ADVERTISEMENT

ಸೋಮವಾರಪೇಟೆ: ಗಣಿಗಾರಿಕೆ ವಿರುದ್ಧ ಸ್ಥಳೀಯರ ಆಕ್ರೋಶ

ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:56 IST
Last Updated 6 ನವೆಂಬರ್ 2025, 6:56 IST
ಸೋಮವಾರಪೇಟೆ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕಾ ಸ್ಥಳಕ್ಕೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಸಂದೀಪ್ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ಸೋಮವಾರಪೇಟೆ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕಾ ಸ್ಥಳಕ್ಕೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಸಂದೀಪ್ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.   

ಸೋಮವಾರಪೇಟೆ: ತಾಲ್ಲೂಕಿನ ಯಲಕನೂರು, ಹೊಸಳ್ಳಿ ಗ್ರಾಮಗಳಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶಗಳಿಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ವೇಳೆ ಸ್ಥಳೀಯರು ಗಣಿಗಾರಿಕೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಕಿಡಿಕಾರಿದರು.

‘ಈ ಗ್ರಾಮಗಳಲ್ಲಿ ಅಧಿಕೃತಕ್ಕಿಂತಲೂ ಅನಧಿಕೃತ ಗಣಿಗಾರಿಕೆಗಳೇ ಹೆಚ್ಚು ನಡೆಯುತ್ತಿದ್ದು, ರಕ್ಷಣೆಗಾಗಿ ಸುತ್ತ ಕನಿಷ್ಠ ತಂತಿ ಬೇಲಿ ಅಳವಡಿಸದೆ, ಕಲ್ಲುಗಳನ್ನು ಸಿಡಿಮದ್ದು ಹಾಕಿ ಸಿಡಿಸಲಾಗುತ್ತಿತ್ತು. ಸುತ್ತಮುತ್ತಲಿನ ಗ್ರಾಮಗಳ ನೂರಾರು ಕುಟುಂಬಗಳು ದಿನಂಪ್ರತಿ ಭಯದಲ್ಲಿಯೇ ಕಾಲ ಕಳೆಯುವಂತಾಗಿತ್ತು. ಹಲವಾರು ಮನೆಗಳ ಗೋಡೆಗಳು ಸಿಡಿಮದ್ದು ಹಾಕಿ ಸಿಡಿಸುತ್ತಿದ್ದ ಶಬ್ದಕ್ಕೆ ಬಿರುಕು ಬಿಟ್ಟು ಸಮಸ್ಯೆಯಾಗಿತ್ತು. ಇಲ್ಲಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಲಾರಿಗಳಲ್ಲಿ ಕಲ್ಲನ್ನು ಸಾಗಿಸುತ್ತಿದ್ದುದ್ದರಿಂದ, ರಸ್ತೆ ದುಸ್ಥಿತಿಗೆ ತಲುಪಿದೆ. ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ತೆರಳಲು ಪರದಾಡಬೇಕಾಗಿತ್ತು. ದೂಳಿನಿಂದಾಗಿ ಹಲವು ಜನರ ಆರೋಗ್ಯ ಹದಗೆಟ್ಟಿದೆ ಎಂದು ದೂರಿದರು. ಸ್ಥಳಕ್ಕೆ ಪರಿಶೀಲನೆಗೆ ಬಂದ ಅಧಿಕಾರಿಗಳು ಸ್ಥಳದ ಯಾವುದೇ ದಾಖಲೆಯನ್ನು ತಂದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಗಣಿಗಾರಿಕೆಗಳ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಇದೀಗ ಕಲ್ಲುಕೋರೆಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆಯಷ್ಟೆ ಎಂದೂ ಕಿಡಿಕಾರಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಸಂದೀಪ್ ಮಾತನಾಡಿ, ‘ಇಲ್ಲಿ ಪರವಾನಗಿ ಪಡೆದು ಒಟ್ಟು 14 ಕಡೆ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಒಂದು ತಿಂಗಳ ಹಿಂದೆಯೇ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಇದೀಗ ಸ್ಥಳ ಪರಿಶೀಲನೆ ನಡೆಸಲಾಗಿದೆ’ ಎಂದರು.

ಈ ಭಾಗದ ಗ್ರಾಮಸ್ಥರ ಮನವಿಯಂತೆ ಸೂಕ್ತ ರೀತಿಯ ತನಿಖೆ ನಡೆಸಿ, ಇಲ್ಲಿ ನಡೆದಿರುವ ಕಲ್ಲುಕೋರೆಗಳ ಬಗ್ಗೆ ವಿಸ್ತೃತ ವರದಿಯನ್ನು ಮೇಲಿನ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ವಲಯ ಅರಣ್ಯಾಧಿಕಾರಿ ಶೈಲೇಂದ್ರಕುಮಾರ್, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರೋಜಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.