ADVERTISEMENT

ಪೊನ್ನಂಪೇಟೆಗೆ ಬೇಕು ತಾಲ್ಲೂಕು ಆಸ್ಪತ್ರೆ

ಸ್ವಾತಂತ್ರ್ಯೋತ್ಸವದಲ್ಲಿ ಸಚಿವರು ನೀಡಿದ ಭರವಸೆ ಸಾಕಾರವಾಗಲಿ

ಜೆ.ಸೋಮಣ್ಣ
Published 13 ಸೆಪ್ಟೆಂಬರ್ 2022, 10:57 IST
Last Updated 13 ಸೆಪ್ಟೆಂಬರ್ 2022, 10:57 IST
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ತಾಲ್ಲೂಕು ಕೇಂದ್ರದಲ್ಲಿರುವ ಆರೋಗ್ಯ ಮತ್ತು ಕ್ಷೇಮಕೇಂದ್ರ
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ತಾಲ್ಲೂಕು ಕೇಂದ್ರದಲ್ಲಿರುವ ಆರೋಗ್ಯ ಮತ್ತು ಕ್ಷೇಮಕೇಂದ್ರ   

ಗೋಣಿಕೊಪ್ಪಲು: ಹಲವು ವರ್ಷಗಳ ಹೋರಾಟದ ಫಲವಾಗಿ ಪೊನ್ನಂಪೇಟೆ ತಾಲ್ಲೂಕಿನ ಕನಸು ನನಸಾಯಿತು. ಎರಡು ವರ್ಷಗಳ ಹಿಂದೆ ಅಧಿಕೃತವಾಗಿ ಉದ್ಘಾಟನೆಯೂ ಆಯಿತು. ಆದರೆ, ಮೂಲ ಸೌಕರ್ಯಗಳಿಲ್ಲದೆ ತಾಲ್ಲೂಕು ಕೇಂದ್ರ ಬಳಲುತ್ತಿದೆ.

ಇಲ್ಲಿ ಮೂಲಭೂತವಾಗಿ ಬೇಕಾಗಿರುವ ಆಸ್ಪತ್ರೆಯೇ ಇಲ್ಲ. ಒಂದು ವರ್ಷದ ಹಿಂದೆಯಷ್ಟೇ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಇಲ್ಲಿ ದಾದಿಯರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ವೈದ್ಯರು ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಹೀಗಾಗಿ, ಜನರು ಗೋಣಿಕೊಪ್ಪಲಿನಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನೇ ಅವಲಂಬಿಸುವಂತಾಗಿದೆ.

ಪೊನ್ನಂಪೇಟೆ ಪಶು ಆಸ್ಪತ್ರೆ ಪಕ್ಕದಲ್ಲಿರುವ ಒಂದು ಎಕರೆಯಷ್ಟು ಖಾಲಿ ಜಾಗವನ್ನು ಆಸ್ಪತ್ರೆ ನಿರ್ಮಿಸಲು ಮೀಸಲಿಡಲಾಗಿದೆ. ಆದರೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಖಾಲಿ ಜಾಗದಲ್ಲಿ ಮರಗಳು ಬೆಳೆದು ನಿಂತಿದ್ದು, ಕಾಡಿನಂತೆ ಭಾಸವಾಗುತ್ತಿದೆ ಎಂಬ ಅಸಮಾಧಾನ ಸ್ಥಳೀಯರದ್ದಾಗಿದೆ.

ADVERTISEMENT

ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಶ್ರೀಮಂಗಲ, ಹುದಿಕೇರಿ, ಬಿರುನಾಣಿ, ಬಾಳೆಲೆ, ತಿತಿಮತಿ, ಬಿ.ಶೆಟ್ಟಿಗೇರಿ ಮದಲಾದ ಪ್ರಮುಖ ಪಟ್ಟಣಗಳಿವೆ. ಇವುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅದರೆ, ಎಲ್ಲ ಬಗೆಯ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ತಾಲ್ಲೂಕು ಆಸ್ಪತ್ರೆ ಪೊನ್ನಂಪೇಟೆಯಲ್ಲಿ ಇರಬೇಕಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಜನತೆಯ ಪ್ರಾಣ ಉಳಿಸಲು ಸಹಾಯವಾಗಲಿದೆ ಎಂಬುದು ಸಾರ್ವಜನಿಕರ ಒತ್ತಾಸೆ. ಹೀಗಾಗಿ, ಪೊನ್ನಂಪೇಟೆಯಲ್ಲಿ ತಾಲ್ಲೂಕು ಆರೋಗ್ಯ ತೆರೆಯಲು ಸಾರ್ವಜನಿಕರಿಂದ ಒತ್ತಡ ಹೆಚ್ಚಾಗುತ್ತಿದೆ.

ದಕ್ಷಿಣ ಕೊಡಗಿನಲ್ಲಿ ಪ್ರಮುಖವಾದ ಕೇಂದ್ರ ಪೊನ್ನಂಪೇಟೆ. ಇಲ್ಲಿಗೆ ಈಗ ತಾಲ್ಲೂಕು ಕಚೇರಿಯೂ ಬಂದಿದೆ. ಆದರೆ, ತಹಶೀಲ್ದಾರ್ ಮತ್ತು ಒಂದಿಬ್ಬರು ಕಂಪ್ಯೂಟರ್ ಆಪರೇಟರ್ ಅವರನ್ನು ಬಿಟ್ಟರೆ ಉಳಿದ ಯಾವುದೇ ನೌಕರರು ಇಲ್ಲಿ ಇಲ್ಲ. ಜನತೆ ಭೂ ದಾಖಲೆ ಮತ್ತಿತರ ಅಗತ್ಯ ಪತ್ರಗಳಿಗಾಗಿ ನಿತ್ಯವೂ ಅಲೆಯುವ ಸ್ಥಿತಿ ಇದೆ. ತಾಲ್ಲೂಕು ಕಚೇರಿಗೆ ಮೂಲ ಸೌಕರುಗಳೂ ಇಲ್ಲ. ಸ್ಥಳೀಯ ನಾಗರಿಕ ವೇದಿಕೆಯ ಹಿರಿಯರು ಮತ್ತು ಪದಾಧಿಕಾರಿಗಳು ಒಂದಷ್ಟು ಮೇಜು, ಕುರ್ಚಿ, ಕಂಪ್ಯೂಟರ್ ಗಳನ್ನು ನೀಡಿದರು. ಇದನ್ನು ಬಿಟ್ಟರೆ ಸರ್ಕಾರದಿಂದ ಬಂದ ಸೌಲಭ್ಯ ಬಹಳ ಕಡಿಮೆ.

ನಗರ ಆರೋಗ್ಯ ಕೇಂದ್ರಕ್ಕೆ ಪ್ರಸ್ತಾವ

ಪೊನ್ನಂಪೇಟೆಯಲ್ಲಿ ನಗರ ಆರೋಗ್ಯ ಕೇಂದ್ರ ತೆರೆಯಲು ಪ್ರಸ್ತಾವ ಕಳಿಸಲಾಗಿದೆ. ಗ್ರಾಮ ಪಂಚಾಯಿತಿಯಾಗಿರುವ ಪೊನ್ನಂಪೇಟೆ ಪುರಸಭೆಯಾಗಿ ಮೇಲ್ದರ್ಜೆಗೆ ಏರುವ ಸಾಧ್ಯತೆ ಇದೆ. ಇದಾದ ಬಳಿಕ ನೂತನ ಆಸ್ಪತ್ರೆಯೂ ಆರಂಭಗೊಳ್ಳಲಿದೆ. ಇದೀಗ ಆರೋಗ್ಯ ಕ್ಷೇಮ ಕೇಂದ್ರ ತೆರೆದು ವಾರದಲ್ಲಿ 3 ದಿನ ವೈದ್ಯರು ಭೇಟಿ ನೀಡುತ್ತಿದ್ದಾರೆ. ಜನತೆಗೆ ಅಗತ್ಯವಿರುವ ಚಿಕಿತ್ಸೆಗಳನ್ನು ಒದಗಿಸಿಕೊಡಲಾಗುತ್ತಿದೆ ಎಂದು ವಿರಾಜಪೇಟೆಯ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.