
ಸೋಮವಾರಪೇಟೆ: ಮಾಗಡಿ- ಜಾಲ್ಸೂರು ರಾಜ್ಯ ಹೆದ್ದಾರಿ 85ರ ಆಲೆಕಟ್ಟೆ ರಸ್ತೆ ಸೇರಿದಂತೆ ಹಲವೆಡೆ ಸಂಚಾರಕ್ಕೆ ಅನಾನೂಕೂಲವಾಗಿದ್ದು, ಕೂಡಲೇ ಸರಿಪಡಿಸಬೇಕೆಂದು ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಅಲೆಕಟ್ಟೆ ರಸ್ತೆಯ ಸಾಂದೀಪನಿ ಶಾಲೆ ಜಂಕ್ಷನ್ ಬಳಿ ಸೋಮವಾರ ಬಾಳೆಗಿಡ ನೆಟ್ಟು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಅಲೆಕಟ್ಟೆಯಿಂದ ಹರಪಳ್ಳಿವರೆಗೆ ಸುಮಾರು ₹20 ಕೋಟಿ ವೆಚ್ಚದಲ್ಲಿ 8 ಕಿ.ಮೀ. ರಾಜ್ಯ ಹೆದ್ದಾರಿ ಡಾಂಬರೀಕರಣ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕಳೆದ ಒಂದು ವರ್ಷದ ಹಿಂದೆ ಚಾಲನೆ ನೀಡಲಾಗಿತ್ತು. ಆದರೆ, ಇವರೆಗೆ ಆಮೆಗತಿಯಲ್ಲಿ ಕೆಲಸ ನಡೆಯುತ್ತಿತ್ತಾದರೂ ಮಳೆಗಾಲದ ನಂತರ ಸಂಪೂರ್ಣ ಕೆಲಸ ನಿಂತುಹೋಗಿದೆ.
‘ಆಲೆಕಟ್ಟಯಿಂದ ಕೂಡುರಸ್ತೆವರೆಗೆ ರಸ್ತೆಗಳನ್ನು ಅಗೆದು ಹಾಕಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ಇಡೀ ವಾತಾವರಣ ದೂಳುಮಯವಾಗಿದೆ. ರಸ್ತೆಯ ಅಕ್ಕಪಕ್ಕದ ಮನೆಯವರು ವಾಸಮಾಡಲು ಕಷ್ಟವಾಗಿದೆ. ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ ಕಾಮಗಾರಿ ಸ್ಥಗಿತವಾಗಿದೆ. ವರ್ಷವಾದರೂ ಇನ್ನು ಕಾಮಗಾರಿ ಮುಗಿದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಕುಮಾರ್ ಹಾಗೂ ಗುತ್ತಿಗೆದಾರ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಂಜಿನಿಯರ್ ಕುಮಾರ್ ಅವರನ್ನು ಪ್ರತಿಭಟನಾಕಾರರು ತೀವ್ರತರಾಟೆಗೆ ತೆಗೆದುಕೊಂಡರು.
ಸುಮಾರು 1.5 ಕಿ.ಮೀ. ಕಾಂಕ್ರಿಟ್ ರಸ್ತೆ ಕಾಮಗಾರಿ ಬಾಕಿ ಇದ್ದು ಅದನ್ನು ಶೀಘ್ರವಾಗಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟು ನೀಡಿದ ಗಡುವಿನೊಳಗೆ ಕಾಮಗಾರಿ ನಡೆಯದಿದ್ದರೆ ಮುಂದಿನ ದಿನದಲ್ಲಿ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್, ಹಾನಗಲ್ಲು ಗ್ರಾಮ ಪಂಚಾಯತಿ ಅಧ್ಯಕ್ಷ ಯಶವಂತ, ಉಪಾಧ್ಯಕ್ಷೆ ರೇಣುಕಾ ವೆಂಕಟೇಶ್, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಪಕ್ಷದ ಪ್ರಮುಖರಾದ ಎಸ್.ಜಿ. ಮೇದಪ್ಪ, ಗೋಪಾಲ್, ಅಭಿಮನ್ಯು ಕುಮಾರ್, ಉದಯ್ ಇದ್ದರು.
ಮರ ತೆರವುಗೊಳಿಸಿದ ನಂತರ ಕೆಲಸ
‘ರಸ್ತೆ ನಿರ್ಮಾಣಕ್ಕೆ ರಸ್ತೆ ಬದಿಯ ಕೆಲವು ಮರಗಳು ತೊಡಕಾಗಿದ್ದು ಮರ ತೆರವಿಗೆ ಅರಣ್ಯ ಇಲಾಖೆಯ ಅನುಮತಿ ಇವರೆಗೆ ಸಿಕ್ಕಿಲ್ಲ. ಹೆದ್ದಾರಿ-85 ರ ರಸ್ತೆಯಲ್ಲಿ ಬಾಕಿ ಇರುವ ಕೆಲಸ ನಿರ್ವಹಿಸಲು ಮರ ತೆರವುಗೊಳಿಸಿದ ನಂತರ ಕೆಲಸ ಪ್ರಾರಂಭಿಸಬೇಕಾಗಿದೆ. ಇನ್ನೆರಡು ದಿನದಲ್ಲಿ ಅನುಮತಿ ದೊರಕಲಿದ್ದು ನಂತರ ಮರ ತೆರವು ಗೊಳಿಸಿ ಉಳಿದ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಎಂಜಿನಿಯರ್ ಕುಮಾರ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.