
ಸಮರ್ಥ ಕನ್ನಡಿಗರು ಸಂಸ್ಥೆಯಿಂದ 8 ವರ್ಷದಲ್ಲಿ 14 ಕಾರ್ಯಕ್ರಮ | ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ, ಚಿತ್ರಕಲೆ, ಗೀತೆ, ಸಮೂಹ ನೃತ್ಯ | ಹಲವು ಮಕ್ಕಳು ಭಾಗಿ
ಮಡಿಕೇರಿ: ಸಾಹಿತ್ಯದ ಗೊಡವೆ ಹೊಂದಿಲ್ಲದ ಮುಂದಿನ ಪೀಳಿಗೆ ಬಗ್ಗೆ ಆತಂಕವಾಗುತ್ತದೆ ಎಂದು ವೈದ್ಯ ಸಾಹಿತಿ ಡಾ. ನಡಿಬೈಲು ಉದಯಶಂಕರ್ ಹೇಳಿದರು.
ಇಲ್ಲಿನ ಓಂಕಾರಸದನದಲ್ಲಿ ಸಮಥ೯ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದ ವತಿಯಿಂದ ಆಯೋಜಿತ ನಿಮ್ಮ ಪ್ರತಿಭೆ - ನಮ್ಮ ವೇದಿಕೆ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಿಗೆ ಕರುನಾಡಿನ ಸಾಹಿತ್ಯ ಮತ್ತು ಸಾಂಸ್ಕೖತಿಕ ಮಹತ್ವ ತಿಳಿಸುವಲ್ಲಿ ಇಂತಹ ಸಾಂಸ್ಕೃತಿಕ ಪ್ರತಿಭಾ ವೇದಿಕೆಗಳು ಅಗತ್ಯ ಎಂದು ಅವರು ಪ್ರತಿಪಾದಿಸಿದರು.
ಸಾಹಿತ್ಯಕ್ಕೆ ಉತ್ತಮ ಮಾನವನನ್ನಾಗಿ ರೂಪಿಸುವ ಶಕ್ತಿಯಿದ್ದು ಸಾಹಿತ್ಯಾಭಿರುಚಿ ಇಲ್ಲದವನು ಪ್ರಾಣಿಗಳಿಗೆ ಸಮಾನ ಎಂದ ಅವರು ಸಾಹಿತ್ಯ ಪ್ರೀತಿಯಿಂದ ಉತ್ತಮ ಗುಣಗಳನ್ನು ಹೊಂದಲು ಸಾಧ್ಯವಿದೆ. ಹೀಗಾಗಿ, ಸಾಹಿತ್ಯಾಸಕ್ತಿಯುಳ್ಳವನು ಸಮಾಜದಲ್ಲಿ ಉತ್ತಮ ಪ್ರಜೆಯಾಗುತ್ತಾನೆ ಎಂದರು.
ಶ್ರೀಮಂತ ಸಂಸ್ಕೖತಿ, ಸಾಹಿತ್ಯವನ್ನು ಹೊಂದಿರುವ ಕನ್ನಡ ಭಾಷೆಯಲ್ಲಿ ಪರಿಣತಿ ಹೊಂದಿದ ಅನೇಕರು ವಿಶ್ವವ್ಯಾಪಿ ಗಣ್ಯ ಸ್ಥಾನ ಹೊಂದಿದ್ದಾರೆ. ಕನ್ನಡ ನಾಡಿನ ಸಮರ್ಥರು ಸಾಹಿತ್ಯ, ಕ್ರೀಡೆ, ರಾಜಕೀಯ, ಸಾಮಾಜಿಕ, ಸಾಂಸ್ಕೖತಿಕ ರಂಗದಲ್ಲಿಯೂ ಖ್ಯಾತಿ ಪಡೆದಿದ್ದಾರೆ ಎಂದು ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಬಿ. ರಾಘವ ಮಾತನಾಡಿ, ‘ಇತ್ತೀಚಿನ ಸಿನಿಮಾಗಳಲ್ಲಿ ಕನ್ನಡ ಭಾಷೆಯ ಬಳಕೆ ಸಮರ್ಪಕವಾಗಿ ಆಗದೇ ಕನ್ನಡದ ಕಗ್ಗೊಲೆಯಾಗುತ್ತಿದ್ದು, ಇದನ್ನು ತಡೆಗಟ್ಟಬೇಕಾಗಿದೆ’ ಎಂದು ಅವರು ತಿಳಿಸಿದರು.
ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿಯೂ ಕನ್ನಡ ಭಾಷೆಯ ಬಳಕೆ ಹೆಚ್ಚಾಗುವ ಮೂಲಕ ಮಕ್ಕಳಲ್ಲಿ ಕನ್ನಡದ ಮಹತ್ವದ ಅರಿವಾಗಬೇಕು ಎಂದು ಹೇಳಿದರು.
‘ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಜನ ಬಳಕೆ ಮಾಡುವ ಭಾಷೆಯಾಗಿ ಕನ್ನಡಕ್ಕೆ 29ನೇ ಸ್ಥಾನವಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ನಾವೆಲ್ಲಾ ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡದ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಸಮರ್ಥ ಕನ್ನಡಿಗರು ಸಂಸ್ಥೆಯ ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ ಮಾತನಾಡಿ, ‘2017ರಲ್ಲಿ ಸ್ಥಾಪಿಸಿದ ಸಮರ್ಥ ಕನ್ನಡಿಗರು ಸಂಸ್ಥೆ ರಾಜ್ಯವ್ಯಾಪಿ ನೂರಾರು ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಪ್ರೀತಿಯನ್ನು ಜನರಲ್ಲಿ ಮೂಡಿಸುವ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.
ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದ ಸಂಚಾಲಕಿ ಕೆ.ಜಯಲಕ್ಷ್ಮಿ ಮಾತನಾಡಿ, ‘ಕಳೆದ 8 ವರ್ಷಗಳಿಂದ ಕೊಡಗಿನಲ್ಲಿ 14 ಪ್ರಮುಖ ಕಾರ್ಯಕ್ರಮಗಳನ್ನು ಸಂಸ್ಥೆಯಿಂದ ಆಯೋಜಿಸಲಾಗಿದೆ. ನೂರಾರು ಪ್ರತಿಭೆಗಳಿಗೆ ವೇದಿಕೆ ನೀಡಲಾಗಿದೆ. ಹೀಗಿದ್ದರೂ, ಸಾರ್ವಜನಿಕವಾಗಿ ಇಂತಹ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಮತ್ತಷ್ಟು ಪ್ರೋತ್ಸಾಹ ಅಗತ್ಯ’ ಎಂದು ಮನವಿ ಮಾಡಿದರು.
ಮಕ್ಕಳಿಂದ ಛದ್ಮವೇಷ ಸ್ಪರ್ಧೆ, ಚಿತ್ರಕಲೆ, ಗೀತೆ, ಸಮೂಹ ನೃತ್ಯ ಮೊದಲಾದ ಸ್ಪರ್ಧೆಗಳು ನಡೆದವು.
ಸಂಸ್ಥೆಯ ಸದಸ್ಯರಾದ ಸವಿತಾ ರಾಕೇಶ್, ಶಾಂತಿ ಅಚ್ಚಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.