ADVERTISEMENT

ನಾಪೋಕ್ಲು | ಬಿಡುವು ಕೊಟ್ಟ ಮಳೆ: ನಾಟಿ ಕೆಲಸ ಬಿರುಸು

ಬಲ್ಲಮಾವಟಿ, ನೆಲಜಿ, ಪೇರೂರುಗಳಲ್ಲಿ ರೈತರ ಸಂತಸ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 4:49 IST
Last Updated 14 ಆಗಸ್ಟ್ 2024, 4:49 IST
ನಾಪೋಕ್ಲು ಸಮೀಪದ ಕಕ್ಕಬ್ಬೆಯಲ್ಲಿ ಕಣಿಯರ ನಾಣಯ್ಯ ಅವರ ಗದ್ದೆಯಲ್ಲಿ ಮಂಗಳವಾರ ನಾಟಿ ಕಾರ್ಯ ಬಿರುಸಿನಿಂದ ಸಾಗಿತು. 
ನಾಪೋಕ್ಲು ಸಮೀಪದ ಕಕ್ಕಬ್ಬೆಯಲ್ಲಿ ಕಣಿಯರ ನಾಣಯ್ಯ ಅವರ ಗದ್ದೆಯಲ್ಲಿ ಮಂಗಳವಾರ ನಾಟಿ ಕಾರ್ಯ ಬಿರುಸಿನಿಂದ ಸಾಗಿತು.    

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಒಂದು ವಾರದಿಂದ ಸತತವಾಗಿದ್ದ ಬಿದ್ದ ಮಳೆ ಬಿಡುವು ನೀಡಿದ್ದು ಈ ಭಾಗದಲ್ಲಿ ಭತ್ತದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

ಕಾಫಿ, ಕಾಳು ಮೆಣಸು ಕೃಷಿ ಜೊತೆಗೆ ಭತ್ತದ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಕೃಷಿಕರು ಅಲ್ಲಲ್ಲಿ ನಾಟಿ ಕಾರ್ಯದಲ್ಲಿ ತೊಡಗಿರುವ ದೃಶ್ಯ ಮಂಗಳವಾರ ಕಂಡು ಬಂತು. ನಾಟಿ ಕೆಲಸಕ್ಕಾಗಿ ಬಹುತೇಕ ಕಡೆಗಳಲ್ಲಿ ಯಂತ್ರೋಪಕರಣಗಳನ್ನು ಬಳಸಿ ರೈತರು ಗದ್ದೆ ಹದ ಮಾಡುತ್ತಿದ್ದರು.

 ಮಳೆಯಿಂದಾಗಿ ಕಳೆದ ಕೆಲವು ದಿನಗಳಿಂದ ನಾಟಿ ಕಾರ್ಯ ಸ್ಥಗಿತಗೊಂಡಿತ್ತು. ಸಮೀಪದ ಕಕ್ಕಬ್ಬೆಯಲ್ಲಿ ಕಣಿಯರ ನಾಣಯ್ಯರ ಗದ್ದೆಯಲ್ಲಿ ನಾಟಿ ಬಿರುಸಿನಿಂದ ಸಾಗಿತ್ತು. ವಿವಿದೆಡೆಗಳಲ್ಲಿ ಸಸಿಮಡಿಗಳಿಂದ ಅಗೆ ತೆಗೆಯುವ ಕಾರ್ಯ, ಉಳುಮೆ ಮಾಡುವುದು ನಡೆಯುತ್ತಿದೆ.

ADVERTISEMENT

ಕಾರ್ಮಿಕರ ಕೊರತೆ ನಡುವೆಯೂ ಸ್ಥಳೀಯ ಕಾರ್ಮಿಕರ ಜೊತೆ ಹೊರಗಿನಿಂದ ಬಂದ ಕಾರ್ಮಿಕರನ್ನು  ಒಗ್ಗೂಡಿಸಿ ನಾಟಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೂಲಿಕಾರ್ಮಿಕರ ಅಭಾವದಿಂದಾಗಿ ಬಹುತೇಕರು ಹಿಂದಿನ ವರ್ಷಗಳಲ್ಲಿ ಭತ್ತದ ಕೃಷಿ ಕೈಬಿಟ್ಟಿದ್ದರು.

ಅಲ್ಲಲ್ಲಿ ಕಾಡು ಪ್ರಾಣಿಗಳ ಉಪಟಳವೂ ರೈತರನ್ನು ಹೈರಾಣು ಮಾಡಿತ್ತು. ಈ ವರ್ಷ ಮತ್ತೆ ಭತ್ತದ ಕೃಷಿಯತ್ತ ರೈತರು ಒಲವು ತೋರಿದ್ದಾರೆ. ಸಮೀಪದ ಬಲ್ಲಮಾವಟಿ, ನೆಲಜಿ, ಪೇರೂರು, ಪುಲಿಕೋಟು, ಹೊದ್ದೂರು, ಬಲಮುರಿ ಗ್ರಾಮಗಳಲ್ಲಿ ರೈತರು ಗದ್ದೆಗಳಲ್ಲಿ ನಾಟಿ ಸಿದ್ಧತೆಯಲ್ಲಿ ತೊಡಗಿರುವುದು ಕಂಡು ಬಂತು.

ಗ್ರಾಮೀಣ ಪ್ರದೇಶಗಳಾದ ಸಮೀಪದ ಬೇತು, ಕೈಕಾಡು, ಪಾರಾಣೆ ನೆಲಜಿ, ಹೊದ್ದೂರು, ಬಲಮಾವಟಿ ಗ್ರಾಮಗಳಲ್ಲಿ  ಭತ್ತದ ಗದ್ದೆಯ ಉಳುಮೆ ಕಾರ್ಯ ನಡೆಯುತ್ತಿದೆ. ಈ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಭತ್ತದ ಸಸಿಮಡಿಗಳಿಂದ ಅಗೆ ತೆಗೆಯುವ ಕೆಲಸ ನಡೆಯುತ್ತಿದೆ. 

‘ಮಳೆ ಬಿಡುವು ಕೊಟ್ಟಿರುವುದು ಭತ್ತದ ಕೃಷಿಗೆ ಉತ್ತೇಜನಕಾರಿಯಾಗಿದೆ. ಕಾರ್ಮಿಕರನ್ನು ಒಗ್ಗೂಡಿಸಿ ಸಸಿಮಡಿಯಿಂದ ಅಗೆ ತೆಗೆಯುತ್ತಿದ್ದೆವೆ. ಒಂದೆರಡು ದಿನಗಳಲ್ಲಿ ನಾಟಿ ಕೆಲಸ ಪೂರ್ಣಗೊಳ್ಳಲಿದೆ’ ಎಂದು ಬಲ್ಲಮಾವಟಿ ಗ್ರಾಮದ ಶಿವಪ್ರಸಾದ್ ಹೇಳಿದರು.

‘ಸದ್ಯ ಭತ್ತದ ಕೃಷಿಗೆ ಕಾರ್ಮಿಕರ ಕೊರತೆ ಇಲ್ಲ. ಕೊಯ್ಲು ಮಾಡುವ ಅವಧಿಯಲ್ಲಿ ಕಾರ್ಮಿಕರ ಕೊರತೆ  ಕಾಡಲಿದೆ. ರೈತರು ಆ ಅವಧಿಯಲ್ಲಿ ಕಾಳಜಿ ವಹಿಸಿದರೆ ಭತ್ತದ ಕೃಷಿ ಲಾಭದಾಯಕ’ ಎಂದರು.

ಭತ್ತದ ಬಿತ್ತನೆ ಸಂದರ್ಭದಲ್ಲಿ ಸುರಿದ ಧಾರಾಕಾರ ಮಳೆಯಿಂದ ಬಿತ್ತನೆ ಮಾಡಿದ್ದ ಭತ್ತ ಕೊಚ್ಚಿಹೋಗಿ ಪೈರುಗಳು ನಾಶವಾಗಿವೆ. ಉಳುಮೆ ಮಾಡಿದ ಗದ್ದೆಗಳನ್ನು ಹಾಗೆಯೇ ಬಿಟ್ಟಿದ್ದೇವೆ. ನಾಟಿ ಕೆಲಸಕ್ಕೆ ಪೈರುಗಳು ಸಿಗುತ್ತಿಲ್ಲ. ಭತ್ತದ ಕೃಷಿ ಕೈಗೊಳ್ಳುವ ಆಸಕ್ತಿ ಇದ್ದರೂ ಈ ಬಾರಿ ಅನಿವಾರ್ಯವಾಗಿ ನಾಟಿ ಕೆಲಸ ಮಾಡಲಾಗುತ್ತಿಲ್ಲ ಎಂದು ನಾಪೋಕ್ಲುವಿನ ಉದಯಶಂಕರ್ ಬೇಸರ ವ್ಯಕ್ತಪಡಿಸಿದರು.

ಪ್ರವಾಹ ಉಂಟಾಗಬಹುದೆಂದು ಆತಂಕದಲ್ಲಿ ಕಾವೇರಿ ನದಿತಟದ ಗದ್ದೆಗಳಲ್ಲಿ ಈಚೆಗೆ ಬಿತ್ತನೆ ಮಾಡಲಾಗಿದೆ. ಕೆಲವು ದಿನಗಳ ಬಳಿಕ ಆ ಭಾಗಗಳಲ್ಲಿ ನಾಟಿ ಕೆಲಸ ಪೂರ್ಣಗೊಳ್ಳಲಿದೆ.

ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಮಂಗಳವಾರ ಭತ್ತದ ಸಸಿಮಡಿಗಳಿಂದ ಅಗೆ ತೆಗೆಯುವ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದರು.
ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ಸಿದ್ಧವಾಗಿರುವ  ಭತ್ತದ ಸಸಿಮಡಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.