ADVERTISEMENT

ಅಕ್ಷರ ಜಾತ್ರೆಗೆ ಮೆರವಣಿಗೆ ಸಂಭ್ರಮ

ಸಿ.ಎಸ್.ಸುರೇಶ್
Published 22 ಡಿಸೆಂಬರ್ 2018, 19:44 IST
Last Updated 22 ಡಿಸೆಂಬರ್ 2018, 19:44 IST
ನಾಪೋಕ್ಲಿನಲ್ಲಿ ಶನಿವಾರ ನಡೆದ ಕೊಡಗು ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಸಾಗಿ ಬಂದರು
ನಾಪೋಕ್ಲಿನಲ್ಲಿ ಶನಿವಾರ ನಡೆದ ಕೊಡಗು ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಸಾಗಿ ಬಂದರು   

ನಾಪೋಕ್ಲು: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆರಂಭಗೊಂಡ ಅಕ್ಷರ ಜಾತ್ರೆಗೆ ಅದ್ಧೂರಿ ಮೆರವಣಿಗೆಯು ವಿಶಿಷ್ಟ ಮೆರುಗು ತಂದುಕೊಟ್ಟಿತು.

ಪಟ್ಟಣ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೂರ್ಣಕುಂಭ ಹೊತ್ತ ಮಹಿಳೆಯರು, ಸಂಘ–ಸಂಸ್ಥೆಗಳ ಕಲಾವಿದರು, ಕನ್ನಡ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡ ಕಹಳೆಯನ್ನು ಮೊಳಗಿಸಿದರು.

ಇಲ್ಲಿನ ಅಂಕುರ್ ಪಬ್ಲಿಕ್ ಶಾಲೆಯ ಆವರಣದಿಂದ ಆರಂಭಗೊಂಡ ಮೆರವಣಿಗೆ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಪಟ್ಟಣದುದ್ದಕ್ಕೂ ಸಾಗಿತು. 200ಕ್ಕೂ ಅಧಿಕ ವಿದ್ಯಾರ್ಥಿಗಳು ಉದ್ದದ ಕನ್ನಡ ಧ್ವಜವನ್ನು ಎತ್ತಿ ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದು ಗಮನ ಸೆಳೆಯಿತು. ವಿದ್ಯಾರ್ಥಿಗಳು ತನು ಕನ್ನಡ ನುಡಿ ಕನ್ನಡ ಮನ ಕನ್ನಡ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.

ADVERTISEMENT

ಡೊಳ್ಳುಕುಣಿತ, ಕಾಪಾಳ ವೇಷಧಾರಿಗಳು, ಗೊಂಬೆ ಕುಣಿತ ನೋಡುಗರ ಕಣ್ಮನ ತಣಿಸಿದವು.

ತಾಯಿ ಭುವನೇಶ್ವರಿಯ ಸ್ತಬ್ಧಚಿತ್ರ ಗಮನ ಸೆಳೆಯಿತು. ಕಾವೇರಿ ಕಲಾತಂಡದ ಸ್ತಬ್ಧಚಿತ್ರ, ಕರ್ನಾಟಕ ಪಬ್ಲಿಕ್ ಶಾಲೆಯ ಸ್ತಬ್ಧಚಿತ್ರ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸ್ತಬ್ಧಚಿತ್ರಗಳು ಆಕರ್ಷಕವಾಗಿ ಮೂಡಿಬಂದವು.

ಅಂಕುರ್ ಪಬ್ಲಿಕ್ ಶಾಲೆ, ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆ, ಸೇಕ್ರೆಡ್ ಹಾರ್ಟ್‌ ವಿದ್ಯಾಸಂಸ್ಥೆ, ಚೆರಿಯಪರಂಬು, ಬೇತು, ನಾಪೋಕ್ಲು ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ವಿದ್ಯಾರ್ಥಿಗಳು, ಆಟೊ ಚಾಲಕರ ಮತ್ತು ವಾಹನ ಮಾಲಿಕರ ಸಂಘದ ಸದಸ್ಯರು, ಬಾಳೋಪಾಟ್ ತಂಡದ ಕಲಾವಿದರು, ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಗೂ ಮಲೆಯಾಳಿ ಸಂಘದ ಸದಸ್ಯರು ಮೆರವಣಿಗೆಗೆ ಕಳೆ ತಂದರು.

ಸಮ್ಮೇಳನ ನಡೆಯುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದವರೆಗೆ ಸಾಗಿದ ಮೆರವಣಿಗೆಯನ್ನು ನಾಪೋಕ್ಲುವಿನ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊಂಡರು.

ಬೆಳಿಗ್ಗೆ 9.30 ಗಂಟೆಗೆ ಆರಂಭಗೊಂಡ ಮೆರವಣಿಗೆ 11ಕ್ಕೆ ಮುಕ್ತಾಯವಾಯಿತು. ಕಾಲೇಜಿನ ಪ್ರವೇಶದ್ವಾರದಲ್ಲಿ ನಿರ್ಮಿಸಿದ್ದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಮಹಾದ್ವಾರವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬತಿಮ್ಮಯ್ಯ ಉದ್ಘಾಟಿಸಿದರು.

ಮೆರವಣಿಗೆಯನ್ನು ಕಾಲೇಜು ವಿದ್ಯಾರ್ಥಿನಿಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಸಮ್ಮೇಳನ ನಡೆಯುವ ಮಹಾಬಲೇಶ್ವರ ಭಟ್ ಪ್ರಧಾನ ವೇದಿಕೆ ಬಳಿ ಮೆರವಣಿಗೆ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.