ಕುಶಾಲನಗರ: ‘ವನ್ಯಜೀವಿಗಳು ನಮ್ಮಂತೇ ಜೀವಿಗಳು. ಅವುಗಳ ಜೊತೆ ಸಹಬಾಳ್ವೆಯಿರಬೇಕು’ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಹೇಳಿದರು.
ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಅಳುವಾರದಲ್ಲಿರುವ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ವಿಷಪೂರಿತ ಹಾವುಗಳು ಮತ್ತು ಅವುಗಳನ್ನು ಗುರುತಿಸುವಿಕೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳು ಕುರಿತು ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಾವುಗಳೆಂದ ತಕ್ಷಣ ಭಯ ಬೇಡ. ಶಾಂತ ಸ್ವಭಾವದ, ಏಕಾಂತ ಬಯಸುವ, ಹಗೆತನವಿಲ್ಲದ, ನಾಚಿಕೆ ಸ್ವಭಾವದ ಹಾವುಗಳು ರೈತಸ್ನೇಹಿ. ಅವುಗಳನ್ನು ಕೊಲ್ಲದೆ, ನೈಸರ್ಗಿಕ ಜೈವಿಕ ಸಮತೋಲನೆಗೆ ಸಹಕಾರಿಯಾಗಬೇಕು. ಹಾವು ಕಚ್ಚಿದ ಗುರುತು ಮೈಮೇಲೆ ಕಂಡಾಗ ಶಾಂತವಾಗಿದ್ದು, ಪ್ರಥಮ ಚಿಕೆತ್ಸೆಯೊಂದಿಗೆ ಆಧುನಿಕ ಸೌಲಭ್ಯದ ಚಿಕಿತ್ಸೆಯನ್ನು ಸಕಾಲದಲ್ಲಿ ಪಡೆಯಬೇಕು ಎಂದು ತಿಳಿಸಿದರು.
ಸೆ. 22 ರಿಂದ ಪ್ರಾರಂಭವಾಗುವ ಗಣತಿಯಲ್ಲಿ ಎಲ್ಲರೂ ತಪ್ಪದೇ ಭಾಗವಹಿಸುವಂತೆ ಸಾರ್ವಜನಿಕರಿಗೆ ಇದೇ ಸಂದರ್ಭ ಕುಲಪತಿ ಮನವಿ ಮಾಡಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಲಿಂಗರಾಜು ದೊಡ್ಡಮನಿ ಮಾತನಾಡಿ, ಎಲ್ಲ ಕಡೆ ಹಾವಿನ ವಿಷಕ್ಕೆ ಔಷಧಿ ದೊರೆಯುತ್ತಿದೆ. ಸಾರ್ವಜನಿಕರು ತಡ ಅಥವಾ ನಿರ್ಲಕ್ಷ್ಯ ಮಾಡದೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಕಿವಿಮಾತು ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ರೇಬೀಸ್ ರೋಗದ ವಿರುದ್ಧದ ಉಚಿತ ಲಸಿಕೆಯನ್ನು ಜನರು ಸಾಕು ಪ್ರಾಣಿಗಳಿಗೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಉಪನಿರ್ದೇಶಕ ಡಾ.ಕೆ.ಬಿ.ಚಿದಾನಂದ ಮಾತನಾಡಿ, ವಿಷಪೂರಿತ ಹಾವು ಉತ್ಪಾದಿಸುವ ವಿಷವು ಕೇವಲ ಪರಿವರ್ತಿತ ಜೊಲ್ಲು. ಇದು ಮನುಷ್ಯನ ದೇಹ ಸಂಪರ್ಕಕ್ಕೆ ಬಂದಾಗ ಮಾತ್ರ ನರಗಳ ವ್ಯೂಹದ ಮೇಲೆ, ರಕ್ತದಲ್ಲಿ, ಸ್ನಾಯುಗಳ ಮೇಲೆ ಹಾನಿಕಾರಕವಾಗಿ, ವಿಷಕಾರಿಯಾಗುತ್ತದೆ. ಮಂಡಲದ ಹಾವು, ಕಟ್ಟು ಹಾವು, ನಾಗರ ಹಾವು ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿದೆ. ಪಶುಸಂಗೋಪನೆಯಲ್ಲಿ ಹಾವುಗಳ ಬಗ್ಗೆ ಮೂಢನಂಬಿಕೆಯನ್ನು ತೆಗೆಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ, ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಂ.ಸಿ. ಶಿವಕುಮಾರ್ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಹಾವುಗಳ ಕಚ್ಚುವಿಕೆಯಿಂದ ಸಾವಿನ ಪ್ರಮಾಣ ಮುಂದಿನ ಕೆಲವು ವರ್ಷದೊಳಗೆ ಕಡಿಮೆ ಮಾಡುವ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಸಂಸ್ಥೆಯಿಂದ ಹಲವಾರು ವನ್ಯಜೀವಿಗಳ ಜತೆಗೆ ಹಾವಿನ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ರೈತರು ಹಾವುಗಳು ಸೇರಿಕೊಳ್ಳದಂತೆ ಹೊಲಗದ್ದೆಗಳನ್ನು, ಮನೆ, ಕೊಟ್ಟಿಗೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು. ಜಮೀನುಗಳಲ್ಲಿ ಓಡಾಡುವಾಗ ರೈತರು ಕಾಲುಗಳಿಗೆ ಸೂಕ್ತ ಬೂಟುಗಳನ್ನು ಧರಿಸಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಪಶುವೈದ್ಯಾಧಿಕಾರಿ ಡಾ. ಶ್ರೀದೇವು ಅವರು ವಿಷಪೂರಿತ ಹಾವುಗಳನ್ನು ಗುರುತಿಸುವ ಬಗ್ಗೆ ಮಾಹಿತಿ ನೀಡಿದರು.
ಉರಗಪ್ರೇಮಿ ಪುಷ್ಪಾಧರ ಅವರು ಹಾವು ಕಂಡ ತಕ್ಷಣ ಕರೆ ಮಾಡುವಂತೆ ಮನವಿ ಮಾಡಿದರು.
ತರಬೇತಿಯಲ್ಲಿ 80ಕ್ಕೂ ಹೆಚ್ಚು ರೈತರು, ಸಾರ್ವಜನಿಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚೈತ್ರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಶಾಂತ ಸ್ವಾಗತಿಸಿದರು. ಉಪನ್ಯಾಸಕ ಡಾ. ಜಮೀರ್ ಅಹಮದ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.