ADVERTISEMENT

ಹಿಂದೂ ಸಮಾಜ ಒಗ್ಗೂಡಿಸುವ ಕಾರ್ಯ: ಶರಣ್ ಪಂಪ್‌ವೆಲ್

ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಶ್ವ ಹಿಂದೂ ಪರಿಷತ್ತಿನ ಶರಣ್ ಪಂಪ್‌ವೆಲ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 8:17 IST
Last Updated 1 ಮಾರ್ಚ್ 2026, 8:17 IST
ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದ ಅಂಗವಾಗಿ ಅದ್ದೂರಿ ಮೆರವಣಿಗೆ ನಡೆಯಿತು
ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದ ಅಂಗವಾಗಿ ಅದ್ದೂರಿ ಮೆರವಣಿಗೆ ನಡೆಯಿತು   

ನಾಪೋಕ್ಲು: ‘ಆರ್‌ಎಸ್‌ಎಸ್‌ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಿಂದೂ ಸಮಾಜ ಒಗ್ಗೂಡಿಸುವ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಂಘ ಇರುವುದೇ ಹಿಂದೂ ಸಮಾಜಕ್ಕಾಗಿ’ ಎಂದು ವಿಶ್ವ ಹಿಂದೂ ಪರಿಷತ್ತಿನ ಶರಣ್ ಪಂಪ್‌ವೆಲ್ ಹೇಳಿದರು.

ಸಮೀಪದ ಬಲ್ಲಮಾವಟಿಯಲ್ಲಿ ಶನಿವಾರ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಘವು ರಾಜ್ಯದಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಎಲ್ಲೂ ಸಂಘರ್ಷ ನಡೆದಿಲ್ಲ. ಗೊಂದಲ ಉಂಟಾಗಿಲ್ಲ. ಆದರೆ ನಾಪೋಕ್ಲುವಿನಲ್ಲಿ ಅಹಿತಕರ ಘಟನೆ ನಡೆದಿದೆ. ನಾಪೋಕ್ಲು ನಮ್ಮದು ಎಂದು ಹೇಳಿದ್ದು ಮಾತ್ರವಲ್ಲದೆ, ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ. ಇದು ಖಂಡನೀಯ. ನಾಪೋಕ್ಲು ಕಾವೇರಿ ತಾಯಿಯ ನಾಡು. ಕೊಡಗು ಪುಣ್ಯಭೂಮಿಯ ನಾಡು ಎಂದರು.

ADVERTISEMENT

ರಾಷ್ಟ್ರ ಸೇವಿಕ ಸಮಿತಿಯ ಮಂಗಳೂರಿನ ಜಿಲ್ಲಾ ಸೇವಾ ಪ್ರಮುಖ್ ಶ್ರೀದೇವಿ ಮಾತನಾಡಿ, ಎಲ್ಲಿ ಸ್ತ್ರೀ ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎನ್ನುವ ಉದಾತ್ತ ಚಿಂತನೆ ನೀಡಿದ ದೇಶ ನಮ್ಮದು. ಸ್ತ್ರೀಯನ್ನು ಅತ್ಯಂತ ಗೌರವದಿಂದ ಕಾಣುವುದು ಹಿಂದೂ ಸಂಸ್ಕೃತಿಯಲ್ಲಿ ಮಾತ್ರ ಎಂದರು.

‘ಹಿಂದೂ ಧರ್ಮದಲ್ಲಿ ಮಹಿಳೆಯ ಪಾತ್ರ’ ವಿಷಯದ ಕುರಿತು ಅಪ್ಪಚೆಟ್ಟೋಳಂಡ ವನುವಸಂತ ಮಾತನಾಡಿ, ತಾಯಂದಿರು ಮಕ್ಕಳಿಗೆ ಪ್ರೇರಣೆ ನೀಡಬೇಕು. ಸಮಾಜದಲ್ಲಿ ಗೌರವಯುತವಾಗಿ ಬಾಳುವ ಬಗ್ಗೆ ತಿಳಿ ಹೇಳಬೇಕು. ಮಕ್ಕಳಿಗೆ ವೇಷ ಭೂಷಣದ ಬಗ್ಗೆ ಸೂಕ್ತವಾದ ಮಾಹಿತಿಯನ್ನು ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದರು.ನಿವೃತ್ತ ಅಬಕಾರಿ ಕಮಿಷನರ್ ಮೂವೆರ ಸಚಿನ್ ಕುಟ್ಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭಕ್ಕೂ ಮುನ್ನಾ ಭಾರತ ಮಾತೆಯ ಸ್ಥಬ್ಧ ಚಿತ್ರದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ಕೇರಳದ ಚಂಡೆ ವಾದ್ಯ ಗಮನ ಸೆಳೆಯಿತು. 

ಕೊಡಗು ಸಂಘ ಚಾಲಕ ಚಕ್ಕೆರ ಮನುಸೋಮಯ್ಯ, ನಿವೃತ್ತ ನೌಕಾಪಡೆ ಅಧಿಕಾರಿ ಪೆಬ್ಬೆಟ್ಟಿರ ಎಂ.ಕುಶಾಲಪ್ಪ, ನಿವೃತ್ತ ಸೇನಾಧಿಕಾರಿ ಎಡಿಕೇರಿ ಮಣಿ ಮಂದಣ್ಣ, ಮುಖಂಡರಾದ ಮೂವೆರ ನಾಣಪ್ಪ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಇದ್ದರು.

ಬಲ್ಲಮಾವಟಿಯಲ್ಲಿ ಹಿಂದೂಸಂಗಮ ಕಾರ್ಯಕ್ರಮದ ಪ್ರಯುಕ್ತ ನಾಪೋಕ್ಲುವಿನಲ್ಲಿ ಬಿಗಿ ಬಂದೋಬಸ್ತ್ ಹಿನ್ನೆಲೆಯಲ್ಲಿ ಪೊಲೀಸ್‌ ಸಿಬ್ಬಂದಿ ಪಡೆ

- ಎಸ್‌ಪಿ ಭೇಟಿ; ಬಿಗಿ ಬಂದೋಬಸ್ತ್

ನಾಪೋಕ್ಲು: ಹಿಂದೂ ಕಾರ್ಯಕರ್ತನ ಮೇಲೆ ಶುಕ್ರವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಭೇಟಿ ನೀಡಿ ಬಲ್ಲಮಾವಟಿಯಲ್ಲಿ ಹಮ್ಮಿಕೊಳ್ಳಲಾಗಿರುವ ಹಿಂದೂ ಸಂಗಮ ಸಮಾವೇಶದ ಸಂಪೂರ್ಣ ಮಾಹಿತಿ ಪಡೆದರು. ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಆರೋಪಿಗಳ ಬಂಧನ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಕರೆ ನೀಡಿದರು. ಹಿಂಸಾತ್ಮಕ ಕೃತ್ಯಗಳನ್ನು ನಡೆಸುವವರ ವಿರುದ್ಧ  ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.