ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಪೊಮ್ಮಕ್ಕಡ ಕೂಟ ಕೊಡವ ಸಮಾಜ ಮಡಿಕೇರಿ ವತಿಯಿಂದ ‘ಕಕ್ಕಡ ನಮ್ಮೆ’ ಆ. 4ರಂದು ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ.
‘ಕೊಡವ ಸಂಸ್ಕೃತಿಯನ್ನು ಉಳಿಸುವ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಅಚರಿಸಲಾಗುತ್ತಿರುವ ಈ ಕಾರ್ಯಕ್ರಮವನ್ನು 4ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಉದ್ಘಾಟಿಸಲಿದ್ದಾರೆ’ ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಮೈಸೂರಿನ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಮ್ಮ ಭಾಗವಹಿಸಲಿದ್ದು, ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ‘ಕಕ್ಕಡ ತಿಂಗತ್‌ರ ನೈಪು–ಪೈಪು–ತೀನಿ’ ಎಂಬ ವಿಷಯದ ಕುರಿತು ವಿಚಾರ ಮಂಡಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮದ್ದ್ ಪಾಯಸ, ತಾತೆ ತೊಪ್ಪು ಪಲ್ಯ, ಕುವಲೆ ಪುಟ್ಟ್ (ಚೆಕ್ಕೆರ), ಚೆಕ್ಕೆಕುರು ಪಜ್ಜಿ, ನಾಡ್‌ಕೋಳಿ ಕರಿ, ಪಂದಿಕರಿ, ಞಂಡ್ ಕರಿ, ಬೈಂಬಳೆ ಕರಿ, ಕಾಡ್ ಮಾಂಗೆ ಕರಿ, ಬಾಳೆ ನುರ್‌ಕ್ ಹಾಗೂ ಕಕ್ಕಡದ ವಿಶೇಷವಾದ ತಿಂಡಿಯ ಸ್ಪರ್ಧೆ ಹಾಗೂ ಪ್ರದರ್ಶನ ಇರಲಿದೆ. ಜೊತೆಗೆ, ಅಕಾಡೆಮಿಯ ಪ್ರಕಟಿತ ಪುಸ್ತಕದ ಪ್ರದರ್ಶನ, ಮಾರಾಟ ಹಾಗೂ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಮ್ಮ ಮಾತನಾಡಿ, ‘ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್‌ನಾಚಯ್ಯ ಅವರು ವಹಿಸಲಿದ್ದಾರೆ. ಕಕ್ಕಡ ಪೈಪೋಟಿಯಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಕಾರ್ಯಕ್ರಮದ ಸಂಚಾಲಕರಾದ ಕಂಬೆಯಂಡ ಡೀನಾ ಬೋಜಣ್ಣ ಮತ್ತು ಚೊಟ್ಟೆಯಂಡ ಎ.ಸಂಜು ಕಾವೇರಪ್ಪ, ಪೊಮ್ಮಕ್ಕಡ ಕೂಟದ ಆಡಳಿತ ಮಂಡಳಿ ಸದಸ್ಯರನ್ನು ಹಾಗೂ ಅಕಾಡೆಮಿಯ ಕಚೇರಿಯನ್ನು ಆ. 3ರಂದು ಮಧ್ಯಾಹ್ನ 12 ಗಂಟೆಯ ಒಳಗೆ ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದರು.
ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ.ಗಿರೀಶ್ ಮಾತನಾಡಿ, ‘ಮಾಹಿತಿಗೆ ದೂ: 08272229074, 9742728805 ಸಂಪರ್ಕಿಸಬಹುದು ಎಂದು ಹೇಳಿದರು.
ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಬೊಳ್ಳಜಿರ ಯಮುನಾ ಅಯ್ಯಪ್ಪ, ಕಾರ್ಯಕ್ರಮ ಸಂಚಾಲಕರಾದ ಕಂಬೆಯಂಡ ಡೀನಾ ಬೋಜಣ್ಣ ಹಾಗೂ ಚೊಟ್ಟೆಯಂಡ ಸಂಜು ಕಾವೇರಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.