ADVERTISEMENT

ಮಡಿಕೇರಿ: ಅಕ್ರಮ ನಾಡಬಂದೂಕು; ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 4:28 IST
Last Updated 16 ಆಗಸ್ಟ್ 2024, 4:28 IST
ಆರೋಪಿಗಳಿಂದ ವಶಪಡಿಸಿಕೊಂಡ ಅಕ್ರಮ ನಾಡಬಂದೂಕು ಹಾಗೂ ನಾಡಪಿಸ್ತೂಲುಗಳು
ಆರೋಪಿಗಳಿಂದ ವಶಪಡಿಸಿಕೊಂಡ ಅಕ್ರಮ ನಾಡಬಂದೂಕು ಹಾಗೂ ನಾಡಪಿಸ್ತೂಲುಗಳು   

ಮಡಿಕೇರಿ: ತಾಲ್ಲೂಕಿನ ಸಣ್ಣಪುಲಿಕೋಟು ಗ್ರಾಮದಲ್ಲಿ ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಮಹೇಶ್‌ಕುಮಾರ್ ನೇತೃತ್ವದ ತಂಡವು 5 ನಾಡಬಂದೂಕು ಮತ್ತು 1 ನಾಡಪಿಸ್ತೂಲನ್ನು ವಶಪಡಿಸಿಕೊಂಡಿದೆ. ಈ ಬಂದೂಕುಗಳನ್ನು ತಯಾರಿಸುತ್ತಿದ್ದ ಆರೋಪದ ಮೇರೆಗೆ ಒಬ್ಬನನ್ನು ಹಾಗೂ ಈತನಿಂದ ಖರೀದಿಸಿದ ಆರೋಪದ ಮೇರೆಗೆ ಮೂವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೇರಳದ ಸುರೇಶ್‌ (52), ಚೇತುಕಾಯ ಗ್ರಾಮದ ಎನ್.ಜೆ.ಶಿವರಾಮ (45), ಪಿರಿಯಾಪಟ್ಟಣದ ಮಾಗಳಿ ಗ್ರಾಮದ ಎಸ್.ರವಿ (35), ಭಾಗಮಂಡಲದ ದೊಡ್ಡಪುಲಿಕೋಟು ಗ್ರಾಮದ ಕೋಟಿ (55) ಬಂಧಿತರು.

ಇವರಲ್ಲಿ ಸುರೇಶ್ ಕೇರಳದ ಇಡುಕ್ಕಿ ಜಿಲ್ಲೆಯಿಂದ ಇಲ್ಲಿಗೆ ಬಂದು ಸಣ್ಣಪುಲಿಕೋಟು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಇಲ್ಲಿ ಈತ ಅಕ್ರಮವಾಗಿ ನಾಡಬಂದೂಕು ಮತ್ತು ನಾಡಪಿಸ್ತೂಲನ್ನು ತಯಾರಿಸುತ್ತಿದ್ದನು. ಈ ಕುರಿತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಯಿತು. ‘ಈ ವೇಳೆ 2 ನಾಡ ಬಂದೂಕು ಹಾಗೂ 1 ನಾಡ ಪಿಸ್ತೂಲು ಸಿಕ್ಕಿದವು. ನಂತರ, ತನಿಖೆ ನಡೆಸಿದಾಗ ಇವರಿಂದ ಖರೀದಿಸಿದ್ದ ಉಳಿದ ಆರೋಪಿಗಳನ್ನು ಬಂಧಿಸಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಡಿವೈಎಸ್‌ಪಿ ಮಹೇಶ್‌ಕುಮಾರ್ ನೇತೃತ್ವದ ತಂಡದಲ್ಲಿ ಸಿಪಿಐ ಅನೂಪ್‌ ಮಾದಪ್ಪ, ಸಬ್‌ಇನ್‌ಸ್ಪೆಕ್ಟರ್ ಶೋಭಾ ಲಾಮಾಣಿ ಹಾಗೂ ಸಿಬ್ಬಂದಿ ಇದ್ದರು.

ಸುಳಿವು ನೀಡಿದ ವಿಳಾಸ ಇಲ್ಲದ ಪತ್ರ!

‘ಭಾಗಮಂಡಲದ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ’ ಎಂಬ ಮಾಹಿತಿಯುಳ್ಳ ವಿಳಾಸವಿಲ್ಲದ ಪತ್ರವೊಂದು ಪೊಲೀಸರ ಕೈಸೇರಿತ್ತು. ಇದರ ಆಧಾರದ ಮೇಲೆ ಸಾಕಷ್ಟು ತಿಂಗಳ ಕಾಲ ಹುಡುಕಾಟ ನಡೆಸಲಾಗಿತ್ತು. ಒಬ್ಬಂಟಿಯಾಗಿ ವಾಸವಿದ್ದ ಸುರೇಶ್‌ ಮೇಲೆ ಅನುಮಾನಗೊಂಡು ಸಾಕಷ್ಟು ಸಮಯದಿಂದ ನಿಗಾ ಇರಿಸಲಾಗಿತ್ತು. ಅಂತಿಮವಾಗಿ ಮನೆಯನ್ನು ಜಾಲಾಡಿದಾಗ ಮನೆಯಲ್ಲಿ ಬಂದೂಕು ತಯಾರಿಕೆಗೆ ಬೇಕಾದ ಪರಿಕರಗಳು ಸಿಕ್ಕವು. ಜೊತೆಗೆ ಬಂದೂಕುಗಳೂ ಲಭ್ಯವಾದವು ಎಂದು ಮೂಲಗಳು ತಿಳಿಸಿವೆ. ‘ಸಾಮಾನ್ಯವಾಗಿ ಬಂದೂಕು ಖರೀದಿಸಲು ಪರವಾನಗಿ ಸಿಗದವರು ಈತನ ಬಳಿ ಮುಂಚಿತವಾಗಿಯೇ ಹಣ ನೀಡಿ ಬಂದೂಕು ತಯಾರಿಸಿಕೊಳ್ಳುತ್ತಿದ್ದರು. ಇದೀಗ ವಶಪಡಿಸಿಕೊಂಡ ಬಂದೂಕುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.