ್ಞೆ ಜಾರಿಯಾಗಿದೆ.
ರಂಗನತಿಟ್ಟು ಪಕ್ಷಿಧಾಮದಲ್ಲಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಮಂಗಳವಾರ ಸಂಜೆಯಿಂದ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ. ಪ್ರವಾಸಿಗರಿಗೆ ಪಕ್ಷಿ ವೀಕ್ಷಣೆಗೆ ಮಾತ್ರ ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.