
ಶನಿವಾರಸಂತೆ:‘ಇಲ್ಲಿನ ಬಸ್‌ನಿಲ್ದಾಣಕ್ಕೆ ರಾಷ್ಟ್ರದ ಪ್ರಥಮ ಸೇನಾ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರಿಡಲು ನಿರ್ಧರಿಸಲಾಗಿದ್ದು, ಸದ್ಯದಲ್ಲೇ ಸಂಪುಟದ ಅನುಮತಿ ಪಡೆಯಲಾಗುವುದು’ ಎಂದು ಸಾರಿಗೆ ಮತ್ತು ಮುಜುರಾಯಿ ಖಾತೆ ಸಚಿವ ಬಿ.ರಾಮಲಿಂಗಾರೆಡ್ಡಿ ಹೇಳಿದರು.
ಇಲ್ಲಿನ ಕರ್ನಾಟಕ ರಾಜ್ಯ ರಸ್ತೆ ನಿಗಮದ ಬಸ್‌ನಿಲ್ದಾಣವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ‘ಬಸ್ ನಿಲ್ದಾಣದ ಆವರಣದಲ್ಲಿ ಕಾಂಕ್ರೀಟ್ ಹಾಕಲು ಅನುದಾನ ನೀಡಲಾಗುವುದು. ಮಾತ್ರವಲ್ಲ, ಕೊಡ್ಲಿಪೇಟೆಯಲ್ಲೂ ಜಾಗ ನೀಡಿದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಊರಿನ ಪ್ರಮುಖರು ಜಾಗ ನಿಗದಿ ಮಾಡಬೇಕು’ ಎಂದು ಹೇಳಿದರು.
ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ 670 ಕೋಟಿಗೂ ಹೆಚ್ಚು ಮಹಿಳೆಯರು ಬಸ್ ಸಂಚಾರ ಮಾಡಿದ್ದಾರೆ. ಇದು ದಾಖಲೆ ಎಂದು ಅವರು ತಿಳಿಸಿದರು.
‘ಸರ್ಕಾರ 10 ಸಾವಿರ ಚಾಲಕರು ಮತ್ತು ನಿರ್ವಾಹಕರನ್ನು ನೇಮಕಾತಿ ಮಾಡಿದ್ದು, ಇದರಲ್ಲಿ 9 ಸಾವಿರ ಮಂದಿ ನಿರ್ವಾಹಕರು ಮತ್ತು ಚಾಲಕರನ್ನು ನೇರ ನೇಮಕಾತಿ ಮಾಡಲಾಗಿದೆ. ಒಂದು ಸಾವಿರ ಚಾಲಕರು ಮತ್ತು ನಿರ್ವಾಹಕರನ್ನು ‘ಅನುಕಂಪದ ಆಧಾರದ ಮೇಲೆ’ ಅರ್ಹರನ್ನು ನೇಮಿಸಲಾಗಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಈ ಹಿಂದೆ 5,800 ಬಸ್‍ಗಳು ಹಾಗೂ ಪ್ರಸಕ್ತ ವರ್ಷ 2 ಸಾವಿರ ಬಸ್‌ಗಳು ಒಟ್ಟು 7,800 ಕೆಎಸ್‍ಆರ್‌ಟಿಸಿ ಬಸ್‍ಗಳು ಸಂಚರಿಸುತ್ತವೆ. ಪ್ರತೀ ವರ್ಷ ಕಾಲಾನು ಕಾಲಕ್ಕೆ ಹೊಸ ಬಸ್‍ಗಳನ್ನು ಖರೀದಿಸಲಾಗುತ್ತಿದೆ. ಮುಂಬರುವ ಬಜೆಟಿನಲ್ಲಿ ಸಾರಿಗೆ ಸಂಪರ್ಕಕ್ಕೆ ಇನ್ನಷ್ಟು ಹೆಚ್ಚಿನ ಒತ್ತು ನೀಡಲಾಗಿದ್ದು, ಕೊಡಗು ಜಿಲ್ಲೆಗೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.
ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಕಾಳಜಿಯಿಂದ ತಲಕಾವೇರಿಯಲ್ಲಿನ ಪವಿತ್ರ ತೀರ್ಥೋದ್ಭವ ಜಾತ್ರೆಗೆ ಸರ್ಕಾರದಿಂದ ಮೂರು ವರ್ಷದಿಂದ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮುಖಂಡ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ‘ಶಾಸಕರ ಅಭಿವೃದ್ಧಿ ಕೆಲಸಗಳಿಗೆ ಸದಾ ಕೈಜೋಡಿಸಲಾಗಿದೆ. ಶಾಸಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 25 ವರ್ಷಗಳಿಂದ ಆಗದ ಕೆಲಸ, 25 ತಿಂಗಳಲ್ಲಿ ಆಗಿರುವುದು ಮೆಚ್ಚಲೇಬೇಕು ಎಂದು ಹೇಳಿದರು.
ಗುತ್ತಿಗೆದಾರರಾದ ರೇವಣ್ಣ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಬಸ್‌ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲೇ ಕೊಡ್ಲಿಪೇಟೆ ಬಸ್‌ನಿಲ್ದಾಣದ ಕನಸೂ ಸಹ ಚಿಗುರೊಡೆಯಿತು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲ್ಲೂಕು ಘಟಕದ ಅಧ್ಯಕ್ಷರಾದ ಜಿ.ಎಂ.ಕಾಂತರಾಜು, ವಿ.ಪಿ.ಶಶಿಧರ, ಜಾನ್ಸನ್, ಕೆಎಸ್‍ಆರ್‌ಟಿಸಿ ಪುತ್ತೂರು ವಿಭಾಗದ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬು, ಮಡಿಕೇರಿ ಕೆಎಸ್‍ಆರ್‌ಟಿಸಿ ಘಟಕ ವ್ಯವಸ್ಥಾಪಕ ಈರಸಪ್ಪ, ಮುಖಂಡರಾದ ಲಕ್ಷ್ಮಣ, ಕೆ.ಪಿ.ಚಂದ್ರಕಲಾ, ಜನಾರ್ಧನ, ಶರತ್ ಶೇಖರ್, ತಹಶೀಲ್ದಾರ್ ಕೃಷ್ಣಮೂರ್ತಿ, ರೋಷಿ, ಜಯಕುಮಾರ, ಜಸಿಂತಾ ಭಾಗವಹಿಸಿದ್ದರು.
‘
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ನಾಡಗೀತೆ ವಿಘ್ನೇಶ್ವರ ಬಾಲಿಕ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ರೈತಗೀತೆ
ಶನಿವಾರಸಂತೆಯ ಸಂತೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು
-ಗೀತಾ ಹರೀಶ್ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಶನಿವಾರಸಂತೆಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಹಲವು ದಶಕಗಳ ಕನಸಾಗಿತ್ತು. ಅದು ನನಸಾಗಿದೆ
-ಸದಾಶಿವ ಸ್ವಾಮೀಜಿ ಕಿರಿಕೊಡ್ಲಿ ಮಠ
‘ಪ್ರತ್ಯೇಕ ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿ ನೀಡಿ’
ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಿರಿಯರೊಬ್ಬರು ಶನಿವಾರಸಂತೆಯಲ್ಲಿ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಮನವಿ ಮಾಡಿದ್ದರು. ಅಂದಿನ ಜಿಲ್ಲಾಧಿಕಾರಿ ಆಗಿದ್ದ ಡಾ.ಬಿ.ಸಿ.ಸತೀಶ ಅವರು ಜಾಗ ಗುರುತಿಸಿದ್ದರು. ನಂತರ ಸಾರಿಗೆ ಸಚಿವರಲ್ಲಿ ಮನವಿ ಮಾಡಿದಾಗ ತಕ್ಷಣವೇ ₹ 1.05 ಕೋಟಿ ಅನುದಾನ ಬಿಡುಗಡೆ ಮಾಡಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಒಂದೇ ವರ್ಷದಲ್ಲಿಯೇ ನಿರ್ಮಾಣ ಮಾಡಿರುವುದು ವಿಶೇಷ ಎಂದು ಹೇಳಿದರು. ಈ ಜಾಗವನ್ನು ಗ್ರಾಮ ಪಂಚಾಯಿತಿ ಅವರು ನೀಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದ ಅವರು ಕೊಡ್ಲಿಪೇಟೆಯಲ್ಲಿ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು. ಕುಶಾಲನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಅಗತ್ಯ ಅನುದಾನ ನೀಡಬೇಕು ಹಾಗೂ ಕೊಡಗು ಜಿಲ್ಲೆಗೆ ಪ್ರತ್ಯೇಕ ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿ ಆರಂಭಿಸಬೇಕು ಎಂದು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು. ಕೊಡಗು ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ಗಳ ಸಂಚಾರಕ್ಕೆ ಅವಕಾಶ ಮಾಡಬೇಕು. ಚಾಲಕರು ಮತ್ತು ನಿರ್ವಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಬೇಕು ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.