ಮಡಿಕೇರಿ: ಬಜೆಟ್‌ಗೆ ಒಪ್ಪಿಗೆ ಪಡೆಯಲೆಂದು ಮಂಗಳವಾರ ಕರೆಯಲಾಗಿದ್ದ ಮಡಿಕೇರಿ ನಗರಸಭೆಯು ಹಲವು ವಿಷಯಗಳ ಚರ್ಚೆಗೆ ವೇದಿಕೆಯಾಯಿತು. ನಗರದಲ್ಲಿ ವಿವಿಧ ಸಮಸ್ಯೆಗಳಿಂದ ಪರದಾಡುತ್ತಿರುವ ನಾಗರಿಕರ ಬವಣೆಗಳನ್ನು ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿ ಗಮನ ಸೆಳೆದರು.
ಮುಖ್ಯವಾಗಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣವನ್ನು ಎಲ್ಲಿ ಮಾಡಬೇಕು ಎನ್ನುವ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂತು. ಬೀದಿನಾಯಿಗಳ ಸಮಸ್ಯೆಯೂ ಮತ್ತೆ ಪ್ರಸ್ತಾಪವಾಯಿತು. ಆದರೆ, ಎಲ್ಲರ ಮನೆಗೂ ಕುಡಿಯುವ ನೀರಿನ ಸಂಪರ್ಕ ನೀಡಲು ಜಾರಿ ಮಾಡಿರುವ ಅಮೃತ್ – 2 ಕಾಮಗಾರಿಯಿಂದ ನಾಗರಿಕರು ಇನ್ನಿಲ್ಲದಂತೆ ಸಮಸ್ಯೆ ಅನುಭವಿಸುತ್ತಿರುವ ವಿಚಾರವನ್ನು ಪಕ್ಷಾತೀತವಾಗಿ ಸದಸ್ಯರು ಪ್ರಸ್ತಾಪಿಸಿದ್ದು ವಿಶೇಷ ಎನಿಸಿತ್ತು.
ಸದಸ್ಯ ಅರುಣ್ ಶೆಟ್ಟಿ ಈ ವಿಷಯ ಪ್ರಸ್ತಾಪಿಸಿ, ‘ಕಾಮಗಾರಿ ವೇಳೆ ಹಾಲಿ ಇರುವ ನೀರು ಸರಬರಾಜು ಕೊಳವೆಗಳನ್ನು ಒಡೆದು ಹಾಕುತ್ತಿದ್ದಾರೆ. ನನ್ನ ವಾರ್ಡಿಗೆ ನೀರು ಬಾರದೆ 4 ದಿನಗಳು ಆಯಿತು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ದನಿಗೂಡಿಸಿದ ಸದಸ್ಯ ಕೆ.ಎಸ್.ರಮೇಶ್, ‘ಇಷ್ಟಬಂದಂತೆ ಕಾಮಗಾರಿ ಮಾಡುತ್ತಿದ್ದು, ನಿಯಮದ ಪ್ರಕಾರ ಮುಚ್ಚುತ್ತಿಲ್ಲ. ಕನ್ನಂಡಬಾಣೆಯಲ್ಲಿ ಪಾರ್ಶ್ವವಾಯುಪೀಡಿತರಾದ ಒಬ್ಬರನ್ನು ಎತ್ತಿಕೊಂಡು ಹೊರಬರಬೇಕಾಯಿತು. ಮನೆಯ ಮುಂದೆ ಅಗೆದ ಮೇಲೆ ನಿವಾಸಿಗಳು ತಮ್ಮ ಮನೆಯಿಂದ ಹೊರಬರಲೂ ಸಾಧ್ಯವಾಗುತ್ತಿಲ್ಲ. ರಸ್ತೆಗಳಲ್ಲಿ ಗುಂಡಿಯನ್ನು ಸರಿಯಾಗಿ ಮುಚ್ಚಿ, ಡಾಂಬರು ಹಾಕದೇ ಇರುವುದರಿಂದ ವಾಹನಗಳ ಓಡಾಟಕ್ಕೂ ಸಮಸ್ಯೆಯಾಗಿದೆ’ ಎಂದು ಕಿಡಿಕಾರಿದರು.
ಇದಕ್ಕೆ ಎಸ್‌ಡಿಪಿಐ ಸದಸ್ಯರೂ ದನಿಗೂಡಿಸಿದರು. ಕಾಮಗಾರಿಯನ್ನು ವ್ಯವಸ್ಥಿತವಾಗಿ, ನಾಗರಿಕರಿಗೆ ತೊಂದರೆಯಾಗದಂತೆ ಮಾಡಬೇಕು ಎಂದು ಎಲ್ಲರೂ ಒತ್ತಾಯಿಸಿದರು.
ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರತಿಕ್ರಿಯಿಸಿ, ‘ಈ ಕುರಿತು ನಿರ್ದೇಶನ ನೀಡಲಾಗುವುದು’ ಎಂದು ಭರವಸೆ ನೀಡಿದರು.
‘ಕೇವಲ ಎರಡು ಲೀಟರ್ ಒಳಗಿನ ಪ್ಲಾಸ್ಟಿಕ್ ಬಾಟಲಿ ನೀರು ಮಾರಾಟ ನಿಷೇಧ ಮಾಡಿರುವುದು ಎಷ್ಟು ಸರಿ? ಒಂದು ಲೀಟರ್‌ಗೂ ಕಡಿಮೆ ಇರುವ ಚಿಕ್ಕ ಚಿಕ್ಕ ತಂಪುಪಾನೀಯಗಳ ಪ್ಲಾಸ್ಟಿಕ್ ಬಾಟಲಿ ಮೇಲೇಕೆ ಕ್ರಮ ಇಲ್ಲ’ ಎಂದು ಅನೇಕ ಸದಸ್ಯರು ಪ್ರಶ್ನಿಸಿದರು.
ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ವೆಂಕಟ್ ರಾಜಾ, ‘ಮೊದಲು ಎರಡು ಲೀಟರ್ ಒಳಗಿನ ಪ್ಲಾಸ್ಟಿಕ್ ಬಾಟಲಿ ನೀರು ಮಾರಾಟ ಪ್ರಸ್ತಾವಕ್ಕೆ ಒಪ್ಪಿಗೆ ಕೊಡಿ. ಅದನ್ನು ಜಾರಿ ಮಾಡೋಣ. ನಂತರ, ಇನ್ನುಳಿದ ಪ್ಲಾಸ್ಟಿಕ್‌ಗಳ ನಿಯಂತ್ರಣಕ್ಕೆ ಕೈಗೊಳ್ಳೋಣ’ ಎಂದರು.
ಗಾಂಧಿ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣದ ಕಾಮಗಾರಿ ವೆಚ್ಚ ಹೆಚ್ಚಾಗುವುದರಿಂದ ನಿರ್ಮಿತಿ ಕೇಂದ್ರಕ್ಕೆ ಕೊಡಲಾಗದು. ಹಾಗಾಗಿ, ಲೋಕೋಪಯೋಗಿ ಇಲಾಖೆಗೆ ನೀಡಿ ಅತಿ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
‘ಈ ಬಾರಿಯ ದಸರೆಗಾದರೂ ವೇದಿಕೆ ಪೂರ್ಣವಾಗಿ ನಿರ್ಮಾಣವಾಗಲಿ. ಆದಷ್ಟು ಬೇಗ ಯೋಜನೆಯನ್ನು ಅನುಷ್ಠಾನಗೊಳಿಸಬೇಕು’ ಎಂದು ಸದಸ್ಯರು ಮನವಿ ಮಾಡಿದರು.
ಸದಸ್ಯ ಮುದ್ದುರಾಜ್ ಅವರು ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಕೈಯಲ್ಲಿ ಕೋಲು ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ನಿಗದಿತ ಸಮಯಕ್ಕೆ ಆರಂಭವಾದ ಸಭೆ ಹಲವು ವಿಷಯಗಳನ್ನು ಚರ್ಚಿಸಿದ ಸದಸ್ಯರು ಬಹುಪಾಲು ಸದಸ್ಯರು ಸಭೆಯಲ್ಲಿ ಭಾಗಿ
ನಿಚ್ಚಳಗೊಂಡ ಆಸ್ತಿ ತೆರಿಗೆ ಹೆಚ್ಚಳ
‘ರಾಜ್ಯ ಸರ್ಕಾರದಿಂದ ಪ್ರತಿವರ್ಷ ಕನಿಷ್ಠ ಶೇ 3ರಿಂದ ಗರಿಷ್ಠ ಶೇ 5ರವರೆಗೆ ಆಸ್ತಿ ತೆರಿಗೆಯನ್ನು ಹೆಚ್ಚಿಸಲೇಬೇಕು ಎಂಬ ನಿರ್ದೇಶನ ಬಂದಿದ್ದು ಮಡಿಕೇರಿಯಲ್ಲೂ ಆಸ್ತಿ ತೆರಿಗೆ ಹೆಚ್ಚಿಸಬೇಕಿದೆ’ ಎಂದು ನಗರಸಭೆ ಅಧಿಕಾರಿಗಳು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ವ ಸದಸ್ಯರು ‘ಜನರು ಕಷ್ಟದಲ್ಲಿದ್ದಾರೆ. ಹೆಚ್ಚು ಮಾಡುವುದು ಬೇಡ. ಆದರೆ ಸರ್ಕಾರದಿಂದಲೇ ಆದೇಶವಾಗಿದ್ದರೆ ಕನಿಷ್ಠ ಶೇ 3ರಷ್ಟು ಮಾತ್ರ ಹೆಚ್ಚಳ ಮಾಡಿ. ಅದಕ್ಕಿಂತ ಹೆಚ್ಚು ಬೇಡ’ ಎಂದು ಮನವಿ ಮಾಡಿದರು.
ಪ್ರತಿಮೆ ನಿರ್ಮಾಣ ಜಾಗದ ವಿಷಯ; ಮತ್ತೆ ಪ್ರಸ್ತಾಪ
ಮಡಿಕೇರಿ ನಗರಸಭೆಯ ಸಾಮಾನ್ಯಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಎಲ್ಲಿ ಮಾಡಬೇಕು ಎನ್ನುವ ವಿಚಾರ ಪದೇ ಪದೇ ಪ್ರಸ್ತಾಪವಾಗುತ್ತಿದ್ದು ಮಂಗಳವಾರವೂ ಇದೇ ವಿಚಾರ ಪ್ರಸ್ತಾಪವಾಯಿತು. ಈ ಹಿಂದೆ ನಿರ್ಣಯವಾದಂತೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ (ಸುದರ್ಶನ ವೃತ್ತ) ಬಳಿ ಪ್ರತಿಮೆ ನಿರ್ಮಾಣ ಮಾಡುವುದು ಬೇಡ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಾದರೆ ಪ್ರತಿಮೆ ಸ್ಥಳಾಂತರ ಮಾಡಬೇಕಾಗುತ್ತದೆ. ಹಾಗಾಗಿ ಹಳೆಯ ಅಥವಾ ಹೊಸ ಖಾಸಗಿ ಬಸ್‌ನಿಲ್ದಾಣದ ಸಮೀಪ ಪ್ರತಿಮೆ ನಿರ್ಮಿಸಬೇಕು ಎಂದು ಎಸ್‌ಡಿಪಿಐ ಸದಸ್ಯರಾದ ಮನ್ಸೂರ್ ಬಷೀರ್ ಹಾಗೂ ಇತರ ಸದಸ್ಯರು ಪ್ರಸ್ತಾಪಿಸಿದರು. ಸತೀಶ್ ಅವರು ‘ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಲು ಏಕಿಷ್ಟು ತಕರಾರು? ಇಂತಹ ಮನಸ್ಥಿತಿ ಏಕೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಹೇಶ್ ಜೈನಿ ಅವರು ‘ಮೂವರು ಮಹಾನ್ ವ್ಯಕ್ತಿಗಳ ಪ್ರತಿಮೆ ಒಂದೇ ಕಡೆ ಇರುತ್ತದೆ. ಹಾಗಾಗಿ ಸುದರ್ಶನ ವೃತ್ತವೇ ಸೂಕ್ತ ಜಾಗ’ ಎಂದರು. ಯಾಕೂಬ್ ಅವರು ಈ ಜಾಗಗಳನ್ನು ಬಿಟ್ಟು ಬೇರೆಡೆ ಸೂಕ್ತವಾದ ಜಾಗದಲ್ಲಿ ಮಾಡಿ ಎಂದು ಸಲಹೆ ನೀಡಿದರು. ಈ ವಿಷಯಕ್ಕೆ ಬಿಜೆಪಿ ಸದಸ್ಯರು ಬಲವಾಗಿ ವಿರೋಧಿಸಿದರು. ಅಂತಿಮವಾಗಿ ಕೈ ಎತ್ತುವ ಮೂಲಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ (ಸುದರ್ಶನ ವೃತ್ತ) ವೃತ್ತದ ಬಳಿಯೇ ಪ್ರತಿಮೆ ನಿರ್ಮಿಸಲು ಸಭೆ ನಿರ್ಧರಿಸಿತು.
ಬಜೆಟ್ ಮೇಲಿನ ಚರ್ಚೆಗೆ ಮತ್ತೊಂದು ಸಭೆ
‘ಮಡಿಕೇರಿ ನಗರಸಭೆಯ ಪೌರಾಯುಕ್ತ ರಮೇಶ್ ಅವರು ₹ 1.33 ಕೋಟಿ ಉಳಿತಾಯ ಬಜೆಟ್ ಮಂಡಿಸಿದರು. ಆದರೆ ಬಜೆಟ್ ಪ್ರತಿ ಕೇವಲ 3 ದಿನಗಳ ಹಿಂದೆಯಷ್ಟೇ ನಮಗೆ ತಲುಪಿದ್ದು ಈ ಕುರಿತು ವಿವರವಾಗಿ ಚರ್ಚೆ ನಡೆಸಬೇಕಿದೆ. ಅದಕ್ಕಾಗಿ ಮತ್ತೊಂದು ದಿನ ಸಭೆ ಕರೆಯಬೇಕು’ ಎಂದು ಸದಸ್ಯರೆಲ್ಲರೂ ಒತ್ತಾಯಿಸಿದರು. ಇದಕ್ಕೆ ಒಪ್ಪಿದ ಆಡಳಿತಾಧಿಕಾರಿ ವೆಂಕಟ್ ರಾಜಾ ‘ಮಾರ್ಚ್ 29ರ ಒಳಗೆ ಮತ್ತೊಂದು ದಿನವನ್ನು ನಿಗದಿಗೊಳಿಸಿ ಸಭೆ ಕರೆಯಲಾಗುವುದು. ಆದರೆ ಯಾವ ಯಾವ ಮಾಹಿತಿ ಬೇಕು ಎನ್ನುವುದು ಮುಂಚಿತವಾಗಿಯೇ ಲಿಖಿತವಾಗಿ ನೀಡಬೇಕು. ಆಗ ಮಾತ್ರ ನಮಗೆ ಮಾಹಿತಿ ನೀಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಬಜೆಟ್‌ನ ಸ್ಥೂಲನೋಟ
ಆರಂಭಿಕ ಹಣ;₹ 13.98 ಕೋಟಿ
ಆದಾಯ;₹ 29.72
ವೆಚ್ಚ;₹ 42.36
ಉಳಿಕೆ;₹ 1.33
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.