ADVERTISEMENT

ವಿಚಿತ್ರ ಕೇಶ ವಿನ್ಯಾಸ: ‘ದಂಡ’ ಪ್ರಯೋಗ

ಕೊಡಗು ಜಿಲ್ಲೆಯ ಜಮಾಯತ್‌ನಿಂದ ಯುವಕರಿಗೆ ‘ಪರಿವರ್ತನೆಯ ಪಾಠ’

ಅದಿತ್ಯ ಕೆ.ಎ.
Published 25 ಜೂನ್ 2019, 19:30 IST
Last Updated 25 ಜೂನ್ 2019, 19:30 IST
ವಿರಾಜಪೇಟೆ ತಾಲ್ಲೂಕಿನ ಗುಂಡಿಕೆರೆ ಗ್ರಾಮದ ಶಾಫಿ ಮುಸ್ಲಿಂ ಜಮಾಯತ್‌ ಯುವಕನಿಗೆ ದಂಡ ವಿಧಿಸಿ ಹೊರಡಿಸಿರುವ ಆದೇಶ ಪ್ರತಿ
ವಿರಾಜಪೇಟೆ ತಾಲ್ಲೂಕಿನ ಗುಂಡಿಕೆರೆ ಗ್ರಾಮದ ಶಾಫಿ ಮುಸ್ಲಿಂ ಜಮಾಯತ್‌ ಯುವಕನಿಗೆ ದಂಡ ವಿಧಿಸಿ ಹೊರಡಿಸಿರುವ ಆದೇಶ ಪ್ರತಿ   

ಮಡಿಕೇರಿ: ಈ ಊರಲ್ಲಿ ವಿಚಿತ್ರ ಶೈಲಿಯಲ್ಲಿ ಕೇಶ ವಿನ್ಯಾಸ ಮಾಡಿಸಿಕೊಂಡು ಅಡ್ಡಾಡುವಂತಿಲ್ಲ. ಹಾಗೊಮ್ಮೆ ತಮಗೆ ತೋಚಿದಂತೆ ತಲೆಯಲ್ಲಿ ನೀಳವಾದ ಕೂದಲು ಬಿಟ್ಟು ಓಡಾಡಿದರೆ ದಂಡ ಪಾವತಿಸಬೇಕು!

ಇಂಥದ್ದೊಂದು ಶಿಸ್ತಿನಪಾಠ ಮಾಡುತ್ತಿರುವುದು ಶಾಲೆಯ ಶಿಕ್ಷಕರು– ಕಾಲೇಜು ಉಪನ್ಯಾಸಕರು ಅಲ್ಲ. ಬದಲಿಗೆ ಮುಸ್ಲಿಂ ಸಮುದಾಯದ ಯುವಕರಲ್ಲಿ ಶಿಸ್ತು ರೂಪಿಸಿ, ಅವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಜಮಾಯತ್‌ ಸದ್ದಿಲ್ಲದೇ ಕಾರ್ಯೋನ್ಮುಖವಾಗಿದೆ.

ಕೊಡಗು ಜಿಲ್ಲೆ, ವಿರಾಜಪೇಟೆ ತಾಲ್ಲೂಕು ಬೇಟೋಳಿ ಅಂಚೆ ಗುಂಡಿಕೆರೆ ಗ್ರಾಮದ ‘ಶಾಫಿ ಮುಸ್ಲಿಂ ಜಮಾಯತ್‌’ ಕೆಲವು ತಿಂಗಳಿಂದ ಗ್ರಾಮದ ಯುವಕರಿಗೆ ‘ಪರಿವರ್ತನೆಯ ಪಾಠ’ ಮಾಡುತ್ತಿದೆ. ಗ್ರಾಮದ ಬಹುತೇಕ ಯುವಕರಲ್ಲಿ ಶಿಸ್ತು ತಂದ ಹೆಗ್ಗಳಿಕೆಗೆ ಪಾತ್ರವಾಗಿದೆ.

ADVERTISEMENT

ಮೂವರಿಗೂ ಎಚ್ಚರಿಕೆ: ಹೊರ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ನಿಜಾಂ ಎಂಬ ಯುವಕ ವಿಚಿತ್ರವಾಗಿ ಕೇಶ ವಿನ್ಯಾಸ ಮಾಡಿಸಿಕೊಂಡು ಗ್ರಾಮದಲ್ಲಿ ಓಡಾಡುತ್ತಿದ್ದ. ಅದನ್ನು ಗಮನಿಸಿದ ಜಮಾಯತ್‌ ಸದಸ್ಯರು, ಆ ಯುವಕ ಹಾಗೂ ಅವರ ಪೋಷಕರನ್ನು ಕರೆಸಿ ಬುದ್ಧಿಮಾತು ಹೇಳಿದ್ದರು. ಅದಕ್ಕೂ ಕ್ಯಾರೆ ಎನ್ನದಿದ್ದಾಗ ದಂಡ ‍ಪ್ರಯೋಗದ ಅಸ್ತ್ರ ಬಳಸಿದ್ದರು.

ಜೂನ್‌ 21ರಂದು ದಂಡದ ಆದೇಶ ಹೊರಡಿಸಿದ್ದು, ಅದರಲ್ಲಿ ‘ನೀವು ಜಮಾಯತ್‌ನ ಸದಸ್ಯರಾಗಿದ್ದು ನಮ್ಮ ತೀರ್ಮಾನದ ವಿರುದ್ಧವಾಗಿ ತಲೆ ಕೂದಲು ಬೆಳೆಸಿರುವ ಕಾರಣಕ್ಕೆ ₹ 5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿತ್ತು. ಪತ್ರದಿಂದ ಹೆದರಿದ ನಿಜಾಂ ಸೇರಿದಂತೆ ಮೂವರು ಯುವಕರು ಭಾನುವಾರ ನಡೆದ ಆಡಳಿತ ಮಂಡಳಿ ಸಭೆಯ ಸ್ಥಳಕ್ಕೆ ಕೂದಲು ತೆಗೆಸಿ ಶಿಸ್ತಿನಿಂದ ಬಂದಿದ್ದರು ಎಂದು ಜಮಾಯತ್‌ ಸದಸ್ಯರು ತಿಳಿಸಿದರು.

ಮಾದರಿ ಜಮಾಯತ್‌: ‘ಗುಂಡಿಗೆರೆ ಜಿಲ್ಲೆಯಲ್ಲಿ ಮಾದರಿ ಗ್ರಾಮ. ಎಲ್ಲ ಧರ್ಮದ ಜನರೂ ಇಲ್ಲಿ ನೆಲೆಸಿದ್ದಾರೆ. ಸೌಹಾರ್ದ ಮೂಡಿಸುವ ಉದ್ದೇಶದಿಂದ ಕೆಲವು ನಿಯಮಗಳನ್ನು ಪಾಲಿಸಲಾಗುತ್ತಿದೆ. ಅದಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿದೆ. ಮಾದರಿ ಜಮಾಯತ್‌ ಆಗಿಯೂ ರೂಪುಗೊಂಡಿದೆ’ ಎಂದು ಅಧ್ಯಕ್ಷ ಎಂ.ಎ.ಅಬ್ಬಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಂಜಾನ್‌ ಉಪವಾಸ ಆಚರಣೆಗೂ ಮುನ್ನ ಗ್ರಾಮದಲ್ಲಿ ವ್ಯಸನಕ್ಕೆ ದಾಸರಾಗಿದ್ದ ಹಲವು ಯುವಕರನ್ನು ಪತ್ತೆಹಚ್ಚಿ ಎಚ್ಚರಿಕೆ ನೀಡಿದ್ದೆವು. ಯುವಕರ, ಚಟಗಳಿಂದ ಸಮಾಜದ ಮುಖಂಡರಿಗೂ ಅಸಮಾಧಾನ ಉಂಟಾಗಿತ್ತು. ಕೂದಲು ಉದ್ದಕ್ಕೆ ಬಿಡುವುದು ಯುವಕರಲ್ಲಿ ಫ್ಯಾಷನ್‌ ಆಗಿದೆ. ಅದರಿಂದ ಮನಸ್ಸು ವಿಚಲಿತಗೊಂಡು ಕೆಟ್ಟ ಆಲೋಚನೆಗಳು ಬರುತ್ತವೆ’ ಎಂದರು.

‘ಮದುವೆ ಮತ್ತಿತರ ಸಮಾರಂಭಗಳಿಗೆ ಹೋಗಿ ಗಲಾಟೆ ನಡೆಸಿದವರಿಗೆ, ಮದ್ಯ ಸೇವನೆಯಿಂದ ರಾದ್ಧಾಂತ ಮಾಡಿದವರನ್ನೂ ಕರೆತಂದು ಎಚ್ಚರಿಕೆ ನೀಡುತ್ತಿದ್ದೇವೆ. ಯುವತಿಯರಿಗೆ ತೊಂದರೆ ನೀಡಿದವರಿಗೆ ಬುದ್ಧಿ ಕಲಿಸುತ್ತಿದ್ದೇವೆ. ಶಿಸ್ತು ತರುವ ಪ್ರಯತ್ನದ ಭಾಗವಾಗಿ ಗ್ರಾಮದಲ್ಲಿ ಈ ಪ್ರಯೋಗಕ್ಕೆ ಮುಂದಾಗಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.