ADVERTISEMENT

ಮಡಿಕೇರಿ: ಖರೀದಿಗೆ ಷರತ್ತು: ರೈತರು ಕಂಗಾಲು

ಭತ್ತ ಬೆಳೆದ ರೈತರಿಗೆ ‘ಫ್ರೂಟ್ಸ್‌’ ಸಂಕಷ್ಟ, ಕಣದಲ್ಲಿದ್ದ ಭತ್ತ ಕಾಡಾನೆ ಪಾಲು

ಅದಿತ್ಯ ಕೆ.ಎ.
Published 7 ಜನವರಿ 2020, 16:11 IST
Last Updated 7 ಜನವರಿ 2020, 16:11 IST
ಭತ್ತದ ಒಕ್ಕಣೆಯ ದೃಶ್ಯ
ಭತ್ತದ ಒಕ್ಕಣೆಯ ದೃಶ್ಯ   

ಮಡಿಕೇರಿ: ಭತ್ತದ ಕೊಯ್ಲು ಬಹುತೇಕ ಪೂರ್ಣಗೊಂಡಿದ್ದರೂ ರಾಜ್ಯದ ಬಹುತೇಕ ಜಿಲ್ಲೆಗಳ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಕೊಡಗು ಜಿಲ್ಲೆಯಲ್ಲೂ ಖರೀದಿ ಪ್ರಕ್ರಿಯೆ ಆರಂಭವಾಗದೆ ಭತ್ತ ಬೆಳೆದ ರೈತರು ಕಂಗಾಲಾಗಿದ್ದಾರೆ. ನಷ್ಟದ ಭೀತಿ ಎದುರಿಸುತ್ತಿದ್ದಾರೆ.

ಹೊಸ ತಂತ್ರಾಂಶ, ಆನ್‌ಲೈನ್‌ ನೋಂದಣಿ ಕಾರಣಕ್ಕೆ ಭತ್ತದ ಕೇಂದ್ರ ತೆರೆಯಲು ವಿಳಂಬವಾಗುತ್ತಿದೆ. ರೈತರು ಸಿಕ್ಕಷ್ಟು ದರಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಭತ್ತ ಮಾರಾಟ ಮಾಡುತ್ತಿದ್ದಾರೆ. ಇನ್ನು ಕೊಡಗಿನ ದಕ್ಷಿಣ ಭಾಗದ ಹಲವು ಗ್ರಾಮಗಳ ರೈತರು ಖರೀದಿ ಪ್ರಕ್ರಿಯೆ ಆರಂಭಗೊಳ್ಳುವ ನಿರೀಕ್ಷೆಯಿಂದ ಒಕ್ಕಲು ಕಣದಲ್ಲಿ ಭತ್ತವನ್ನು ಚೀಲಗಳಿಗೆ ತುಂಬಿಸಿ ಇಟ್ಟಿದ್ದರು. ಅದು ಈಗ ಕಾಡಾನೆಗಳ ಪಾಲಾಗುತ್ತಿದೆ. ಇದರಿಂದ ಆತಂಕಗೊಂಡಿರುವ ಕೃಷಿಕರು, ಕ್ವಿಂಟಲ್‌ ಭತ್ತಕ್ಕೆ ₹ 1,100ರಿಂದ ₹ 1,200ಕ್ಕೇ ಮಾರಾಟ ಮಾಡಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ.

ಸರ್ಕಾರವು, ಸಾಮಾನ್ಯ ಭತ್ತಕ್ಕೆ ₹ 1,815, ಗ್ರೇಡ್‌ ‘ಎ’ ಭತ್ತಕ್ಕೆ ₹ 1,825 ದರ ನಿಗದಿ ಪಡಿಸಿ ಖರೀದಿ ಕೇಂದ್ರದ ಮೂಲಕ ಭತ್ತ ಖರೀದಿಸುವ ಭರವಸೆ ನೀಡಿತ್ತು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು, ಅಕ್ಕಿ ಗಿರಣಿ ಹಾಗೂ ರೈತರ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಬೇಕಿತ್ತು. ಆದರೆ, ‘ಫ್ರೂಟ್ಸ್‌’ ಎಂಬ ಹೊಸ ವ್ಯವಸ್ಥೆ ಅಡಿ ನೋಂದಣಿ ಪೂರ್ಣಗೊಳ್ಳದ ಕಾರಣಕ್ಕೆ ಖರೀದಿ ಆರಂಭವಾಗಿಲ್ಲ.

ADVERTISEMENT

‘ಡಿಸೆಂಬರ್‌ ಮಧ್ಯದಲ್ಲೇ ಖರೀದಿ ಪ್ರಕ್ರಿಯೆ ಆರಂಭಿಸಬೇಕಿತ್ತು. ಜಿಲ್ಲೆಯ ಮೂರು ಎ.ಪಿ.ಎಂ.ಸಿಯಲ್ಲಿ ಕೇಂದ್ರ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ನೋಂದಣಿ ಸಮಸ್ಯೆಯಾಗಿ ಕಾಡುತ್ತಿದೆ’ ಎಂದು ಪೊನ್ನಂಪೇಟೆ ಸಮೀಪದ ಬಾಳೆಲೆ ರೈತ ತಮ್ಮಯ್ಯ ನೋವು ತೋಡಿಕೊಂಡರು.

‘ಫ್ರೂಟ್ಸ್‌’ ಐ.ಡಿ

ಪ್ರತಿವರ್ಷ ಖರೀದಿ ಕೇಂದ್ರಕ್ಕೆ ರೈತರು ಪಹಣಿ, ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆಯ ವಿವರ ಸಲ್ಲಿಸಿದ್ದರೆ ಸಾಕಿತ್ತು. ಆದರೆ, ಈ ವರ್ಷದಿಂದ ಖರೀದಿ ಕೇಂದ್ರಕ್ಕೆ ಭತ್ತ ಮಾರಾಟ ಮಾಡುವುದಿದ್ದರೆ ಕೃಷಿ ಇಲಾಖೆ ನೀಡುವ ‘ಫ್ರೂಟ್ಸ್‌ ಐ.ಡಿ’ ತೋರಿಸಬೇಕು. ಈ ಐ.ಡಿಯಲ್ಲಿ ಏಕೀಕೃತ ಫಲಾನುಭವಿ ಮಾಹಿತಿ ಇರುತ್ತದೆ. ಐ.ಡಿ ಪಡೆದ ರೈತರು ನೋಂದಣಿಗೆ ಬರುತ್ತಿದ್ದಾರೆ. ಆದರೆ, ಕೃಷಿ ಇಲಾಖೆ ನೀಡಿರುವ ಐ.ಡಿಯಲ್ಲಿ ಕೆಲವು ರೈತರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ಪಹಣಿಯ ವಿವರ, ಬೆಳೆದ ಬೆಳೆಯ ಮಾಹಿತಿಯು ತಂತ್ರಾಂಶದಲ್ಲಿ ತಾಳೆಯಾಗುತ್ತಿಲ್ಲ. ಕೆಲವು ರೈತರ ಮಾಹಿತಿಯಯನ್ನೇ ತೋರಿಸುತ್ತಿಲ್ಲ. ಇದು ಸಮಸ್ಯೆಗೆ ಕಾರಣವಾಗಿದ್ದು ಪ್ರಕ್ರಿಯೆ ವಿಳಂಬವಾಗುತ್ತಿದೆ. ‘ಫ್ರೂಟ್ಸ್‌ ಐ.ಡಿ’ ಸಮಸ್ಯೆಯನ್ನು ಕೃಷಿ ಇಲಾಖೆ ಅಧಿಕಾರಿಗಳೇ ಸರಿಪಡಿಸಬೇಕು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಪ್ರತಿವರ್ಷ ರೈತರ ಹೆಸರಿನಲ್ಲಿ ವ್ಯಾಪಾರಸ್ಥರು ಖರೀದಿ ಕೇಂದ್ರಕ್ಕೆ ಭತ್ತ ತಂದು ಲಾಭಗಳಿಸುತ್ತಿದ್ದರು’ ಎಂದು ಅಧಿಕಾರಿ ಒಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.