ಮಡಿಕೇರಿ: ‘ಪಾಕಿಸ್ತಾನದೊಂದಿಗೆ ಯುದ್ಧ ಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಶಾಂತಿ ದೃಷ್ಟಿಯಿಂದಷ್ಟೇ. ಆ ಹೇಳಿಕೆಯನ್ನು ನಾವು ದೌರ್ಬಲ್ಯ ಎಂದು ಅರ್ಥೈಸಿಕೊಳ್ಳಬಾರದು’ ಎಂದು ಗೃಹಸಚಿವ ಜಿ.ಪರಮೇಶ್ವರ ಹೇಳಿದರು.
ಇಲ್ಲಿ ಭಾನುವಾರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಭಾರತ ಎಂದೂ ಏಕಾಏಕಿ ಯುದ್ಧ ಮಾಡಲು ಹೋಗಿಲ್ಲ. ಹಿಂದಿನಿಂದಲೂ ಶಾಂತಿಯನ್ನೇ ನಂಬಿಕೊಂಡಿದೆ. ಆದರೆ, ನಮ್ಮನ್ನು ಕೆಣಕಿದಾಗ ಸೂಕ್ತ ಪ್ರತ್ಯುತ್ತರ ಕೊಟ್ಟಿದ್ದೇವೆ’ ಎಂದು ಇಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
‘ಕೇಂದ್ರ ಸರ್ಕಾರವು ಪಾಕಿಸ್ತಾನದವರನ್ನು ದೇಶದಿಂದ ಹೊರ ಹಾಕುವಂತೆ ಆದೇಶಿಸಿದೆ. ಅದರಂತೆ ಕ್ರಮ ಕೈಗೊಳ್ಳಲು ನಾವು ಎಸ್‌ಪಿಗಳಿಗೆ ಸೂಚಿಸಿದ್ದೇವೆ. ಎಷ್ಟು ಮಂದಿ ಇದ್ದಾರೆಂಬ ಅಂಕಿ–ಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಅವರನ್ನು ತಕ್ಷಣವೇ ವಾಪಸ್ ಕಳುಹಿಸಲಾಗುತ್ತದೆ’ ಎಂದರು.
‘ದೀರ್ಘಾವಧಿ ವೀಸಾ ಪಡೆದಿರುವವರು, ಮದುವೆ ಆಗಿರುವವರಿಗೆ ಕೆಲವೊಂದಿಷ್ಟು ರಿಯಾಯಿತಿಗಳನ್ನು ಕೇಂದ್ರ ಸರ್ಕಾರವೇ ನೀಡಿದೆ. ಅಂಥವರನ್ನು ಹೊರತುಪಡಿಸಿ ಉಳಿದವರನ್ನು ಹೊರ ಹಾಕಲಾಗುವುದು’ ಎಂದು ತಿಳಿಸಿದರು.
ಸಿದ್ದರಾಮಯ್ಯ ಪಾಕ್ ಏಜೆಂಟ್: ಯತ್ನಾಳ ಟೀಕೆ
ಕಲಬುರಗಿ: ‘ಸಿದ್ದರಾಮಯ್ಯ ಒಬ್ಬ ಮುಸ್ಲಿಂ ಏಜೆಂಟ್ ಪಾಕಿಸ್ತಾನದ ಏಜೆಂಟ್. ಅವನಿಗೆ ಮಾನ ಮರ್ಯಾದೆ ಇಲ್ಲ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ‘ಪಾಕ್ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಶಾಸಕ ಯತ್ನಾಳ ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು. ‘ಕರ್ನಾಟಕದ ಮುಖ್ಯಮಂತ್ರಿಯಾಗಿ ಭಾರತದ ಪ್ರಜೆಯಾಗಿ ಹಿಂದೂಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದರೂ ಅವರು ಹೀಗೆ ಹೇಳುತ್ತಾರೆ. ಹಾಗಾದ್ರೆ ಸಿದ್ದರಾಮಯ್ಯಗೆ ಹಿಂದೂಗಳು ವೋಟ್ ಹಾಕಿಲ್ವಾ? ಮುಸ್ಲಿಮರು ಮಾತ್ರ ವೋಟು ಹಾಕಿದ್ದಾರಾ? ಕಾಂಗ್ರೆಸ್ ಮುಸ್ಲಿಮರ ಎಂಜಲು ತಿನ್ನುವ ಪಕ್ಷವಾಗಿದೆ. ಅವರಿಗೆ ದೇಶ ಧರ್ಮ ಮುಖ್ಯವಲ್ಲ’ ಎಂದು ಹರಿಹಾಯ್ದರು. ‘ಕಾಂಗ್ರೆಸ್ಸಿಗರು ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ. ಯುದ್ಧ ಬೇಕು ಬೇಡ ಎಂಬುದು ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ವಿಚಾರವಲ್ಲ. ಅದನ್ನು ನಿರ್ಧರಿಸುವವರು ಪ್ರಧಾನಿ ರಾಷ್ಟ್ರಪತಿ ಹಾಗೂ ಸೈನ್ಯ. ಸಿದ್ದರಾಮಯ್ಯ ಬರೀ ಕರ್ನಾಟಕದ ಮುಖ್ಯಮಂತ್ರಿಯಷ್ಟೇ. ರಾಜ್ಯದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಲವ್ ಜಿಹಾದ್ ದಲಿತರ ಮೇಲಿನ ಅತ್ಯಾಚಾರ ತಡೆಗೆ ಗಮನಕೊಡಲಿ’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.