
ಮಡಿಕೇರಿ: ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರವಾಸಿತಾಣಗಳ ಅಭಿವೃದ್ದಿಗೆಂದೇ ಹಲವು ಯೋಜನೆಗಳಿವೆ. ಇವುಗಳಲ್ಲಿ ಒಂದು ಯೋಜನಾ ವ್ಯಾಪ್ತಿಗಾದರೂ ಕೊಡಗು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಒಳಪಡುವುದೇ ಎಂಬ ನಿರೀಕ್ಷೆ ಸಹಜವಾಗಿಯೇ ಪ್ರವಾಸೋದ್ಯಮಿಗಳಲ್ಲಿ ಗರಿಗೆದರಿದೆ.
‘ಪ್ರಸಾದ್’, ‘ಸ್ವದೇಶ್ ದರ್ಶನ್’, ‘ಸವಾಲು ಆಧಾರಿತ ಗಮ್ಯಸ್ಥಾನ ಅಭಿವೃದ್ಧಿ’, ‘ಪರ್ವತಮಾಲಾ’ ಹೀಗೆ ಇನ್ನೂ ಅನೇಕ ಯೋಜನೆಗಳು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಲ್ಲಿವೆ. ಇವುಗಳ ವ್ಯಾಪ್ತಿಗೆ ಯಾವುದಾದರೂ ಪ್ರವಾಸಿತಾಣವನ್ನು ಸೇರಿಸಿದರೆ ಆ ಪ್ರವಾಸಿತಾಣ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಹಣ ಬರುತ್ತದೆ. ಈ ತರಹ ಯಾವುದಾದರೂ ಯೋಜನಾ ವ್ಯಾಪ್ತಿಗೆ ಕೊಡಗನ್ನು ಸೇರಿಸಿದರೆ ಮೂಲಸೌಕರ್ಯ ಹಾಗೂ ಸಂಪರ್ಕ ಇಲ್ಲದೇ ಬಳಲುತ್ತಿರುವ ಪ್ರವಾಸಿತಾಣಗಳ ಅಭಿವೃದ್ಧಿಯಾದರೂ ಆಗುತ್ತದೆ. ಆದರೆ, ಇದುವರೆಗೂ ಇಂತಹ ಪ್ರಯತ್ನಗಳು ನಡೆದಿಲ್ಲ.
ಬೇರೆ ಜಿಲ್ಲೆಗಳಲ್ಲಿರುವಂತೆ ಒಂದೇ ಬಗೆಯ ಪ್ರವಾಸಿತಾಣಗಳು ಕೊಡಗಿನಲ್ಲಿ ಇಲ್ಲ. ಎಲ್ಲ ಬಗೆಯ ವೈವಿಧ್ಯಮಯವಾದ ಪ್ರವಾಸಿತಾಣಗಳಿರುವುದು ಕೊಡಗು ಜಿಲ್ಲೆಯ ವಿಶೇಷ. ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸಲು ಕಾಡು, ಜಲಪಾತಗಳು, ಎತ್ತರದ ವ್ಯೂ ಪಾಯಿಂಟ್‌ಗಳಿವೆ. ಸಾಹಸ ಪ್ರವಾಸೋದ್ಯಮಕ್ಕೆಂದೇ ಬೆಟ್ಟಗುಡ್ಡಗಳ ಚಾರಣ, ಜಲಸಾಹಸ ಕ್ರೀಡೆಗಳಿಗೆ ಇಲ್ಲಿ ರ‍್ಯಾಫ್ಟಿಂಗ್ ಇದೆ. ಐತಿಹಾಸಿಕ ತಾಣಗಳಿಗೆ ಕೊಡಗಿನ ಅರಸರ ಕೋಟೆ, ಗದ್ದುಗೆ, ಅರಮನೆಗಳಿವೆ. ಪ್ರಾಗೈತಿಹಾಸಕ್ಕೆ ಸಂಬಂಧಿಸಿದ ಶಿಲಾಸಮಾಧಿಗಳೂ ಇಲ್ಲಿವೆ. ಧಾರ್ಮಿಕತೆಗೆ ಸಂಬಂಧಿಸಿದಂತೆ ಇಲ್ಲಿ ಓಂಕಾರೇಶ್ವರ ದೇಗುಲ, ಜೈನ ಬಸದಿಗಳೂ, ನೂರಿನ್ನೂರು ವರ್ಷಗಳಷ್ಟು ಹಳೆಯ ಚರ್ಚ್‌ಗಳೂ ಇವೆ. ಹೀಗೆ, ಪ್ರವಾಸೋದ್ಯಮದ ಯಾವುದೇ ದೃಷ್ಟಿಯಿಂದ ವಿಶ್ಲೇಷಿಸಿದರೂ ಕೊಡಗಿನಲ್ಲಿ ಆ ವಿಷಯಗಳಿಗೆ ಸಂಬಂಧಿಸಿದ ಒಂದಿಲ್ಲೊಂದು ತಾಣಗಳಿವೆ. ಹಾಗಾಗಿ, ಪ್ರವಾಸೋದ್ಯಮ ಯಾವುದೇ ಯೋಜನೆಗೂ ಸೇರ್ಪಡೆ ಮಾಡುವಷ್ಟು ಅರ್ಹತೆ ಕೊಡಗಿದೆ.
ಇಷ್ಟಾದರೂ, ಕೊಡಗು ಇನ್ನೂ ಯಾವುದೇ ಮಹತ್ವದ ಕೇಂದ್ರ ಸರ್ಕಾರದ ಪ್ರವಾಸಿ ಯೋಜನೆಗಳಲ್ಲಿ ಸೇರ್ಪಡೆಗೊಂಡಿಲ್ಲ. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಪ್ರವಾಸಿತಾಣಗಳು ಸೇರ್ಪಡೆಯಾಗಿ ಅವು ಸಾಕಷ್ಟು ಅಭಿವೃದ್ಧಿ ಕಂಡಿವೆ. ಪಕ್ಷದ ಮೈಸೂರಿನ ಚಾಮುಂಡಿಬೆಟ್ಟ ಸಹ ‘ಪ್ರಸಾದ್’ ಯೋಜನಾ ವ್ಯಾಪ್ತಿಗೆ ಒಳಪಟ್ಟು ಅಲ್ಲಿನ ಬಹುಮಹಡಿ ವಾಹನ ನಿಲುಗಡೆ ತಾಣ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಈ ಯೋಜನೆಯಿಂದ ಬಹಳಷ್ಟು ಕಡಿಮೆಯಾಗಿದೆ. ಕೊಡಗು ಮಾತ್ರ ಇನ್ನೂ ಅಂತಹ ಯೋಜನೆಗಳ ವ್ಯಾಪ್ತಿಗೆ ಸೇರಿಲ್ಲ. ಇದು ಸಹ ಪ್ರವಾಸಿತಾಣಗಳಲ್ಲಿ ಮೂಲಸೌಕರ್ಯಗಳ ಕೊರತೆಗೆ ಕಾರಣ ಎನಿಸಿದೆ.
ಈ ಕೇಂದ್ರ ಬಜೆಟ್‌ನಲ್ಲಾದರೂ ಈ ಕೊರತೆ ನೀಗಬಹುದು ಎಂಬ ನಿರೀಕ್ಷೆ ಇಲ್ಲಿನ ಪ್ರವಾಸೋದ್ಯಮಿಗಳಲ್ಲಿದೆ. ಯಾವುದಾದರೂ ಯೋಜನಾ ವ್ಯಾಪ್ತಿಗೆ ಸೇರಬಹುದು, ಇಲ್ಲವೇ ದೇಶದ ಮಹತ್ವದ ಪ್ರವಾಸಿ ಸ್ಥಳವಾಗಿರುವ ಕೊಡಗಿನ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಗಳು ಬಲವಾಗಿವೆ.
ಯಾವುದಾದರೂ ಯೋಜನೆ ವ್ಯಾಪ್ತಿಗೆ ಸೇರಿಸಿ ಎಂಬ ಒತ್ತಾಯ ಯೋಜನಾ ವ್ಯಾಪ್ತಿಗೆ ಸೇರಿದರೆ ಬರಲಿದೆ ಕೇಂದ್ರದಿಂದ ಹಣ ಮೂಲಸೌಕರ್ಯಗಳು ಅಭಿವೃದ್ಧಿಯಾಗುವ ನಿರೀಕ್ಷೆ
ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಯಾವುದಾದರೂ ಒಂದು ಯೋಜನಾ ವ್ಯಾಪ್ತಿಗಾದರೂ ಕೊಡಗು ಸೇರ್ಪಡೆಗೊಂಡರೆ ಜಿಲ್ಲೆಯ ಪ್ರವಾಸಿತಾಣಗಳು ಅಭಿವೃದ್ಧಿಯಾಗಲಿವೆ. ಈ ಬಾರಿಯ ಬಜೆಟ್ ಮೇಲೆ ಅತೀವ ನಿರೀಕ್ಷೆ ಇದೆ.ಬಿ.ಅರ್.ನಾಗೇಂದ್ರ ಪ್ರಸಾದ್ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಅಧ್ಯಕ್ಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.