ADVERTISEMENT

ಸುಂಟಿಕೊಪ್ಪ: ಸಹಬಾಳ್ವೆ, ಬಾಂಧವ್ಯದ ಪ್ರತೀಕ ಇಫ್ತಾರ್ ಕೂಟ

ಸುನಿಲ್ ಎಂ.ಎಸ್.
Published 30 ಮಾರ್ಚ್ 2025, 8:27 IST
Last Updated 30 ಮಾರ್ಚ್ 2025, 8:27 IST
ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳ ಮದರಸದಲ್ಲಿ ಬಾಂಧವ್ಯದ ಪ್ರತೀಕವಾದ ರಂಜಾನ್ ಇಫ್ತಾರ್ ಕೂಟ ನಡೆಯಿತು.
ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳ ಮದರಸದಲ್ಲಿ ಬಾಂಧವ್ಯದ ಪ್ರತೀಕವಾದ ರಂಜಾನ್ ಇಫ್ತಾರ್ ಕೂಟ ನಡೆಯಿತು.   

ಸುಂಟಿಕೊಪ್ಪ: ವಿವಿಧ ಜನಾಂಗಗಳ ಮುಖಂಡರ ಸಮಾಗಮ, ಎಲ್ಲರೂ ಒಟ್ಟಿಗೆ ಸೇರಿ ಅಪ್ಪುಗೆಯ ಶುಭಾಶಯದ ಮೂಲಕ ಶಾಂತಿಯ ಸಂದೇಶವನ್ನು ರವಾನಿಸಿದ್ದು, ಇಂತಹ ಅಪರೂಪದ ದೃಶ್ಯ ಕಂಡು ಬಂದಿದ್ದು ಇಲ್ಲಿನ ಖದೀಜ ಉಮ್ಮ ಮದರಸ ಹಾಲ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಇಫ್ತಾರ್ ಕೂಟದ ಸಂಗಮದಲ್ಲಿ.

ಸುಂಟಿಕೊಪ್ಪದ ಸುನ್ನಿ ಶಾಫಿ ಜುಮ್ಮಾ ಮಸೀದಿಯ ವತಿಯಿಂದ ಪವಿತ್ರ ರಂಜಾನ್ ಮಾಸಾಚರಣೆಯ 27ನೇ ದಿನವಾದ ಶುಕ್ರವಾರ ಬೃಹತ್ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು .

ಕಾರ್ಯಕ್ರಮದ ಆರಂಭದಲ್ಲಿ ಮುಸ್ಲಿಂ ಧರ್ಮ ಗುರುಗಳು ರಂಜಾನ್ ಹಬ್ಬದ ಮಹತ್ವ, ಉಪವಾಸ ಆಚರಣೆಯ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

ADVERTISEMENT

ಆ ನಂತರ ಎಲ್ಲರೂ ಒಟ್ಟಾಗಿ ಸೇರಿ ಫಲಹಾರ, ಸಮೋಸ, ಪಾಯಸ, ಖರ್ಜೂರ, ವಿವಿಧ ರೀತಿಯ ಸಿಹಿ ತಿಂಡಿಗಳನ್ನು, ಭೋಜನ ಸೇವಿಸಿ ಸಂತಸ ಹಂಚಿಕೊಂಡರು. ಸುನ್ನಿ ಶಾಫಿ ಜುಮ್ಮಾ ಮಸೀದಿ ವತಿಯಿಂದ ಕಳೆದ ಕೆಲವು ವರ್ಷಗಳಿಂದ ಇಫ್ತಾರ್ ಕೂಟವನ್ನು ಆಯೋಜಿಸುತ್ತಿದ್ದು, ಇದರಿಂದ ಪ್ರತಿಯೊಬ್ಬರಲ್ಲೂ ಬಾಂಧವ್ಯ ಉಪವಾಸ ಮಾಡುವ ಅದರ ಮಹತ್ವವನ್ನು ತಿಳಿಸುವ ಸಣ್ಣ ಪ್ರಯತ್ನವನ್ನು ಈ ಮಸೀದಿಯ ಮೂಲಕ ಮಾಡಲಾಗುತ್ತಿದೆ. ಇದೊಂದು ಶಾಂತಿಯ ಸಂಕೇತವಾಗಿದ್ದು, ಮೇಲು ಕೀಳು ಬಡವ- ಬಲ್ಲಿದ, ಜಾತಿ ಬೇಧವನ್ನು ಮರೆತು ಸಹಬಾಳ್ವೆಯಿಂದ ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಮಸೀದಿಯ ಮಾಜಿ ಅಧ್ಯಕ್ಷ ಹಸನ್ ಕುಂಜ್ಞಿ ಹಾಜಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ರಂಜಾನ್ ತಿಂಗಳಲ್ಲಿ ಇಫ್ತಾರ್ ಕೂಟ ನಡೆಸುವುದು ಸಾಮಾನ್ಯವಾಗಿದೆ. ಎಲ್ಲರನ್ನೂ ಒಂದೇ ಭಾವನೆಯಲ್ಲಿ ನೋಡುವ ಮಹದಾಸೆ ನಮ್ಮದು. ಇದೊಂದು ನೆಮ್ಮದಿಯ, ಸಹಭಾಗಿತ್ವದ ಕಾರ್ಯಕ್ರಮವಾಗಿದೆ ಎಂದು ಗದ್ದೆಹಳ್ಳದ ಮದರಸದ ಮಜೀದ್ ತಿಳಿಸಿದರು.

‘ಎಲ್ಲ ಧರ್ಮದ ಧರ್ಮ ಗ್ರಂಥಗಳು ಎಲ್ಲರನ್ನು ಪ್ರೀತಿಸಿ, ಯಾರನ್ನು ನೋಯಿಸಬೇಡಿ ಎಂದಿದೆ. ಜಾತಿ, ಧರ್ಮವನ್ನು ಹೋಗಲಾಡಿಸಿ ನಾವೆಲ್ಲರೂ ಸಹೋದರರು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು. ಹಾಗಿದ್ದಾಗ ಮಾತ್ರ ಶಾಂತಿ, ನೆಮ್ಮದಿ, ಪ್ರೀತಿ ಬೆಳೆಯುತ್ತದೆ’ ಎಂದು ಹಿರಿಯ ಮುತ್ಸದ್ಧಿ ಕೆ.ಎಂ.ಇಬ್ರಾಹಿಂ ಮಾಸ್ಟರ್ ತಿಳಿಸಿದರು.

ಉಸ್ಮಾನ್ ಪೌಜಿ ಮುದಾರಿಸ್ ಅವರು ದುಹಾ ನೆರವೇರಿಸಿದರು.

ಕಳೆದ ವಾರ ಎಸ್.ಎಂ.ಎಸ್ ಕಾಲೇಜು, ಗದ್ದೆಹಳ್ಳ ಮಸೀದಿಯ ವತಿಯಿಂದ ಇಫ್ತಾರ್ ಕೂಟ ನೆರವೇರಿತು‌.

ಗದ್ದೆಹಳ್ಳದ ಖಬರ್ ಸ್ತಾನದ ಬಳಿ ಇರುವ ಮದರಸದಲ್ಲಿ ಕಳೆದ ವಾರ ಎಲ್ಲ ಮಸೀದಿಗಳ ಸಹಭಾಗಿತ್ವದಲ್ಲಿ ಇಫ್ತಾರ್ ಕೂಟ ‌ನಡೆಯಿತು.

ಆರ್.ಎಚ್.ಶರೀಫ್, ಮಜೀದ್ ಎಂ‌.ಎಂ.ಶರೀಫ್, ರಫೀಕ್, ರಶೀದ್, ಮಹಮ್ಮದ್ ಸೇರಿದಂತೆ ಇತರರು ಭಾಗವಹಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಕಳೆ ತುಂಬಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.