ಮಡಿಕೇರಿಯ ರಾಜಾಸೀಟ್ ಬಳಿ ಅಪಾರ ಪ್ರಮಾಣದ ಮಂಜು ಕವಿದಿದ್ದು, ಹಗಲಿನಲ್ಲೇ ವಾಹನಗಳು ದೀಪ ಹಾಕಿಕೊಂಡು ಸಂಚರಿಸುತ್ತಿದ್ದವು.
ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿರುಸಿನ ಮಳೆ, ಜೋರು ಗಾಳಿ ಇನ್ನೂ ನಿಂತಿಲ್ಲ. ಜಿಲ್ಲೆಗೆ ಹವಾಮಾನ ಇಲಾಖೆ ಅತಿ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ. ಪ್ರಸಕ್ತ ಸಾಲಿನಲ್ಲಿ ಇದೇ ಮೊದಲ ಬಾರಿಗೆ ರೆಡ್ ಅಲರ್ಟ್ ಘೋಷಣೆಯಾಗಿರುವುದರಿಂದ ಜಿಲ್ಲಾಡಳಿತ ಎಲ್ಲ ಬಗೆಯ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧವಾಗಿದ್ದು, ವಿಪತ್ತು ನಿರ್ವಹಣಾ ಕೇಂದ್ರವನ್ನು ತೆರೆದಿದೆ.
ಸತತ 3 ದಿನಗಳಿಂದ ಬೀಸುತ್ತಿರುವ ಗಾಳಿಗೆ ವಾತಾವರಣದ ಉಷ್ಣಾಂಶ ಕುಸಿತವಾಗಿದೆ. ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್‌ನಿಂದ 20 ಡಿಗ್ರಿ ಸೆಲ್ಸಿಯಸ್‌ಗೆ ಹಾಗೂ ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್‌ನಿಂದ 17 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಇದರಿಂದ ಜನರು ಚಳಿಯಿಂದ ಥರಗುಟ್ಟುವಂತಾಗಿದೆ.
ಬಿಡದೇ ಸುರಿಯುತ್ತಿರುವ ಮಳೆಯಿಂದ ನದಿ, ತೊರೆಗಳು, ಜಲಪಾತಗಳು ಭೋರ್ಗರೆಯುತ್ತಿವೆ. ಕೆಲವೆಡೆ ಅಪಾಯದ ಮಟ್ಟದ ಅಂಚಿಗೆ ತಲುಪಿದ್ದರೂ ಇನ್ನೂ ಅಪಾಯದ ಗಡಿ ರೇಖೆಯನ್ನು ನದಿ, ತೊರೆಗಳು ದಾಟಿಲ್ಲ. ಇದರಿಂದ ಪ್ರವಾಹ ಪರಿಸ್ಥಿತಿ ಜಿಲ್ಲೆಯಲ್ಲಿ ಸದ್ಯಕ್ಕೆ ತಲೆದೋರಿಲ್ಲ. ಹದವಾಗಿ ಲಯಬದ್ಧವಾಗಿ ಸುರಿಯುತ್ತಿರುವ ಮಳೆಯು ಇಳೆಯಲ್ಲಿ ಜಲವನ್ನು ಉಕ್ಕಿಸುತ್ತಿದೆ.
ಜೋರಾಗಿ ಬೀಸುತ್ತಿರುವ ಗಾಳಿ ಸ್ವಲ್ಪ ನಿಯಂತ್ರಣಕ್ಕೆ ಬಂದಂತೆ ಅನ್ನಿಸಿದರೂ, ಪೂರ್ಣವಾಗಿ ತಹಬದಿಗೆ ಬಂದಿಲ್ಲ. ಹಾಗಾಗಿ, ಮರದಡಿಯಲ್ಲಿ, ಎತ್ತರದ ಪ್ರದೇಶಗಳಲ್ಲಿ ವಾಸಿಸುವವರ ಆತಂಕ ಇನ್ನೂ ದೂರವಾಗಿಲ್ಲ.
ಮಡಿಕೇರಿ ನಗರದಲ್ಲಿ ಮಂಗಳವಾರ ದಿನವಿಡೀ ಮಳೆ ಸುರಿಯಿತು. ದಟ್ಟ ಮಂಜು ಕವಿದು ಹಗಲು ಹೊತ್ತಿನಲ್ಲೇ ವಾಹನಗಳು ದೀಪ ಹಾಕಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿತ್ತು. ಬೀಸುತ್ತಿದ್ದ ಬಿರುಸಿನ ಗಾಳಿಯ ಮಧ್ಯೆ ಜನರು ನಡುಗುತ್ತಲೇ ತಮ್ಮ ತಮ್ಮ ದೈನಂದಿನ ಕೆಲಸಗಳಲ್ಲಿ ಭಾಗಿಯಾದರು.
ಆವರಿಸುತ್ತಿದೆ ಕುಸಿತದ ಭೀತಿ
ಒಂದೆಡೆ ಜಲವೈಭವವನ್ನು ಜಿಲ್ಲೆ ಕಾಣುತ್ತಿದ್ದರೆ, ಮತ್ತೊಂದೆಡೆ ಕುಸಿತದ ಭೀತಿಯನ್ನೂ ಎದುರಿಸುತ್ತಿದೆ. ಮಡಿಕೇರಿ ತಾಲ್ಲೂಕಿನ ಕೊಯನಾಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಭಾರಿ ಸ್ವರೂಪದಲ್ಲಿ ಮಣ್ಣು ಕುಸಿದಿರುವುದು ಹಾಗೂ ಮಡಿಕೇರಿ– ಮಂಗಳೂರು ರಸ್ತೆ ಹಾನಿಯಾಗಿರುವುದು ಇಂತಹದ್ದೊಂದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇಳಿಜಾರಿನಲ್ಲಿ ವಾಸಿಸುವರು, ಗುಡ್ಡದಂಚಿನಲ್ಲಿರುವವರು, ಗುಡ್ಡದ ಮೇಲಿರುವವರು ಆತಂಕದಲ್ಲೇ ದಿನದೂಡುವಂತಾಗಿದೆ. ಒಂದೆರಡು ದಿನ ಮಳೆ ನಿಂತು ಬಿಸಿಲು ಬಂದು ನಂತರ ಮಳೆ ಬರಲಿ ಎಂದು ಅಪೇಕ್ಷಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬಹುತೇಕ ಎಲ್ಲ ಭಾಗಗಳಲ್ಲೂ ಮಳೆಯಾಗಿದೆ. 9 ಮನೆಗಳಿಗೆ ಹಾನಿಯಾಗಿದ್ದು, ಅದರಲ್ಲಿ 1 ಮನೆ ಸಂಪೂರ್ಣ ಕುಸಿದಿದೆ. 86 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವೆಡೆ ಗ್ರಾಮೀಣ ಪ್ರದೇಶಗಳ ಜನರು ಕತ್ತಲಿನಲ್ಲೇ ಕಾಲ ಕಳೆಯುವಂತಾಗಿದೆ.
ಸನ್ನದ್ಧ ಸ್ಥಿತಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಘಟಕ
ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಘಟಕವು ಸನ್ನದ್ಧ ಸ್ಥಿತಿಯಲ್ಲಿದೆ. ಕುಶಾಲನಗರದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಬೀಡು ಬಿಟ್ಟಿದೆ. ಪರಿಸ್ಥಿತಿ ಮೇಲೆ ನಿಗಾ ಇರಿಸಿದ್ದು, ಅಪಾಯ ಸಂಭವಿಸಿದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತರಳಲಿದೆ.
ಮುಂದುವರಿದ ಮುಂಗಾರು ಮಳೆಯ ಆರ್ಭಟ
ಸೋಮವಾರಪೇಟೆ: ತಾಲ್ಲೂಕಿನಾದ್ಯಂತ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಜನರು ವಿದ್ಯುತ್ ಮತ್ತು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎರಡು ದಿನಗಳಿಂದ ಭಾರಿ ಗಾಳಿಯೊಂದಿಗೆ ಮಳೆ ಸುರಿಯುತ್ತಿರುವುದರಿಂದ ಸಾಕಷ್ಟು ಬೃಹತ್ ಮರಗಳು ವಿದ್ಯುತ್ ಮಾರ್ಗದ ಮೇಲೆ ಬಿದ್ದಿವೆ. ವಿದ್ಯುತ್ ಇಲ್ಲದ ಪರಿಣಾಮ ಸ್ಥಳೀಯ ಆಡಳಿತ ಕುಡಿಯುವ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಮಳೆ ಹೆಚ್ಚಾಗಿರುವುದರಿಂದ ಹೊರಗೆ ತೆರಳಿ ನೀರು ತರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಜೋರು ಮಳೆ ಸುರಿಯುತ್ತಿರು ವುದರಿಂದ ಗ್ರಾಮೀಣ ಭಾಗಗಳಲ್ಲಿ ನದಿ ತೋಡುಗಳು ತುಂಬಿ ಹರಿಯುತ್ತಿದ್ದು, ಅಕ್ಕಪಕ್ಕದ ಗದ್ದೆ ತೋಟಗಳನ್ನು ಅಕ್ರಮಿಸಿಕೊಂಡು ಹರಿಯುತ್ತಿವೆ. ಶಾಂತಳ್ಳಿ ಹೋಬಳಿಯಲ್ಲಿ ರೈತರು ಭತ್ತದ ಗದ್ದೆಯಲ್ಲಿ ನಾಟಿ ಕಾರ್ಯವನ್ನು ಮುಗಿಸಿದ್ದು, ಗದ್ದೆಯ ಮೇಲೆ ನೀರು ಹರಿಯುತ್ತಿರುವುದರಿಂದ ಸಂಕಷ್ಟ ಎದುರಿಸುತಿದ್ದಾರೆ.
‘ಗದ್ದೆಯಲ್ಲಿ ನೀರು ತುಂಬಿ ಹರಿಯುವ ಸಂದರ್ಭ ಮರಳು ಮತ್ತು ಮಣ್ಣು ಸಂಗ್ರಹವಾಗುವುದರಿಂದ ನಾಟಿ ಪೈರು ಕೊಳೆಯುತ್ತದೆ’ ಎಂದು ಮಂಕ್ಯ ಗ್ರಾಮದ ಅಕ್ಷಿತ್ ಪಳಂಗಪ್ಪ ತಿಳಿಸಿದರು.
ಭಾರಿ ಗಾಳಿ ಮಳೆಗೆ ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲ್ತಾರೆಶೆಟ್ಟಳ್ಳಿ ಗ್ರಾಮದ ರವಿಪ್ರಕಾಶ್ ಎಂಬುವವರ ಮನೆ ಮತ್ತು ಕೊಟ್ಟಿಗೆಯ ಮೇಲೆ ಮರ ಬಿದ್ದು, ಹಾನಿಯಾಗಿದೆ. ಸ್ಥಳಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಹಿತಿ ಪಡೆದಿದ್ದಾರೆ. ತಾಲ್ಲೂಕಿನಾದ್ಯಂತ ರಸ್ತೆ ಮತ್ತು ಕಾಫೀ ತೋಟಗಳಲ್ಲಿ ಬೃಹತ್ ಮರಗಳು ಉರುಳಿ ಬಿದ್ದಿವೆ.
ರಂಗಸಮುದ್ರ ಗ್ರಾಮದಲ್ಲಿ ರಸ್ತೆ , ಸೇತುವೆಯ ತಡೆಗೋಡೆ ಕುಸಿತ
ಕುಶಾಲನಗರ: ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಮುಖ್ಯ ರಸ್ತೆಯಿಂದ ಮಾವಿನಹಳ್ಳ ಹಾಡಿಗೆ ಹೋಗುವ ರಸ್ತೆ ಮತ್ತು ಸೇತುವೆ ತಡೆಗೋಡೆ ಮಂಗಳವಾರ ಕುಸಿತಗೊಂಡಿದೆ.
ಪರಿಶಿಷ್ಟ ಪಂಗಡ ಕುಟುಂಬಸ್ಥರ ಕಾಲೋನಿಯ ಸೇತುವೆಯು ಅತೀಯಾದ ಮಳೆಯಿಂದ ತಡೆಗೋಡೆ ಕುಸಿದು ಬಿದ್ದಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸೇತುವೆಯ ಒಂದು ಬದಿಯಲ್ಲಿ ತಡೆಗೋಡೆ ಮಣ್ಣು ಸಂಪೂರ್ಣ ಕುಸಿತಗೊಂಡಿರುವುದರಿಂದ ಸೇತುವೆ ಭದ್ರತೆಗೂ ಹಾನಿ ಉಂಟಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಆರ್.ಕೆ.ಚಂದ್ರು ದೂರಿದ್ದಾರೆ.
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಹಾಗೂ ತಾಲ್ಲೂಕು ಪಂಚಾಯತಿ ಎಂಜಿನಿಯರ್ ಫಯಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾವಿನಹಳ್ಳ ಸೇತುವೆಯ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಪಂಚಾಯಿತಿ ಸದಸ್ಯರಾದ ಮಾವಜಿ ರಕ್ಷಿತ್ , ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕಲ್ಪನಾ ಇದ್ದರು.
ನಾಪೋಕ್ಲು ವ್ಯಾಪ್ತಿಯಲ್ಲಿ ಹಾನಿ, ಸಂಪರ್ಕ ಕಡಿತ
ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ. ಇಲ್ಲಿಗೆ ಸಮೀಪದ ಹೊದ್ದೂರಿನ ಬೊಳಿಬಾಣೆ ಎಂಬಲ್ಲಿ ರಸ್ತೆ ಜಲಾವೃತವಾಗಿದೆ. ಕಿರು ವಾಹನಗಳ ಸಂಚಾರ ಕಷ್ಟಕರವಾಗಿದೆ. ರಾತ್ರಿಯೂ ಮಳೆ ಸುರಿದರೆ ನಾಪೋಕ್ಲು-ಮೂರ್ನಾಡು ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ. ಸಮೀಪದ ಚೆರಿಯಪರಂಬುವಿನಲ್ಲೂ ರಸ್ತೆ ಜಲಾವೃತವಾಗಿದೆ. ನಾಪೋಕ್ಲು-ಕಲ್ಲುಮೊಟ್ಟೆ ಸಂಪರ್ಕ ರಸ್ತೆ ಕಡಿತಗೊಂಡಿದೆ.
ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಭಾಗಮಂಡಲ -ನಾಪೋಕ್ಲು ರಸ್ತೆಯಲ್ಲಿ ನೀರು ಹರಿಯುತ್ತಿದೆ.ಮಧ್ಯಾಹ್ನ ನಂತರ ನೀರಿನ ಪ್ರಮಾಣ ಇಳಿಮುಖಗೊಂಡಿದೆ. ತ್ರಿವೇಣಿ ಸಂಗಮದ ಉದ್ಯಾನ ಜಲಾವೃತವಾಗಿದೆ.
ಸಮೀಪದ ಎಮ್ಮೆಮಾಡು, ಕುಂಜಿಲ, ಕಕ್ಕಬ್ಬೆ ಗ್ರಾಮ ವ್ಯಾಪ್ತಿಗಳಲ್ಲಿ ಗಾಳಿ ಸಹಿತ ಮಳೆಯಾಗಿದ್ದು ಹಲವರ ಮನೆಗಳಿಗೆ ಹಾನಿಯಾಗಿದೆ .ಶೀಟುಗಳು ಹಾರಿ ಹೋಗಿದ್ದು ನಷ್ಟ ಸಂಭವಿಸಿದೆ.
ಸಮೀಪದ ಎಮ್ಮೆಮಾಡು ಗ್ರಾಮದ ಉಸ್ಮಾನ್ ಅವರ ಮನೆಯ ತಡೆಗೋಡೆಗೆ ಹಾನಿಯಾಗಿದೆ. ಉಮ್ಮರ್, ಹಸೈನಾರ್ ಅವರ ಮನೆಯ ಮೇಲೆ ಮರ ಬಿದ್ದಿದ್ದು ಮನೆಗೆ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಂಜಿಲ ಗ್ರಾಮದ ಮುದ್ದಪ್ಪ, ಮಾಯಮ್ಮ, ಕೊಣಂಜಗೇರಿ ಗ್ರಾಮದ ಕುಶಾಲಪ್ಪ ಅವರ ಮನೆ, ಚೇಲಾವರ ಗ್ರಾಮದ ಮುತ್ತಪ್ಪ ಅವರ ಮನೆ ಹಾನಿಯಾಗಿವೆ.
ವಿರಾಜಪೇಟೆಯಲ್ಲಿ ಉತ್ತಮ ಮಳೆ
ವಿರಾಜಪೇಟೆ: ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಮಂಗಳವಾರ ಉತ್ತಮ ಮಳೆ ಸುರಿಯಿತು. ಪಟ್ಟಣದ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿಯಿಡಿ ಸುರಿದ ಮಳೆಯು ಮಂಗಳವಾರ ದಿನವಿಡಿ ನಡುನಡುವೆ ಬಿಡುವು ನೀಡುತ್ತ ಸುರಿಯಿತು. ಸಮೀಪದ ಕದನೂರು ಪಂಚಾಯಿತಿ ವ್ಯಾಪ್ತಿಯ ಭತ್ತದ ಗದ್ದೆ ಜಲಾವೃತಗೊಂಡಿತು.
ನಿರಂತರ ಮಳೆಯಿಂದಾಗಿ ಸಮೀಫದ ಭೇತ್ರಿಯಲ್ಲಿ ಕಾವೇರಿ ಹೊಳೆಯು ಮೈದುಂಬಿ ಹರಿಯಿತು. ಸಮೀಪದ ಕದನೂರಿನಲ್ಲಿ ಹರಿಯುವ ಕದನೂರು ಹೊಳೆಯ ನೀರಿನ ಮಟ್ಟವು ಗಣನೀಯವಾಗಿ ಹೆಚ್ಚಳಗೊಂಡಿದೆ.
ಪಟ್ಟಣದ ಪ್ರದೇಶವಲ್ಲದೆ ಸಮೀಪದ ಗ್ರಾಮಗಳಾದ ಕದನೂರು, ಅರಮೇರಿ, ಆರ್ಜಿ, ಬೇಟೋಳಿ, ಹೆಗ್ಗಳ, ರಾಮನಗರ, ಬಿಟ್ಟಂಗಾಲ, ಅಮ್ಮತ್ತಿ, ಒಂಟಿಯಂಗಡಿ, ಬಿಳುಗುಂದ, ಚೆಂಬೆಬೆಳ್ಳೂರು, ದೇವಣಗೇರಿ, ಕಾಕೋಟುಪರಂಬು ಗ್ರಾಮಗಳ ವ್ಯಾಪ್ತಿಯಲ್ಲು ಉತ್ತಮ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.