ಮಡಿಕೇರಿ: ಮಕ್ಕಳಿಗೆ ಯಾವುದೇ ಬಗೆಯಲ್ಲಿ ಸಮಸ್ಯೆ, ಕಿರುಕುಳ ಉಂಟಾದರೆ ಕೂಡಲೇ ಮಕ್ಕಳ ಸಹಾಯವಾಣಿ-1098 ಹಾಗೂ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಿದರೆ ನೆರವು ಸಿಗುತ್ತದೆ ಎಂದು ಸೋಮವಾರಪೇಟೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮುದ್ದು ಮಾದೇವ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಜಿಲ್ಲಾ ಮಹಿಳಾ ಸಹಾಯವಾಣಿ ವತಿಯಿಂದ ಗುರುವಾರ ಮಿಶನ್ ಶಕ್ತಿ ಯೋಜನೆಯಡಿ ‘ಬೇಟಿ ಬಚಾವೊ– ಬೇಟಿ ಪಡಾವೊ’ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಪದವಿ ಪೂರ್ವ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ನಡೆದ ‘ಶಾಲಾ ಮತ್ತು ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಂವಹನ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
ಈ ಸಂಖ್ಯೆಗಳಿಗೆ ಕರೆ ಮಾಡಿದರೆ ಹಲವಾರು ಸಮಸ್ಯೆಗಳಿಗೆ ತುರ್ತು ಸಂದರ್ಭದಲ್ಲಿ ನೆರವನ್ನು ನೀಡಲಾಗುವುದು ಹಾಗೂ ಕಾಲೇಜಿನ, ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಜಾಗ್ರತೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.
ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಮುದೋಳ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಮಕ್ಕಳು ಓದಿನೊಂದಿಗೆ ಕ್ರೀಯಾಶೀಲಾತ್ಮಕ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಹಾಗೂ ಚಟುವಟಿಕೆಯಿಂದ ಕೂಡಿರಬೇಕು. ಓದಿಗೆ ಮಹತ್ವವನ್ನು ಕೊಡಬೇಕು’ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಎಸ್.ಆರ್.ಕೇಶಿನಿ ಮಾತನಾಡಿ, ‘ಹೆಣ್ಣು ಭ್ರೂಣ ಹತ್ಯೆ, ಗರ್ಭದಲ್ಲಿರುವ ಮಗುವಿಗೆ ಸಾಮಾಜಿಕ ಧೋರಣೆ, ಮಕ್ಕಳ ರಕ್ಷಣೆ, ಬಾಲ್ಯವಿವಾಹ, ಗರ್ಭದಲ್ಲಿರುವ ಮಗುವಿನಿಂದ 18 ವರ್ಷ ತುಂಬುವವರೆಗೂ ಮಕ್ಕಳಿಗೆ ಬದುಕುವ ಹಕ್ಕಿದೆ. ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುವುದು ಅಪರಾಧ. ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗ ಕೂಡದು ಸೂಕ್ತ ರೀತಿಯಲ್ಲಿ ಮಕ್ಕಳು ಮಾಹಿತಿಯನ್ನರಿತು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಮಿಷನ್ ಜಿಲ್ಲಾ ಮಿಷನ್ ಸಂಯೋಜಕಿ ಬಿ.ಎಸ್. ಮಮತಾ ಮಾತನಾಡಿ, ‘ಶಾಲಾ ಮತ್ತು ಕಾಲೇಜು ಮಕ್ಕಳಿಗೆ ಸೂಕ್ತವಾದ ಮಾಹಿತಿಯನ್ನು ತಲುಪಲೆಂದೆ ಸರ್ಕಾರ ಹಲವಾರು ಯೋಜನೆಗಳನ್ನು ತಂದಿದ್ದು, ಮಕ್ಕಳು ಮಾಹಿತಿಯನ್ನು ಸೂಕ್ತವಾಗಿ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬೆಳ್ಳಿಯಪ್ಪ ಪೋಲೀಸ್ ಇಲಾಖೆಯ ಲೋಕೇಶ್, ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಬಸವರಾಜು, ಮಹಿಳಾ ಸಾಂತ್ವನದ ಸಿಬ್ಬಂದಿಗಳಾದ ಶ್ವೇತಾ ಮತ್ತು ಮನ್ವಿತಾ ಹಾಗೂ ಪೋಷಣಾ ಅಭಿಯಾನದ ತಾಲ್ಲೂಕು ಸಂಯೋಜಕರಾದ ರಂಜಿತ ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಾಲಾ ಮತ್ತು ಕಾಲೇಜಿನ ಮಕ್ಕಳಿಗೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.