ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ ನೆರವಿನ ಭರವಸೆ: ಶಾಸಕ ಮಂತರ್‌ಗೌಡ

ಸಹಾಯ ಮಾಡುವೆವು ಎಂದ ಸಚಿವರು, ಶಾಸಕರು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 2:48 IST
Last Updated 24 ನವೆಂಬರ್ 2025, 2:48 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ ಎಲ್ಲ ಬಗೆಯ ಸಹಕಾರ ನೀಡುವುದಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಭರವಸೆ ನೀಡಿದರೆ, ಈ ಸಾಲಿನಲ್ಲಿ ₹ 25 ಲಕ್ಷ ಹಾಗೂ ಮುಂದಿನ ಸಾಲಿನಲ್ಲಿ ₹ 25 ಲಕ್ಷ ಅನುದಾನ ನೀಡಲಾಗುವುದು ಎಂದು ಶಾಸಕ ಡಾ.ಮಂತರ್‌ಗೌಡ ಪ್ರಕಟಿಸಿದರು.

ADVERTISEMENT

ಈಚೆಗೆ ಸಚಿವರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನ ಹೊರ ಬಿತ್ತು.

‘ಜಿಲ್ಲೆಯ ಶಾಸಕರನ್ನು ಒಳಗೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸರ್ಕಾರದಿಂದ ಅನುದಾನ ಕೊಡಿಸುವೆ ಹಾಗೂ ಜಿಲ್ಲೆಯ ಎಪಿಎಂಸಿ, ನಗರಸಭೆ, ಪುರಸಭೆ ಮತ್ತು ಗ್ರಾಮ ಪಂವಾಯಿತಿಗಳಿಂದಲೂ ಆರ್ಥಿಕ ನೆರವು ಸಿಗುವಂತೆ ಮಾಡಲು ಶ್ರಮಿಸುವೆ’ ಎಂದು ಸಚಿವ ಎನ್.ಎಸ್.ಭೋಸರಾಜು ಹೇಳಿದರು.

ಶಾಸಕ ಎ.ಎಸ್ ಪೊನ್ನಣ್ಣ ಸಹ ‘ನನ್ನ ಅನುದಾನದೊಂದಿಗೆ ವೈಯುಕ್ತಿಕ ಆರ್ಥಿಕ ಸಹಾಯ ಮಾಡುವೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಟಿ.ಪಿ.ರಮೇಶ್, ‘ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಿ.ಜೆ ಪದ್ಮನಾಭ ಅವರ ಪ್ರಯತ್ನದಿಂದ 60ಸೆಂಟು ಜಾಗವನ್ನು ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದೆ. 2014ರಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಳಿದಿದ್ದ ₹ 10 ಲಕ್ಷವನ್ನು ಕಟ್ಟಡ ನಿರ್ಮಾಣಕ್ಕಾಗಿ ಕೇಂದ್ರ ಕಚೇರಿಯಲ್ಲಿ ಠೇವಣಿಯಾಗಿ ಇಡಲಾಗಿದೆ. ಅದು ಈಗ ಅಂದಾಜು ₹ 15 ಲಕ್ಷವಾಗಿದ್ದು ಉಳಿದ ಹಣವನ್ನು ಸರ್ಕಾರದಿಂದ ಅನುದಾನ ಪಡೆಯುವ ಮೂಲಕ ಹಾಗೂ ಕನ್ನಡ ಅಭಿಮಾನಿಗಳಿಂದ ದೇಣಿಗೆ ಪಡೆಯುವ ಮೂಲಕ ಭವನ ನಿರ್ಮಾಣ ಮಾಡಬೇಕಿದೆ’ ಎಂದು ತಿಳಿಸಿದರು.

ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಹುದಿನದ ಕನಸಾಗಿದ್ದ ಭವನ ನಿರ್ಮಾಣಕ್ಕೆ ನಾಂದಿ ಹಾಡಲಾಗುತ್ತಿದ್ದು, ಎಲ್ಲರ ಸಹಕಾರದೊಂದಿಗೆ ಭವನ ನಿರ್ಮಾಣ ಕಾರ್ಯ ಮಾಡುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟರಾಜ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.