ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾನುವಾರ ಮಳೆಯ ಪ್ರಮಾಣ ಗಣನೀಯವಾಗಿ ತಗ್ಗಿದ್ದರೂ, ಗಾಳಿಯ ರಭಸ ಕಡಿಮೆಯಾಗಿಲ್ಲ. ಮಡಿಕೇರಿ ನಗರ ಸೇರಿದಂತೆ ಹಲವೆಡೆ ಹೆಚ್ಚು ರಭಸದಿಂದ ಆಗಾಗ್ಗೆ ಗಾಳಿ ಬೀಸುತ್ತಿದೆ. ಇದರಿಂದ ಹಲವೆಡೆ ವಿದ್ಯುತ್ ಕಂಬಗಳು ಬೀಳುವುದು, ಮನೆಗಳ ಶೀಟ್‌ಗಳು ಹಾರಿ ಹೋಗುವುದೂ ನಿಂತಿಲ್ಲ.
ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 136 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಈ ಮೂಲಕ ಗಾಳಿಯಿಂದಾಗುವ ಅನಾಹುತಗಳು ಇನ್ನೂ ನಿಂತಿಲ್ಲ. ಆದರೆ, ಶುಕ್ರವಾರಕ್ಕೆ ಹೋಲಿಸಿದರೆ ಗಾಳಿಯ ಆರ್ಭಟ ಕೊಂಚ ನಿಯಂತ್ರಣಕ್ಕೆ ಬಂದಿದೆ. ಶೀತಗಾಳಿಯೂ ಅಧಿಕವಾಗಿದ್ದು, ಎಲ್ಲೆಡೆ ಶೀತಮಯ ವಾತಾವರಣ ನಿರ್ಮಾಣಗೊಂಡಿದೆ.
ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲೂ ಗಣನೀಯ ಇಳಿಕೆಯಾಗಿದೆ. ಶನಿವಾರ 11,860 ಕ್ಯುಸೆಕ್‌ನಷ್ಟು ನೀರು ಹರಿದು ಬರುತ್ತಿತ್ತು. ಶನಿವಾರ ರಾತ್ರಿ 11ರ ಹೊತ್ತಿಗೆ 9,980ಕ್ಕೆ ಇಳಿಕೆಯಾಯಿತು. ಭಾನುವಾರ ಬೆಳಿಗ್ಗೆ ಇದರ ಪ್ರಮಾಣ ಮತ್ತೆ 10,569 ಕ್ಯುಸೆಕ್‌ಗೆ ಏರಿಕೆಯಾಯಿತು. ಆದರೆ, ಸಂಜೆ 6 ಗಂಟೆ ಹೊತ್ತಿಗೆ 8,800 ಕ್ಯುಸೆಕ್‌ಗೆ ಇಳಿಕೆಯಾಯಿತು. ಎಲ್ಲೆಡೆ ಮಳೆಯ ಪ್ರಮಾಣ ಇಳಿಕೆಯಾಗಿರುವುದರಿಂದ ಹಾಗೂ ಜಲಾಶಯ ಭರ್ತಿಯಾಗಲು ಇನ್ನೂ 4 ಅಡಿಗಳು ಬಾಕಿ ಇರುವುದರಿಂದ ನದಿಗೆ ಕೇವಲ 3,900 ಹಾಗೂ ಕಾಲುವೆಗಳಿಗೆ 200 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದ ಹಾರಂಗಿ ಮತ್ತು ಕಾವೇರಿ ನದಿಗಳಲ್ಲಿ ಪ್ರವಾಹ ಇಳಿಮುಖವಾಗಿದೆ. ನದಿ ದಂಡೆಯ ನಿವಾಸಿಗಳು ನಿರಾಳರಾಗಿದ್ದಾರೆ.
ಉಭಯ ಶಾಸಕರಾದ ಡಾ.ಮಂತರ್‌ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರು ತಮ್ಮ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಳೆ ಹಾನಿ ಕುರಿತು ಸಮೀಕ್ಷೆ ಕೈಗೊಂಡರು.
ಡಾ.ಮಂತರ್ ಗೌಡ ಅವರು ಮಕ್ಕಂದೂರು ಹಟ್ಟಿಹೊಳೆ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಎ.ಎಸ್.ಪೊನ್ನಣ್ಣ ಅವರು ಮಂಚಳ್ಳಿ - ಶ್ರೀಮಂಗಲ ರಸ್ತೆಬದಿಯಲ್ಲಿ ಭೂಕುಸಿತದಿಂದ ಹಾನಿಯಾದ ರಸ್ತೆಯನ್ನು ವೀಕ್ಷಣೆ ಮಾಡಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಗ್ರಾಮಸ್ಥರು ಭಾಗವಹಿಸಿದ್ದರು.
ನಾಪೋಕ್ಲು: ತಗ್ಗಿದ ಕಾವೇರಿ ನದಿ ಪ್ರವಾಹ
ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ 2 ದಿನಗಳಿಂದ ಮಳೆ ಇಳಿಮುಖವಾಗಿದ್ದು ಕಾವೇರಿ ನದಿ ಪ್ರವಾಹ ತಗ್ಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ಸಾಧಾರಣ ಮಳೆಯಾಗಿದೆ. ಬಿರುಸಿನ ಮಳೆಯಿಂದ ಜಲಾವೃತಗೊಂಡಿದ್ಧ ನಾಪೋಕ್ಲು -ಮೂರ್ನಾಡು ಚೆರಿಯಪರಂಬು ಸಂಪರ್ಕ ರಸ್ತೆಯಲ್ಲಿನ ಪ್ರವಾಹ ಇಳಿಮುಖಗೊಂಡಿದ್ದು ಸಂಚಾರ ಸಹಜ ಸ್ಥಿತಿಗೆ ಬಂದಿದೆ.
ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕರಸ್ತೆ ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆಯಲ್ಲಿ ಸಂಚಾರ ಸಾಧ್ಯವಾಗಿದೆ. ಸಮೀಪದ ಬೇತು ಗ್ರಾಮದ ಕಾರೆಕಾಡು ನಿವಾಸಿ ಬುಶ್ರ ಅಬ್ದುಲ್ಲಾ ಅವರ ಮನೆಯ ಚಾವಣಿ ಕುಸಿದು ಬಿದ್ದಿದ್ದು ಮನೆಯಲ್ಲಿದ್ದ ಬುಶ್ರ ಮತ್ತು ಆಕೆಯ ಮಗಳು ಮನೆಯಿಂದ ಹೊರಗೆ ಧಾವಿಸಿದ್ದು ಕ್ಷಣಮಾತ್ರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮಗಳ ಕೈಗೆ ಅಲ್ಪ ಪ್ರಮಾಣದ ಪೆಟ್ಟಾಗಿದೆ ಎಂದು ಬುಶ್ರ ತಿಳಿಸಿದರು.
ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಗ್ರಾಮ ಪಂಚಾಯಿತಿ ಸದಸ್ಯ ಕುಸು ಕುಶಾಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮೀಪದ ಹಳೆ ತಾಲೂಕಿನ ಅಬುಬಕರ್ ಎಂಬವರ ಹೋಟೆಲ್ ಚಾವಣಿ ಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.