
ಸೋಮವಾರಪೇಟೆ: ‘ಅಖಂಡ ಭಾರತ ವಿಭಜನೆಯಾದ ಬಳಿಕ ಮತ್ತೆ ದೇಶವನ್ನು ಒಂದಾಗಿಸುವ ಕಾರ್ಯವನ್ನು ಆರ್ ಎಸ್ಎಸ್ ಮಾಡುತ್ತಿದ್ದು, ಸನಾತನ ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಗೆ ನಮ್ಮೆಲ್ಲರ ಒಗ್ಗಟ್ಟಿನ ಅವಶ್ಯಕತೆ ಹೆಚ್ಚಾಗಿದೆ’ ಎಂದು ಬಸವ ಪಟ್ಟಣದ ತೊಂಟದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮಿಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದೂ ಸಂಗಮ ಆಯೋಜನಾ ಸಮಿತಿಯ ತೋಳೂರುಶೆಟ್ಟಳ್ಳಿ ಮಂಡಲ ವತಿಯಿಂದ ದೊಡ್ಡ ತೋಳೂರು ಗ್ರಾಮದ ಆಟದ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಸನಾತನ ಹಿಂದೂ ಧರ್ಮದ ಪರಂಪರೆ ಹಾಗೂ ಸಂಸ್ಕೃತಿಯ ರಕ್ಷಣೆಗೆ ಒಗ್ಗಟ್ಟು ಅನಿವಾರ್ಯವಾಗಿದ್ದು, ಹಿಂದೂಗಳು ಒಂದಾದರೆ ದೇಶದಲ್ಲಿನ ಅನೇಕ ಸಮಸ್ಯೆಗಳು ತಾನಾಗಿ ಪರಿಹಾರವಾಗುತ್ತವೆ. ಹಿಂದೂ ಧರ್ಮ ಉಳಿದರೆ ಮಾತ್ರ ನಾವು ಬದುಕಲು ಸಾಧ್ಯ ಎಂಬ ಸತ್ಯವನ್ನು ಅರಿತುಕೊಳ್ಳಬೇಕು’ ಎಂದರು.
ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್ ಮಂಗಳೂರು ವಿಭಾಗ ಸಹ ಸೇವಾ ಪ್ರಮುಖ್ ಭರತ್ ರಾಜ್ ದಿಕ್ಕೂಚಿ ಭಾಷಣ ಮಾಡಿ, ‘ನಮ್ಮ ರಾಷ್ಟ್ರ, ನಮ್ಮ ಸಂಸ್ಕೃತಿ, ನಮ್ಮ ಧರ್ಮದ ರಕ್ಷಣೆಯಲ್ಲಿ ನಮ್ಮ ಪಾತ್ರಗಳು ಏನು ಎಂಬುದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಇಂತ ಕಾರ್ಯಕ್ರಮಗಳು ನಡೆಯುತ್ತಿದೆ’ ಎಂದರು.
ಅಧ್ಯಕ್ಷತೆಯನ್ನು ಉದ್ಯಮಿ ಹರಪಳ್ಳಿ ರವೀಂದ್ರ ವಹಿಸಿದ್ದರು. ವೇದಿಕೆಯಲ್ಲಿ ಹಿಂದೂ ಸಂಗಮದ ಆಯೋಜನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಸನತ್ ಕರ್ಕಳ್ಳಿ, ಹಿಂದೂ ಸಂಘಮ ಆಯೋಜನ ಸಮಿತಿಯ ಮಂಡಲ ಅಧ್ಯಕ್ಷ ವಣಗೂರುಕೊಪ್ಪ ಉಮೇಶ್ ಇದ್ದರು.
ತೋಳೂರುಶೆಟ್ಟಳ್ಳಿ ಜಂಕ್ಷನ್ ನಿಂದ ವಾದ್ಯ ಹಾಗೂ ನಾಸಿಕ್ ಬ್ಯಾಂಡ್‌ನೊಂದಿಗೆ ಭಾರತ ಮಾತೆಯ ಭಾವಚಿತ್ರದ ಶೋಭಾಯಾತ್ರೆ ನಡೆಯಿತು. ಮಹಿಳೆಯರು ಕಳಸದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.