
ಕುಶಾಲನಗರ: ಪಟ್ಟಣವು ಸೇರಿದಂತೆ ಕೊಡಗಿನ ಹೋಟೆಲ್ ಉದ್ಯಮದಲ್ಲಿ ಉತ್ತಮ ಆತಿಥ್ಯಕ್ಕೆ ಹೆಸರಾಗಿದ್ದ ಕೆ.ಕೆ.ಭಾಸ್ಕರ್ ಅಗಲಿಕೆ ಕೊಡಗಿನ ಹೋಟೆಲ್ ಉದ್ಯಮಕ್ಕೆ ತುಂಬಲಾರದ ನಷ್ಟ ಎಂದು ಹೋಟೆಲ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಜಿ.ಕೆ.ಶೆಟ್ಟಿ ಹೇಳಿದರು.
ಕೊಡಗು ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಹಾಗೂ ಪಟ್ಟಣದ ವಿವಿಧ ಸಂಘಟನೆಗಳ ವತಿಯಿಂದ ಟಾಪ್ ಇನ್ ಟೌನ್ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಕೆ.ಕೆ.ಭಾಸ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಕೊಡಗಿಗೆ ಯಾವುದೇ ಅಪರಿಚಿತ ಪ್ರವಾಸಿಗರು ಅತಿಥಿ ಹೋಟೆಲ್ ಗೆ ಆಗಮಿಸಿದಾಗ ಅವರಲ್ಲಿ ಪರಿಚಿತರ ಭಾವ ಮೂಡಿಸುತ್ತಿದ್ದ ಭಾಸ್ಕರ್, ಅತ್ಯುತ್ತಮ ವಾದ ಆತಿಥ್ಯ ನೀಡಿ ಸತ್ಕರಿಸುತ್ತಿದ್ದರು.ಹಾಗಾಗಿಯೇ ಅವರು ರಾಜ್ಯಮಟ್ಟದ ಆತಿಥ್ಯ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ರಾಜ್ಯಾಧ್ಯಕ್ಷ ಜಿ.ಕೆ.ಶೆಟ್ಟಿ ಬಣ್ಣಿಸಿದರು.
ಕೊಡಗು ಜಿಲ್ಲಾ ಘಟಕದ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಮಾತನಾಡಿ, ಭಾಸ್ಕರ್ ಅವರ ಅಕಾಲಿಕ ಅಗಲಿಕೆ ಹೋಟೆಲ್ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.ಭಾಸ್ಕರ್ ಅವರು ಯಶಸ್ವಿ ಉದ್ಯಮಿಯಾಗಿದ್ದರು.
ಮೂಲ ಮಲೆಯಾಳಿಗರಾದರೂ ಕೂಡ ಕನ್ನಡ ಭಾಷೆ ಹಾಗೂ ಸಾಹಿತ್ಯದಲ್ಲಿ ಅಪಾರ ಅಸಕ್ತಿ ಇತ್ತು. ತಾವು ವಹಿಸಿಕೊಂಡ ಯಾವುದೇ ಜವಾಬ್ದಾರಿಗಳನ್ನು ಅತ್ಯಂತ ಪ್ರಾಮಾಣಿಕ ವಾಗಿ ನಿರ್ವಹಿಸುತ್ತಿದ್ದರು ಎಂದು ಶ್ಲಾಘಿಸಿದರು.
ಕೊಡಗು ಜಿಲ್ಲಾ ವಾಣಿಜ್ಯೊದ್ಯಮಿಗಳ ಸಂಘದ ಅಧ್ಯಕ್ಷ ಬಿ.ಅರ್.ನಾಗೇಂದ್ರ ಪ್ರಸಾದ್ ಮಾತನಾಡಿ, ಭಾಸ್ಕರ್ ಅವರು ಹೋಟೆಲ್ ಉದ್ಯಮದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಗೆ ರಾಜ್ಯ ಪ್ರಶಸ್ತಿ ದೊರಕಿದ ಬಗ್ಗೆ ವಿವರಿಸಿದರು.
ಸಾಮಾಜಿಕ ಹೋರಾಟಗಾರ ವಿ.ಪಿ.ಶಶಿಧರ್ ಮಾತಾನಾಡಿ, ಕುಶಾಲನಗರ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಭಾಸ್ಕರ್ ಅವರ ಸೇವೆ ಹಾಗೂ ಕಾಳಜಿ ಪ್ರಮುಖ ಕಾರಣವಾಗಿತ್ತು.
ಯಾರೇ ಹೋಟೆಲ್ ಗೆ ಬಂದರೂ ಕೂಡ ಅತ್ಯಂತ ಆಪ್ತತೆಯಿಂದ ಸೇವೆ ನೀಡುತ್ತಿದ್ದರು ಎಂದು ಶಶಿಧರ್ ವರ್ಣಿಸಿದರು.
ರಾಜ್ಯ ಹೋಟೆಲ್ ಅಸೋಸಿಯೇಷನ್ ಸದಸ್ಯತ್ವ ಕಮಿಟಿ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಶೇಖರ ನಾಯ್ಡು, ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ, ಕಾವೇರಿ ನದಿ ಸಂಚಾಲಕ ಎಂ.ಎನ್.ಚಂದ್ರಮೋಹನ್, ಕಸಾಪ ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಕೇರಳ ಸಮಾಜದ ನಿರ್ದೇಶಕ ಕೆ.ವರದ ಮಾತನಾಡಿದರು.
ಕೇರಳ ಸಮಾಜದ ಅಧ್ಯಕ್ಷ ರವೀಂದ್ರನ್, ರಾಯ್, ಥೋಮಸ್, ಹೋಟೆಲ್ ಉದ್ಯಮಿಗಳಾದ ಪಂಚವಳ್ಳಿ ಮೊಯ್ದು, ಮಡಿಕೇರಿ ರಾಜ್ ದರ್ಶನ್ ಹೋಟೆಲ್ ನ ಜೆ.ವಿ.ಕೋಟಿ, ಸೋಮವಾರಪೇಟೆ ಉದ್ಯಮಿ ಸುಂದರ್, ಹೋಟೆಲ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ನಾಸಿರ್ ಅಹಮದ್, ಕುಶಾಲನಗರದ ಹೋಟೆಲ್ ಉದ್ಯಮಿ ಬಾಲನ್, ವಿವಿಧ ಸಂಘಟನೆಗಳ ಪ್ರಮುಖರಾದ ದೇವರಾಜು, ಎಂ.ಕೃಷ್ಣ, ದಿನೇಶ್ ಕುಮಾರ್, ಪುರಸಭೆ ಮಾಜಿ ಸದಸ್ಯ ಎಂ.ವಿ.ನಾರಾಯಣ ಪಾಲ್ಗೊಂಡಿದ್ದರು. ಸಮಾನ ಮನಸ್ಕರ ವೇದಿಕೆ ಸಂಚಾಲಕ ಕೆ.ಎಸ್.ಮೂರ್ತಿ ವಂದಿಸಿದರು.