
ಐಗೂರು (ಮಡಿಕೇರಿ): ಹಚ್ಚ ಹಸಿರನ್ನೇ ಹೊದ್ದ ಗಿರಿಶ್ರೇಣಿಗಳ ಮಧ್ಯೆ, ಜುಳುಜುಳನೇ ಹರಿಯುವ ಹೊಳೆಯ ನಡುವೆ, ಮೈತುಂಬಾ ಹೂವರಳಿಸಿಕೊಂಡು ವಸಂತನ ಆಗಮನದ ನಿರೀಕ್ಷೆಯಲ್ಲಿರುವ ಮಾವಿನ ಮರಗಳ ಎದುರು ಸೋಮವಾರಪೇಟೆ ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು.
ಸೋಮವಾರಪೇಟೆ ತಾಲ್ಲೂಕಿನ ಕಾಡಂಚಿನ ಗ್ರಾಮ ಐಗೂರಿನ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಡಗರ, ಸಂಭ್ರಮದಿಂದ ನೆರವೇರಿದ ನುಡಿ ಜಾತ್ರೆಯನ್ನು ನೂರಾರು ಕನ್ನಡ ಸಾಹಿತ್ಯಾಭಿಮಾನಿಗಳು ಕಣ್ತುಂಬಿಕೊಂಡರು. ನೆಟ್‌ವರ್ಕ್ ಸಿಗದೇ ಇದ್ದುದ್ದರಿಂದ ಸಭಿಕರ ಕಣ್ಣುಗಳೆಲ್ಲವೂ ಮೊಬೈಲ್‌ನಿಂದ ವೇದಿಕೆಯತ್ತಲೇ ನೆಟ್ಟಿದ್ದು ವಿಶೇಷ ಎನಿಸಿತು.
ಸೋಮವಾರ ಸೂರ್ಯೋದಯವಾಗುತ್ತಿದ್ದಂತೆ ಧ್ವಜಾರೋಹಣದ ಮೂಲಕ ಸಮ್ಮೇಳನ ಗರಿಗೆದರಿತು. ಸಾಧಕರ ಹೆಸರಿನಲ್ಲಿದ್ದ 9 ದ್ವಾರಗಳೂ ಉದ್ಘಾಟನೆಗೊಂಡವು. ಕಬ್ಬಿಣದ ಸೇತುವೆ ಸಮೀಪದಿಂದ ಹೊರಟ ಸಮ್ಮೇಳನದ ಸರ್ವಾಧ್ಯಕ್ಷೆ ಜಲಜಾ ಶೇಖರ್ ಅವರ ಮೆರವಣಿಗೆಯು ಐಗೂರು–ಯಡವಾರೆ ಮಾರ್ಗವಾಗಿ ಕಾಜೂರು ಅರಣ್ಯ ವಸತಿಗೃಹದ ಮೂಲಕ ಐಗೂರಿನ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ತಲುಪಿತು. ಮಂಗಳವಾದ್ಯಗಳು, ಪೂರ್ಣಕುಂಭ, ವಿವಿಧ ಕಲಾತಂಡಗಳು, ಸ್ತಬ್ದಚಿತ್ರಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಪುಸ್ತಕ ಮಾರಾಟ ಸೇರಿದಂತೆ ವಿವಿಧ ಬಗೆಯ ಹತ್ತಾರು ಮಳಿಗೆಗಳು ಅಲ್ಲಿದ್ದವು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಕ್ತದಾನ ಶಿಬಿರವೂ ನಡೆಯಿತು.
ಸಮ್ಮೇಳನ ಉದ್ಘಾಟಿಸಿದ ಹಿರಿಯ ಮುಖಂಡ ಬಿ.ಎ.ಜೀವಿಜಯ, ‘ಅಜ್ಞಾನಕ್ಕೆ ಸಾವಿದೆ, ಜ್ಞಾನಕ್ಕೆ ಸಾವಿಲ್ಲ’ ಎಂದರು. ಕನ್ನಡ ಸಾಹಿತ್ಯದ ಪರಿವರ್ತನೆಯ ಘಟ್ಟಗಳನ್ನು, ವಿವಿಧ ಕವಿಗಳ ಕಾಣಿಕೆಗಳನ್ನು ಸೋದಾಹರಣವಾಗಿ ವಿವರಿಸಿದರು.
ಜಲಜಾ ಶೇಖರ್ ಅವರ ನಿರುತ್ತರ, ಬೆಸೂರು ಮೋಹನ್ ಪಾಳೇಗಾರ್ ಅವರ ‘ಕಾಂಪೌಂಡ್‌ಗೆ ಬಣ್ಣ ಮನೆಗೆ ಸುಣ್ಣವಿಲ್ಲ’, ಜಲಾ ಕಾಳಪ್ಪ ಅವರ ನೆಮ್ಮದಿ, ಶರ್ಮಿಳಾ ರಮೇಶ್ ಅವರ ಭವಭಾವದೆಡೆಗೆ ವಿಕಾಸದ ಕ್ಷಣ, ಲಾವಣ್ಯ ಮೋಹನ್ ಅವರ ಪುಷ್ಕರಿಣಿ, ಯಶಸ್ವಿ ಗಣೇಶ್ ಅವರ ಸಪ್ತ ಸ್ವರ ತಾಣ ಪುಸ್ತಕಗಳನ್ನು ಹಾಗೂ ಸಮ್ಮೇಳನದ ಸ್ಮರಣ ಸಂಚಿಕೆ ‘ಐಗೂರಿನ ಐಸಿರಿ’ಯ ಮುಖಪುಟವನ್ನು ಬಿಡುಗಡೆ ಮಾಡಲಾಯಿತು.
ಜ್ಯೋತಿ ಅರುಣ್ ಅವರ ನಿರೂಪಣೆ, ಗಂಧರ್ವ ಕಲಾ ತಂಡದವರ ರೈತ ಗೀತೆ, ಕಾಜೂರು ಐಗೂರು ಶಾಲಾ ಶಿಕ್ಷಕರಿಂದ ನಾಡಗೀತೆಗಳು ಗಮನ ಸೆಳೆದವು.
ಕಾಫಿ ಬೆಳೆಗಾರರಾದ ವಿನೋದ್ ಶಿವಪ್ಪ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಶ.ಗ.ನಯನತಾರಾ, ಕಸಾಪ ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಟಿ.ವಿಜೇತ್, ಐಗೂರು ಹೋಬಳಿ ಘಟಕದ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್, ಪರಿಷತ್ತಿನ ಪದಾಧಿಕಾರಿಗಳಾದ ಎಸ್.ಐ.ಮುನೀರ್ ಅಹಮ್ಮದ್, ಎಸ್.ಎಸ್.ಸಂಪತ್ ಕುಮಾರ್, ಕಡ್ಲೇರ ತುಳಸಿ ಮೋಹನ್, ರೇವತಿ ರಮೇಶ್, ಕೆ.ಎ.ನಾಗೇಶ್, ಮುಖಂಡರಾದ ಕೆ.ಪಿ.ಚಂದ್ರಕಲಾ, ಕೆ.ಎನ್.ದೇವರಾಜು, ವಿ.ಪಿ.ಶಶಿಧರ್, ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಭಾಗವಹಿಸಿದ್ದರು.
‘ನಮ್ಮನ್ನೆಲ್ಲ ಒಂದು ಮಾಡಿರುವುದು ಕನ್ನಡ ಭಾಷೆ’
ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಕನ್ನಡ ಭಾಷೆಯು ಕೊಡಗಿನಲ್ಲಿ ನಮ್ಮನ್ನೆಲ್ಲ ಒಂದು ಮಾಡಿದೆ’ ಎಂದರು. ‘ಸಾಹಿತಿಗಳಿಗೆ ಪ‍್ರೋತ್ಸಾಹ ಕೊಡುವುದು ನನ್ನ ಜವಾಬ್ದಾರಿ. ಹಾಗಾಗಿ ಈ ಸಮ್ಮೇಳನದ ಯಶಸ್ವಿಗೆ ಒಂದಿಷ್ಟು ಸಹಕಾರ ನೀಡಿರುವೆ. ಇತಿಹಾಸವನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಇತಿಹಾಸದೊಂದಿಗೆ ನಮಗೆ ಮುಂದಿನ ದೂರದೃಷ್ಟಿಯೂ ಇರಬೇಕು’ ಎಂದು ಹೇಳಿದರು. ಈ ಭಾಗದಲ್ಲಿ ಮಲ್ಳಳ್ಳಿ ಜಲಪಾತ ಮಕ್ಕಳಗುಡಿ ಬೆಟ್ಟದ ಅಭಿವೃದ್ಧಿ ಮದಾಪುರದಲ್ಲಿ ಪಿಯು ಕಾಲೇಜು ಕೃಷಿ ಕಾರ್ಮಿಕರಿಗೆ ನಿವೇಶನ ಸೇರಿದಂತೆ ಇರುವ ಹಲವು ಬೇಡಿಕೆಗಳಿಗೆ ಸ್ಪಂದಿಸುವೆ. ಜೊತೆಗೆ ಈಚೆಗೆ ಆಕಸ್ಮಿಕ ಬೆಂಕಿಯಿಂದ ಮನೆಯನ್ನು ಕಳೆದುಕೊಂಡವರಿಗೆ ಸಹಾಯ ಹಸ್ತ ಚಾಚುವೆ ಎಂದು ಭರವಸೆ ನೀಡಿದರು.
‘ಸಮ್ಮೇಳನದಿಂದ ಕನ್ನಡ ಭಾಷೆ ಅಭಿವೃದ್ಧಿ’
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಶ.ಗ.ನಯನಾತಾರಾ ಮಾತನಾಡಿ ‘ಹಿಂದೆ ಕೊಡಗಿನಲ್ಲಿ ಸಾಹಿತಿಗಳಿಲ್ಲ ಎಂದು ಮೂಗು ಮುರಿಯುತ್ತಿದ್ದರು. ಆದರೆ ಈಗ ಕೊಡಗಿನಲ್ಲಿ ಸಾಹಿತಿಗಳು ತುಂಬಿ ತುಳುಕುತ್ತಿದ್ದು ಮೂಗು ಮುರಿದವರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ’ ಎಂದರು. ಹಳ್ಳಿಗಳಲ್ಲಿ ನಡೆಯುವ ಇಂತಹ ಸಮ್ಮೇಳನದಿಂದ ಕನ್ನಡದ ಅಭಿವೃದ್ಧಿಯಾಗುತ್ತದೆ ಏಕತೆ ಮೂಡುತ್ತದೆ ಎಂದು ಹೇಳಿದರು.
‘ಕಾಯಬೇಕಾದವರೇ ಕನ್ನಡವ ಕೊಲ್ಲುತ್ತಿದ್ದಾರೆ’
ಮೈಸೂರಿನ ಸಾಹಿತಿ ಜಯಪ್ಪ ಹೊನ್ನಾಳಿ ಮಾತನಾಡಿ ‘ಕಾಯಬೇಕಾದ ಕನ್ನಡಿಗರೇ ಇಂದು ಕನ್ನಡವನ್ನು ಕೊಲ್ಲುತ್ತಿದ್ದಾರೆ. ಕನ್ನಡದ ನೆಲದಲ್ಲೇ ಕನ್ನಡವನ್ನು ಉಳಿಸಿ ಬೆಳೆಸಿ ಎಂದು ಕೇಳಿಕೊಳ್ಳುವ ಸ್ಥಿತಿ ಬಂದಿರುವುದು ದುರ್ದೈವ’ ಎಂದು ಬೇಸರ ವ್ಯಕ್ತಪಡಿಸಿದರು. ‘ಕೇರಳ ತಮಿಳುನಾಡಿಗೆ ಹೋದರೆ ಅಲ್ಲಿ ಅವರ ಭಾಷೆಯಲ್ಲಿ ಉತ್ತರಿಸುತ್ತಾರೆ. ಆದರೆ ನಾವು ನವೆಂಬರ್ ಕನ್ನಡಿಗರು. ಇದರ ಬದಲಿಗೆ ‘ನಾವೆಂಬರು ಕನ್ನಡಿಗರು’ ಅಥವಾ ‘ನಂಬರ್ ಒನ್ ’ಕನ್ನಡಿಗರಾಗಬೇಕು. ಭಾಷೆಯ ವಾರಸುದಾರರಾದ ನಮಗೆ ಅಭಿಮಾನ ಇರಬೇಕಲ್ಲವೇ’ ಎಂದು ಪ್ರಶ್ನಿಸಿದರು.
ಪುಸ್ತಕ ಪ್ರೀತಿಯ ಬೀಜ ಬಿತ್ತಿ: ಜಲಜಾ ಶೇಖರ್
‘ಡಿಜಿಟಲ್ ಸ್ಕ್ರೀನ್’ ಸಮಯ ಹೆಚ್ಚಳದಿಂದ ಮಕ್ಕಳಲ್ಲಿ ಹಿಂಸೆ ದ್ವೇಷದ ಗುಣಗಳ ಜೊತೆಗೆ ಎಲ್ಲವನ್ನು ಪ್ರತಿಸ್ಪರ್ಧಿಯಂತೆ ಭಾವಿಸುವ ಗುಣಗಳು ಹೆಚ್ಚಾಗುತ್ತಿವೆ. ಅವರಲ್ಲಿ ರಾಕ್ಷಸ ಪ್ರವೃತ್ತಿಯನ್ನು ಬೆಳೆಸುವ ಆನ್‌ಲೈನ್ ಗೇಮ್‌ಗಳು ಅಪಹಾಸ್ಯದ ಮೀಮ್ಸ್‌ಗಳು ತುಂಬಾ ಪರಿಣಾಮ ಬೀರುತ್ತಿವೆ. ಮಕ್ಕಳನ್ನು ಮನುಷ್ಯರನ್ನಾಗಿಸಲು ಪುಸ್ತಕ ಪ್ರೀತಿಯ ಬೀಜ ಬಿತ್ತಿರಿ. ಸಾಹಿತಿಗಳು ಬರೆದ ಪುಸ್ತಕಗಳನ್ನು ಕೊಂಡು ಓದಿರಿ’ ಎಂದು ಸಮ್ಮೇಳನಾಧ್ಯಕ್ಷೆ ಜಲಜಾ ಶೇಖರ್ ಕರೆ ನೀಡಿದರು.
ಅಪಘಾತವಾದಾಗ ಇಂದಿನ ಮಕ್ಕಳು ನಿರ್ಲಿಪ್ತರಾಗಿ ಅದನ್ನು ನೋಡುತ್ತಾರೆ. ಅವರಲ್ಲಿ ಮಾನವ ಸಹಜವಾದ ಅನುಕಂಪ ಮೂಡುವುದೇ ಇಲ್ಲ. ಮಕ್ಕಳಿಗೆ ವಯೋಸಹಜ ಅನುಕಂಪ ಪ್ರೀತಿಯನುಭೂತಿ ಕಡಿಮೆಯಾಗಲು ಕಾರಣ ಹೆಚ್ಚುತ್ತಿರುವ ಅವರ ‘ಸ್ಕೀನ್ ಸಮಯ’. ಮಕ್ಕಳಲ್ಲಿ ದಯೆ ಮತ್ತು ಜಗದ ಕಾರುಣ್ಯ ಮರೆಯಾಗುತ್ತಿರುವ ಬಗ್ಗೆ ನಾವೆಲ್ಲ ಕಾಳಜಿ ವಹಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.
‘ಅನ್ಯರಾಜ್ಯದಿಂದ ಬಂದು ನೆಲಸಿರುವವರಿಗೆ ಕನ್ನಡ ಕಲಿಯಲೇ ಬೇಕೆಂಬ ಅನಿವಾರ್ಯತೆಯನ್ನು ನಾವು ಸೃಷ್ಟಿಸಿಲ್ಲ. ಹರಕು-ಮುರುಕಾಗಿ ನಾವೇ ಅವರ ಭಾಷೆಯಲ್ಲಿ ಮಾತಾಡಿ ನಮಗೆಲ್ಲಾ ಭಾಷೆ ಗೊತ್ತು ಎಂದು ತೋರಿಕೆ ಕೊಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು. ಒಂದು ಭಾಷೆಯ ಅಳಿವು - ಉಳಿವು ನಿರ್ಧಾರವಾಗುವುದು ಆ ಭಾಷೆಯನ್ನು ಎಷ್ಟು ಬಳಸುತ್ತಿದ್ದಾರೆ? ಜನ-ಜೀವನವನ್ನು ಎಷ್ಟು ತುಂಬಿಕೊಂಡಿದೆ? ಭಾಷೆಗೆ ಎಷ್ಟು ಮಹತ್ವ ನೀಡುತ್ತಿದ್ದಾರೆ ಎಂಬುದರ ಮೇಲೆ ನಿಂತಿದೆ ಎಂದು ಪ್ರತಿಪಾದಿಸಿದರು. ‘ನಾವು ಎಲ್ಲಾ ಭಾಷೆಗಳನ್ನು ಕಲಿಯೋಣ. ಕನ್ನಡಕ್ಕೆ ಆದ್ಯತೆ ಕೊಡೋಣ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.