ADVERTISEMENT

ಕೊಡಗು: ಬಿಜೆಪಿಯ ಓಬಿಸಿ ಘಟಕದ ಅಧ್ಯಕ್ಷ ಕಾಂಗ್ರೆಸ್ ಸೇರ್ಪಡೆ

ಕಾಂಗ್ರೆಸ್‌ಗೆ ‍ಬರಮಾಡಿಕೊಂಡ ಸಚಿವ ಎನ್.ಎಸ್.ಭೋಸರಾಜು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:28 IST
Last Updated 23 ಸೆಪ್ಟೆಂಬರ್ 2025, 5:28 IST
ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಅಪ್ರು ರವೀಂದ್ರ ಅವರನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಸೋಮವಾರ ಮಡಿಕೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು
ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಅಪ್ರು ರವೀಂದ್ರ ಅವರನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಸೋಮವಾರ ಮಡಿಕೇರಿಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು   

ಮಡಿಕೇರಿ: ಬಿಜೆಪಿಯ ಕೊಡಗು ಜಿಲ್ಲಾ ಘಟಕದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಅಪ್ರು ರವೀಂದ್ರ ಹಾಗೂ ಇತರ ಕಾರ್ಯಕರ್ತರು ಸೋಮವಾರ ಇಲ್ಲಿನ ಬಾಲಭವನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಪಕ್ಷದ ಧ್ವಜ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು‌.

ಈ ವೇಳೆ ಮಾತನಾಡಿದ ಸಚಿವ ಎನ್.ಎಸ್.ಭೋಸರಾಜು, ‘ಸಮಾನತೆಗಾಗಿ ಸರ್ಕಾರ ಹಲವು ಕಾರ್ಯಗಳನ್ನು ಮಾಡುತ್ತಿದೆ. ಇದರ ಒಂದು ಅಂಗವಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು’ ಎಂದರು.

ADVERTISEMENT

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ಪಕ್ಷದ ಎಲ್ಲ ಘಟಕಗಳು ಉತ್ತಮವಾಗಿದ್ದರೆ ಗೆಲುವು ಸುಲಭ’ ಎಂದರು.

ಸದ್ಯದಲ್ಲೇ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶ ನಡೆಸಬೇಕು ಎಂದು ಮಧು ಬಂಗಾರ‍ಪ್ಪ ಅವರು ಸೂಚಿಸಿದ್ದಾರೆ. ಎಲ್ಲರೂ ಭಿನ್ನಾಭಿಪ್ರಾಯ ಮರೆತು ಆ ನಿಟ್ಟಿನಲ್ಲಿ ಕಾರ್ಯನ್ಮುಖರಾಗಬೇಕು ಎಂದು ಹೇಳಿದರು.

ಬಿಜೆಪಿಯಲ್ಲಿ ಒಡೆದು ಹಾಳುವ ನೀತಿ ಇದೆ. ನಮ್ಮಲ್ಲಿ ಆ ನೀತಿ ಇಲ್ಲ. ಮುಂದೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿವೆ, ಇಲ್ಲಿ ಎಲ್ಲರೂ ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಅಪ್ರು ರವೀಂದ್ರ ನಂತರ ಬಿಜೆಪಿಗೆ ಸೇರಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿದ್ದರು. ಈಗ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಮರು ಸೇರ್ಪಡೆಗೊಂಡಿದ್ದಾರೆ‌.

ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ, ‘ಅಪ್ರು ರವೀಂದ್ರ ಅವರು ಕಾಂಗ್ರೆಸ್ ಸೇರಿದ್ದಾರೆ. ಜಿಲ್ಲೆಯಲ್ಲಿ ಪಕ್ಷದ ಹಿಂದುಳಿದ ವರ್ಗಗಳ ವಿಭಾಗವನ್ನು ಬಲಪಡಿಸಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಕಾರ್ಯಕರ್ತರು ಅರಿವು ಮೂಡಿಸಬೇಕು. ಬಿಜೆಪಿಯ ಅಪಪ್ರಚಾರದ ವಿರುದ್ಧ ಧ್ವನಿ ಎತ್ತಬೇಕು ಎಂದರು.

ಕಾಂಗ್ರೆಸ್‌ನ ಹಿರಿಯ ಮುಖಂಡ ಅರುಣ್ ಮಾಚಯ್ಯ, ಮುಖಂಡರಾದ ಬಾನಂಡ ಪೃಥ್ಯು, ಬೇಕಲ್ ರಮಾನಾಥ್, ಸೋಮಣ್ಣ ಭಾಗವಹಿಸಿದ್ದರು.

ಬಿಜೆಪಿಗೆ ಯಾವುದೇ ನಷ್ಟ ಇಲ್ಲ; ರವಿ ಕಾಳಪ್ಪ ‍

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ‍್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ಅಪ್ರು ರವೀಂದ್ರ ಅವರು ಮೊದಲು ಕಾಂಗ್ರೆಸ್‌ನಲ್ಲೆ ಇದ್ದರು. ನಂತರ ಬಿಜೆಪಿಗೆ ಬಂದರು. ಅವರಿಗೆ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸ್ಥಾನವನ್ನೂ ನೀಡಲಾಗಿತ್ತು. ಈಗ ಮತ್ತೆ ಅವರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಇದರಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ’ ಎಂದು ಹೇಳಿದರು.

ಹಿಂದುಳಿದ ವರ್ಗದವರನ್ನು ಬೆಳೆಸುವ ಪಕ್ಷ ಕಾಂಗ್ರೆಸ್. ಎರಡು ಬಾರಿ ಇಲ್ಲಿ ಬ್ಲಾಕ್ ಅಧ್ಯಕ್ಷನಾಗಿದ್ದೆ. ಸಣ್ಣ ವಿಷಯದಿಂದ ಹೊರಗೆ ಹೋದೆ‌. ಈಗ ಮತ್ತೆ ಕಾಂಗ್ರೆಸ್‌ಗೆ ಬಂದಿರುವೆ
- ಅಪ್ರು ರವೀಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.