ADVERTISEMENT

ಚುಟುಕು ಸಾಹಿತ್ಯಕ್ಕೆ ಗಟ್ಟಿಯಾದ ಮೌಲ್ಯ ಇರಲಿ: ಕಲಾ ಶಿಕ್ಷಕ ಉ.ರಾ.ನಾಗೇಶ್

15ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಗೋಷ್ಠಿ

ಅದಿತ್ಯ ಕೆ.ಎ.
Published 30 ಜನವರಿ 2021, 14:37 IST
Last Updated 30 ಜನವರಿ 2021, 14:37 IST
ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು
ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಯಿತು   

ಎಂ.ಮುತ್ತಣ್ಣ ವೇದಿಕೆ (ಮಡಿಕೇರಿ): ‘ಚುಟುಕು ಸಾಹಿತ್ಯವು ತೆಳುವಾದ ಹಾಸ್ಯ ಹಾಗೂ ಗಟ್ಟಿಯಾದ ಮೌಲ್ಯ ಒಳಗೊಂಡಿರಬೇಕು’ ಎಂದು ಕುಶಾಲನಗರದ ಕಲಾ ಶಿಕ್ಷಕ ಉ.ರಾ.ನಾಗೇಶ್‌ ಅಭಿಪ್ರಾಯಪಟ್ಟರು.

ನಗರದ ಕಾವೇರಿ ಹಾಲ್‌ನಲ್ಲಿ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಶನಿವಾರ ನಡೆದ ವಿಚಾರಗೋಷ್ಠಿಯಲ್ಲಿ ‘ಚುಟುಕು ಸಾಹಿತ್ಯದಲ್ಲಿ ಹಾಸ್ಯ ಹಾಗೂ ಮೌಲ್ಯ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘ಚುಟುಕು ಸಾಹಿತ್ಯದಲ್ಲಿ ಪದಗಳೊಂದಿಗೆ ಆಟವಾಡಬೇಕು. ಜೊತೆಗೆ, ಒಳನೋಟವು ಇರಬೇಕು. ಕನ್ನಡದಲ್ಲಿ ರಚನೆ ಆಗಿರುವ ಚುಟುಕು ಸಾಹಿತ್ಯಕ್ಕೆ ಗಟ್ಟಿತನವಿದೆ’ ಎಂದು ಹೇಳಿದರು.

ADVERTISEMENT

‘ಡುಂಡಿರಾಜ್‌ ಚುಟುಕು ಸಾಹಿತ್ಯಕ್ಕೆ ಮೌಲ್ಯವನ್ನು ತಂದುಕೊಟ್ಟವರು. ಕನ್ನಡ ಸಾಹಿತ್ಯಕ್ಕೆ ಮೌಲ್ಯವಿದೆ. ಯಾರೂ ಕನ್ನಡವನ್ನು ನಿರ್ಲಕ್ಷ್ಯ ಮಾಡಬಾರದು’ ಎಂದು ನಾಗೇಶ್‌ ಕಿವಿಮಾತು ಹೇಳಿದರು.

‘ಸಣ್ಣ ಸಣ್ಣ ಕೃತಿಗಳಿಗೂ ಮೌಲ್ಯವಿದೆ. ಕನ್ನಡದಲ್ಲಿ ಹೆಚ್ಚಾಗಿ ವಿಮರ್ಶೆ ಬೆಳೆಯಬೇಕು’ ಎಂದು ಪ್ರತಿಪಾದಿಸಿದರು.

ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ, ‘ಇಂದಿನ ಯುವಪೀಳಿಗೆ ಸಾಹಿತ್ಯ ಹಾಗೂ ದಿನಪತ್ರಿಕೆ ಓದುವ ಹವ್ಯಾಸದಿಂದ ದೂರವೇ ಉಳಿದಿದೆ. ಬರೀ ಮೊಬೈಲ್‌ ಗೀಳು ಹೆಚ್ಚಾಗಿದೆ ಎಂದ ಅವರು, ಕನ್ನಡದ ಜೊತೆಗೆ ಉಪ ಭಾಷೆಗಳೂ ಬೆಳೆಯಬೇಕು. ಅವುಗಳ ಸಾಹಿತ್ಯ ಹಾಗೂ ಸಂಸ್ಕೃತಿಯೂ ಉಳಿಯಬೇಕು’ ಎಂದು ಆಶಿಸಿದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಮಾತನಾಡಿ, ‘ಬೆಂಗಳೂರಿನಂತಹ ಮಹಾನ್‌ ನಗರಗಳಲ್ಲಿ ಕನ್ನಡಕ್ಕೆ ಆದ್ಯತೆ ಸಿಗುತ್ತಿಲ್ಲ’ ಎಂದು ವಿಷಾದಿಸಿದರು.

‘ಕೊರೊನಾದಿಂದ ಇಡೀ ಪ್ರಪಂಚವೇ ಲಾಕ್‌ಡೌನ್‌ಗೆ ಸಿಲುಕಿತ್ತು. ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿತ್ತು’ ಎಂದು ಹೇಳಿದರು.

ಕೊಡ್ಲಿಪೇಟೆ ಕಿರುಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್‌, ಸಮ್ಮೇಳನಾಧ್ಯಕ್ಷೆ ಗೀತಾ ಮಂದಣ್ಣ, ಆಕಾಶ್‌, ರಂಜನ್‌ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.