ನಾಪೋಕ್ಲು: ಧಾರ್ಮಿಕ ಕ್ಷೇತ್ರ ಭಾಗಮಂಡಲದಲ್ಲಿ ಒಂದು ತಿಂಗಳ ಕಾಲ ಹಬ್ಬದ ಸಂಭ್ರಮ ಮನೆ ಮಾಡಲಿದೆ.
ವಾರ್ಷಿಕ ಕಾವೇರಿ ಜಾತ್ರೆಗೆ ಸಂಬಂಧಿಸಿದಂತೆ ಭಾಗಮಂಡಲದಲ್ಲಿ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಿತು. ಸೆ.26ರಿಂದ ಅಕ್ಟೋಬರ್ 17ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಪತ್ತಾಯಕ್ಕೆ ಅಕ್ಕಿ ತುಂಬುವ ಕಾರ್ಯ ಸಂಭ್ರಮದಿಂದ ಜರುಗಿತು .
ಭಾಗಮಂಡಲದ ಬಳ್ಳಡ್ಕ ಕುಟುಂಬಸ್ಥರ ಐನ್‌ಮನೆಯಲ್ಲಿ ಎಲ್ಲರೂ ಒಟ್ಟು ಸೇರಿ ಮನೆಯಿಂದ ಅಕ್ಕಿಯನ್ನು ತಂದು ಭಗಂಡೇಶ್ವರ ದೇವಾಲಯದಲ್ಲಿ ಇರುವ ಪತ್ತಾಯದಲ್ಲಿ ಬೆಳಿಗ್ಗೆ 9.31ಕ್ಕೆ ತುಲಾ ಲಗ್ನದಲ್ಲಿ ತಲಕಾವೇರಿ ದೇವಾಲಯದ ತಕ್ಕ ಕೋಡಿ ಮೋಟಯ್ಯ ಪತ್ತಾಯಕ್ಕೆ ಅಕ್ಕಿಯನ್ನು ಹಾಕಿದರು.
ತಕ್ಕ ಮುಖ್ಯಸ್ಥರಾದ ಬಳ್ಳಡ್ಕಅಪ್ಪಾಜಿ ಅವರ ಮನೆಯಿಂದ ಅಕ್ಕಿಯನ್ನು ವಾದ್ಯ ಸಹಿತವಾಗಿ ತಂದು ಭಾಗಮಂಡಲ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ಪತ್ತಾಯದಲ್ಲಿ ತುಂಬಿ ಪೂಜೆ ನೆರವೇರಿಸಲಾಯಿತು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಭಾಗಮಂಡಲ ಪಾರುಪತ್ಯೆಗಾರ ಪೊನ್ನಣ್ಣ, ತಲಕಾವೇರಿ ಪಾರುಪತ್ಯೆಗಾರ ಕೋಡಿ ಮಂಜು, ಪ್ರಧಾನ ಅರ್ಚಕ ಹರೀಶ್ ಭಟ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.