ಸುಂಟಿಕೊಪ್ಪ: ರಾಜ್ಯಸರ್ಕಾರದ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ನಡೆಸಲು ಗುಡ್ಡಗಾಡು ಜಿಲ್ಲೆಯ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಗಣತಿದಾರರು ಬಹಳಷ್ಟು ಪರದಾಡುತ್ತಿದ್ದಾರೆ.
ನೆಟ್‌ವರ್ಕ್ ಸಮಸ್ಯೆ ಸಾಮಾನ್ಯವಾಗಿದ್ದು, ಬಹುತೇಕ ಕಡೆಗಳಲ್ಲಿ ಗಣತಿಯ ಮೊದಲ ಹಂತ ಪೂರೈಸಲು ಕಷ್ಟಪಡುವ ಸ್ಥಿತಿ ಎದುರಾಗಿದೆ. ಪ್ರತಿದಿನ ಶೇ 10ರಷ್ಟು ಪ್ರಗತಿ ಸಾಧಿಸುವಂತೆ ಸರ್ಕಾರ ಮತ್ತು ಮೇಲಾಧಿಕಾರಿಗಳ ಒತ್ತಡ ಇರುವುದರಿಂದ ಕೆಲವು ಗಣತಿದಾರರು ಕುಟುಂಬ ಸದಸ್ಯರ ಸಹಕಾರ ಪಡೆದುಕೊಂಡು ತಮಗೆ ಒಪ್ಪಿಸಿದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಪೂರ್ವಸಿದ್ಧತೆ ಮತ್ತು ಸೂಕ್ತ ತರಬೇತಿ ಇಲ್ಲದೇ ತರಾತುರಿಯಲ್ಲಿ ಶಿಕ್ಷಕರನ್ನು ಸಮೀಕ್ಷೆಗಾಗಿ ನಿಯೋಜಿಸಿರುವುದರಿಂದ ಹಲವು ರೀತಿಯ ಸಮಸ್ಯೆ ಎದುರಾಗುತ್ತಿದೆ ಎನ್ನಲಾಗುತ್ತಿದೆ. ಪದೇ ಪದೇ ಆ್ಯಪ್ ಬದಲಾಯಿಸುತ್ತಿರುವುದರಿಂದ ಗಣತಿದಾರರು ಆಗಾಗ್ಗೆ ಸಮಸ್ಯೆ ಎದುರಿಸುವಂತಾಗಿದೆ. ಆದರೂ, ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ತಮ್ಮ ಪಾಲಿನ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುಗಿಸಿದವರೂ ಇದ್ದಾರೆ.
ಸಮೀಕ್ಷೆಗಾಗಿ ಸರ್ಕಾರ ಈಗ ರೂಪಿಸಿರುವ ಆ್ಯಪ್ ನಗರ ಪ್ರದೇಶಗಳಲ್ಲಿ ಮಾತ್ರ ಸೂಕ್ತವಾಗಿದೆ. ಕೊಡಗು ಗುಡ್ಡ ಪ್ರದೇಶವಾಗಿದ್ದು ಇಂಟರ್‌ನೆಟ್ ಸಮಸ್ಯೆ ಇರುವುದರಿಂದ ಇಲ್ಲಿ ಗಣತಿ ಕಾರ್ಯ ನಿಧಾನಗತಿಯಾಗುತ್ತಿರುವುದರಿಂದ ಸಮೀಕ್ಷೆಯ ಪ್ರಮಾಣ ಕೂಡ ಕುಂಠಿತವಾಗುವಂತಾಗಿದೆ.
ಲೊಕೇಶನ್ ಆಧಾರದಲ್ಲಿ ಮನೆಗಳನ್ನು ಗುರುತಿಸಬೇಕಾಗಿದ್ದು, ಇಂಟರ್‌ನೆಟ್ ಸಮಸ್ಯೆ ಇರುವುದರಿಂದ ನಿಖರವಾಗಿ ಮನೆಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಒಂದೇ ಮನೆಗೆ ಎರಡು ಸ್ಟಿಕ್ಕರ್‌ಗಳು ಹಾಗೂ ಒಂದೇ ಮನೆಗೆ ಎರಡು ತಂಡಗಳಿಗೆ ಸಮೀಕ್ಷೆ ನಡೆಸಲು ಮಾಹಿತಿ ನೀಡಿದ್ದರಿಂದ ಈ ಕಾರ್ಯ ಇನ್ನಷ್ಟು ವಿಳಂಬವಾಗುತ್ತಿದೆ. ಹಾಗೂ ಕೆಲವು ಭಾಗದಲ್ಲಿ ಮನೆಗಳ ಬದಲಾಗಿ ಖಾಲಿ ಜಾಗಗಳಿರುವುದು ಕಂಡುಬಂದಿದೆ. ಅಲ್ಲದೇ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ ಕೆಲವು ದಾಖಲೆಗಳು ಸರಿಯಾಗಿ ಲಭ್ಯವಾಗುತ್ತಿಲ್ಲ.
ಸಮೀಕ್ಷೆಯ ಸಂದರ್ಭದಲ್ಲಿ ಮನೆಗಳಿಗೆ ಬೀಗ ಹಾಕಿದರೆ ಅಂತಹ ಮನೆಗಳಲ್ಲೂ ಗಣತಿ ಕಾರ್ಯವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲೇಬೇಕು ಎನ್ನುವ ಸೂಚನೆಯನ್ನು ಕೊಡಲಾಗಿದೆ. ಶಿಕ್ಷಕರರು ಭಾನುವಾರವೂ ಸಹ ದಿನ ಪೂರ್ತಿ ಒತ್ತಡದಿಂದ ಕೆಲಸ ನಿರ್ವಹಿಸಬೇಕಾಗಿದೆ. ಮನೆಗಳಿಗೂ ಯುಎಚ್‌ಐಡಿ ಸಂಖ್ಯೆಗೂ ಜೋಡನೆಯಾಗದೇ ಇರುವುದರಿಂದ ಗಣತಿ ನಿಗದಿತ ಸಮಯದೊಳಗೆ ಪೂರ್ಣಗೊಳ್ಳುತ್ತಿಲ್ಲ. ಮನೆಗಳನ್ನು ಹುಡುಕುವುದರಲ್ಲಿ ದಿನ ಕಳೆದು ಹೋಗುತ್ತಿದೆ. ಒಂದು ಮನೆಗಾಗಿ ಕಾಡಿನೊಳಗೆ ಕಿ.ಮೀಗಟ್ಟಲೇ ನಡೆದುಕೊಂಡು ಹೋಗಬೇಕಾಗಿದೆ ಎಂದು ಗಣತಿದಾರರು ನೋವು ತೋಡಿಕೊಂಡಿದ್ದಾರೆ.
ಕಾಡಾನೆಗಳ ಹಾವಳಿ
ಶಿಕ್ಷಕರು ತಾವು ಸೇವೆ ಸಲ್ಲಿಸುತ್ತಿರುವ ಈ ವ್ಯಾಪ್ತಿಯಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು ಕಾರ್ಮಿಕರ ಸಮೀಕ್ಷೆ ಮಾಡಬೇಕೆಂದರೆ ಬೆಳಿಗ್ಗೆ 8 ಗಂಟೆ ಒಳಗೆ ಅಥವಾ ಸಂಜೆ 5 ಗಂಟೆಯ ನಂತರ ತೆರಳಬೇಕು. ಆದರೆ ಈ ಅವಧಿಯಲ್ಲಿ ಕಾಡಾನೆ ಹಾವಳಿ ಇರುವುದರಿಂದ ಇಂತಹ ಪ್ರದೇಶಗಳಲ್ಲಿ ಸಮೀಕ್ಷೆ ಸಾಧ್ಯವಾಗುತ್ತಿಲ್ಲ. ಜೊತೆಗೆ ನಾಯಿಗಳ ಕಾಟವೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.