
ವಿರಾಜಪೇಟೆ: ‘ಭವ್ಯ ಪರಂಪರೆಯ, ವಿವಿಧತೆಯಲ್ಲಿ ಏಕತೆ ಕಂಡ ಜಾನಪದ ಸೊಗಡಿನ ಭಾಷೆ ಕನ್ನಡ. ಇತರ ಭಾಷೆಗಳನ್ನು ಗೌರವಿಸಿ ಕನ್ನಡ ಭಾಷೆಯನ್ನು ಧೀಮಂತಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗಬೇಕು’ ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗ, ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಮತ್ತು ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಗುರುವಾರ ನಡೆದ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕನ್ನಡ ಭಾಷೆಯನ್ನು ಪೋಷಕರು ಮನೆಯಿಂದ, ಶಿಕ್ಷಕರು ವಿದ್ಯಾಲಯದಿಂದ ಮಕ್ಕಳಿಗೆ ತಿಳಿಸಬೇಕು. ನಾಡು, ನುಡಿ, ಸಂಸ್ಕೃತಿ, ಜನಪದ ಉಳಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತು ಅವರು ಕನ್ನಡ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವ ಕಡಿಮೆಯಾಗಬೇಕು. ಪ್ರತಿಯೊಬ್ಬರೂ ನಾಡು ನುಡಿ ಮತ್ತು ಸಂಸ್ಕೃತಿಗಳ ಬಗ್ಗೆ ಅಭಿಮಾನ ಪ್ರೀತಿ ತೋರಿದಲ್ಲಿ ಕನ್ನಡ ಉತ್ತುಂಗಕ್ಕೇರುತ್ತದೆ ಎಂದರು.
ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಅರ್ಜುನ್ ಮೌರ್ಯ ಮಾತನಾಡಿ ಪ್ರಚಲಿತ ವಿದ್ಯಮಾನಗಳಲ್ಲಿ ಕನ್ನಡ ಭಾಷೆಯನ್ನು ಬಲಿಷ್ಠಗೊಳಿಸಲು ಯುವ ಸಮುದಾಯದ ಪ್ರಯತ್ನ ಅಗತ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ವಿರಾಜಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಪಿ. ರಾಜೇಶ್, ನುಡಿ ಉತ್ಸವ ಸಮಿತಿ ಸಂಚಾಲಕ ಅಬ್ದುಲ್ ರೆಹಮಾನ್, ಸೈಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಸಂಯೋಜಕರಾದ ಹೇಮಾ ಬಿ.ಡಿ. ಮಾತನಾಡಿದರು.
ವಿದ್ಯಾರ್ಥಿಗಳು ಪರೆಯ ಕಳಿ ಮತ್ತು ಉಮ್ಮತ್ತಾಟ್ ನೃತ್ಯ ಪ್ರದರ್ಶನ ನೀಡಿದರು. ಚಿತ್ರಕಲಾ ಶಿಕ್ಷಕ ಬಸವರಾಜ ಬಡಿಗರ್ ಮತ್ತು ಗಾಯಕ ಚಂದ್ರಶೇಖರ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಕಾಲೇಜಿನ ಕನ್ನಡ ವಿದ್ಯಾರ್ಥಿ ಬಳಗ, ನುಡಿ ಉತ್ಸವ ಸಮಿತಿಯ ಸದಸ್ಯರು, ಉಪನ್ಯಾಸಕರು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.