ADVERTISEMENT

ಕೊಡವ ಮುಸ್ಲಿಮರಿಂದ ಹುತ್ತರಿ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:50 IST
Last Updated 6 ಡಿಸೆಂಬರ್ 2025, 6:50 IST
ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ) ಸದಸ್ಯರು  ಸಾಂಪ್ರದಾಯಿಕ ಕದಿರು ತೆಗೆದು ಕಾಟ್ರಕೊಲ್ಲಿಯಲ್ಲಿ ಗುರುವಾರ ಹುತ್ತರಿ ಹಬ್ಬವನ್ನು ಆಚರಿಸಿದರು.
ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ) ಸದಸ್ಯರು  ಸಾಂಪ್ರದಾಯಿಕ ಕದಿರು ತೆಗೆದು ಕಾಟ್ರಕೊಲ್ಲಿಯಲ್ಲಿ ಗುರುವಾರ ಹುತ್ತರಿ ಹಬ್ಬವನ್ನು ಆಚರಿಸಿದರು.   

ವಿರಾಜಪೇಟೆ: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಸಾಂಪ್ರದಾಯಿಕ ಕದಿರು ತೆಗೆಯುವ ಮೂಲಕ ಗುರುವಾರ ಹುತ್ತರಿ ಹಬ್ಬ ಆಚರಿಸಲಾಯಿತು. ಕೊಡಗಿನ ಕಾಟ್ರಕೊಲ್ಲಿಯಲ್ಲಿ ಅಲ್ಲಿನ ಆಲೀರ ಕುಟುಂಬಸ್ಥರ ಆತಿಥ್ಯದಲ್ಲಿ ಹಲವರು ಅದ್ದೂರಿಯಾಗಿ ಹಬ್ಬ ಆಚರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಎಚ್.ಸೂಫಿ ಹಾಜಿ ಮಾತನಾಡಿ, ‘ಸಾಂಪ್ರದಾಯಿಕ ಆಚರಣೆಗಳನ್ನು ಮತ್ತು ಪದ್ಧತಿ ಪರಂಪರೆಯನ್ನು ಸಂರಕ್ಷಿಸಬೇಕು’ ಎಂದರು.

ಕದಿರು ತೆಗೆದ ಬಳಿಕ ಆಲೀರ ಐನ್ ಮನೆ ಆವರಣದಲ್ಲಿ ಸಾಂಪ್ರದಾಯಿಕ ತಂಬಿಟ್ಟು, ಹುತ್ತರಿ ಗೆಣಸಿನ ಉಪಾಹಾರ ಸೇವಿಸಿದರು. ಕೆ.ಎಂ.ಎ. ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು ಅವರ ಮನೆಯ ಆವರಣದಲ್ಲಿ ಬೋಜನದ ವ್ಯವಸ್ಥೆಗೊಳಿಸಲಾಗಿತ್ತು. ನಂತರ ಗದ್ದೆಯಿಂದ ತಂದ ಕದಿರನ್ನು ಮನೆಗಳಿಗೆ ಕೊಂಡೊಯ್ದರು.

ADVERTISEMENT

ಆಲೀರ ಎಂ. ಸಾದಲಿ ಅವರ ಗದ್ದೆಯಲ್ಲಿ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಲೀರ ಕುಟುಂಬದ ಹಿರಿಯರಾದ ಸಾದಲಿ ಅವರು ಭತ್ತದ ತೆನೆಯನ್ನು ಕೊಯ್ದು ಹಂಚಿದರು. 

ಕೊಟ್ಟಮುಡಿ, ಕುಂಜಿಲ, ಚೆರಿಯಪರಂಬು ಎಡಪಾಲ, ಕೊಂಡಂಗೇರಿ, ಗುಂಡಿಕೆರೆ, ಕೊಮ್ಮೆತೋಡು, ಚಾಮಿಯಾಲ, ವಿರಾಜಪೇಟೆ, ನಲ್ವತ್ತೋಕ್ಲು, ಅಂಬಟ್ಟಿ, ಚಿಮ್ಮಿಚ್ಚಿಕುಂಡ್ (ಹಳ್ಳಿಗಟ್ಟು)ನ ಸಮುದಾಯ ಬಾಂಧವರು, ಕಾಟ್ರಕೊಲ್ಲಿಯ ಆಲೀರ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಕೆಎಂಎ ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು, ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಪ್ರಧಾನ ಕಾರ್ಯದರ್ಶಿ ಈ ತಲತಂಡ ರಫೀಕ್ ತೂಚಮಕೇರಿ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ಕೆ.ಎಂ.ಎ. ನಿರ್ದೇಶಕ ಮತ್ತು ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್ ಸಹಯೋಗ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.