ADVERTISEMENT

ಸಮಸ್ಯೆಗಳ ಪ್ರಸ್ತಾಪ; ಪರಿಹಾರದ ಭರವಸೆ

ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ 146ನೇ ವಾರ್ಷಿಕ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:05 IST
Last Updated 1 ನವೆಂಬರ್ 2025, 5:05 IST
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ 146ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎ.ನಂದಾಬೆಳ್ಯಪ್ಪ ಮಾತನಾಡಿದರು
ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ 146ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎ.ನಂದಾಬೆಳ್ಯಪ್ಪ ಮಾತನಾಡಿದರು   

ಮಡಿಕೇರಿ: ‘ಕೊಡಗಿನ ಕಾಫಿ ಬ್ರಾಂಡ್’ ಸಂರಕ್ಷಣೆ, ಸ್ವಚ್ಛ ಕೊಡಗು, ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳು ಹೀಗೆ ಅನೇಕ ವಿಷಯಗಳನ್ನು ಕುರಿತು ಸಿದ್ದಾಪುರದ ಸಮೀಪದ ರೆಸಾರ್ಟ್‌ನಲ್ಲಿ ನಡೆದ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ 146ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿದರು.

‘ಹಿರಿಯರು ಕೊಟ್ಟಿರುವ ಕಾಫಿ ಬೆಳೆಯನ್ನು ನಾವು ಮುಂದಿನ ತಲೆಮಾರಿಗೆ ನೀಡಬೇಕಿದೆ. ಪ್ರಸ್ತುತ ಕಾಫಿ ಬೆಳೆಗಾರರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆ ಸಮಸ್ಯೆಗಳ ನಿವಾರಣೆಗೆ ಶಕ್ತಿಮೀರಿ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದರು.

ಮುಖ್ಯವಾಗಿ ಅವರು ಜಮ್ಮಾಬಾಣೆ ಸಮಸ್ಯೆಯನ್ನು ಪ್ರಸ್ತಾಪಿಸಿ, ‘ನ. 10ರಂದು ಈ ಕುರಿತು ಸಭೆಯನ್ನು ಕಂದಾಯ ಸಚಿವರು ಕರೆದಿದ್ದಾರೆ. ಈ ಸಭೆಯಲ್ಲಿ ನಿರ್ಣಯ ಕೈಗೊಂಡು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಕೊಡಗು ಮಾಲಿನ್ಯವಾಗುವುದಕ್ಕೆ ಕೇವಲ ಪ್ರವಾಸಿಗರಷ್ಟೇ ಕಾರಣರಲ್ಲ ಎಂದ ಅವರು, 200 ಎಂ.ಎಲ್‌.ನಷ್ಟು ಚಿಕ್ಕ ಗಾತ್ರದ ಪ್ಲಾಸ್ಟಿಕ್ ಬಾಟಲಿ ನೀರನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಮಾತ್ರವಲ್ಲ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದನ್ನೆಲ್ಲ ತಡೆಗಟ್ಟಬೇಕು ಎಂದು ಅವರು ಹೇಳಿದರು.

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ಮಳೆ ನಿಂತ ಕೂಡಲೇ ಕೊಡಗಿನ ರಸ್ತೆಗಳ ಅಭಿವೃದ್ಧಿ ಆಗುತ್ತದೆ. ಕಂದಾಯ ಸಮಸ್ಯೆಗಳ ಇತ್ಯರ್ಥಕ್ಕೆ, ಸಿ ಮತ್ತು ಡಿ ಭೂಮಿ ಸಮಸ್ಯೆ ನಿವಾರಣೆಗೆ, ಕಾಡಾನೆ–ಮಾನವ ಸಂಘರ್ಷ ನಿವಾರಣೆಗೆ ಕ್ರಮ ವಹಿಸಲಾಗುತ್ತಿದೆ’ ಎಂದು ಹೇಳಿದರು.

ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎ.ನಂದಾಬೆಳ್ಯಪ್ಪ ಮಾತನಾಡಿ, ‘ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಮುಂದಿನ 4 ವರ್ಷಗಳಲ್ಲಿ 150 ವರ್ಷ ಪೂರೈಸಲಿದೆ. ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಸಂಘವು ಸರ್ಕಾರದ ಗಮನಕ್ಕೆ ತರುತ್ತಿದೆ’ ಎಂದು ಹೇಳಿದರು.

ಉದ್ಯಮಿ ಇಮ್ಯೂನ್ಯವಲ್ ಟಿ.ರಾಮಪುರಮ್ ಮಾತನಾಡಿ, ‘ತಮ್ಮ ‘ಮನ್‌ ಕಿ ಬಾತ್‌’ನಲ್ಲಿ ಕಾಫಿ ಕುರಿತು ಪ್ರಸ್ತಾಪಿಸಿದ ಪ್ರಧಾನಿಯವರ ಬಳಿ ನಿಯೋಗ ತೆರಳಿ ಕಾಫಿ ಮ್ಯೂಸಿಯಂ ನಿರ್ಮಾಣಕ್ಕೆ ಮನವಿ ಸಲ್ಲಿಸಬೇಕು’ ಎಂದರು.

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಶನಿವಾರಸಂತೆಯ ಪ್ರಗತಿ ಪರ ಕರಿಮೆಣಸು ಬೆಳೆಗಾರ ಕೆ.ಎಂ.ಕಾಂತರಾಜು, ಮಾಯಮುಡಿಯ ಪ್ರಗತಿ ಪರ ಕೃಷಿಕ ಕೆ.ಎಂ.ತಿಮ್ಮಯ್ಯ, ಉದ್ಯಮಿ ಇಮ್ಯೂನ್ಯವಲ್ ಟಿ. . ರಾಮಪುರಮ್ ಅವರನ್ನು ಸನ್ಮಾನಿಸಲಾಯಿತು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟೇಷನ್ ಮ್ಯಾನೇಜ್‌ಮೆಂಟ್‌ನ ಸದಸ್ಯ ಕಾರ್ಯದರ್ಶಿ ಡಾ.ಎಸ್.ಜಾನ್ ಮನುರಾಜ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಎ.ಎ.ಚಂಗಪ್ಪ, ಎಂ.ಸಿ.ಕಾರ್ಯಪ್ಪ, ಕಾರ್ಯದರ್ಶಿ ಸಿ.ಕೆ.ಬೆಳ್ಯಪ್ಪ, ಸಹ ಕಾರ್ಯದರ್ಶಿ ಸರಸ್ವತಿ, ವಕ್ತಾರ ಕೆ.ಕೆ.ವಿಶ್ವನಾಥ್, ಸರ್ಕಾರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕೊಡಗು ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಹಿರಿಯ ಬೆಳೆಗಾರರಾದ ಕೆ.ಪಿ.ಉತ್ತಪ್ಪ, ಬೋಸ್ ಮಂದಣ್ಣ, ಎನ್.ಯು.ಅಪ್ಪಯ್ಯ, ಪಿ.ಎಸ್. ಗಣಪತಿ, ಗೋವಿಂದಪ್ಪ ಜಯರಾಮ್, ತಾರಾ ಅಯ್ಯಮ್ಮ, ಕರ್ನಾಟಕ ಕಾಫಿ ಅಸೋಸಿಯೇಷನ್ ಉಪಾಧ್ಯಕ್ಷ ಸಲ್ಮಾನ್ ಬಷೀರ್, ನಿಕಟಪೂರ್ವ ಅಧ್ಯಕ್ಷ ಕೆ.ರಾಜೀವ್, ಕೊಡಗು ಮಹಿಳಾ ಕಾಫಿ ಜಾಗೃತಿ ಸಮಿತಿ ಅಧ್ಯಕ್ಷೆ ಜ್ಯುತಿಕಾ ಬೋಪಣ್ಣ ಪಾಲ್ಗೊಂಡಿದ್ದರು.

ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ 146ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು
ಉದ್ಯಮಿ ಇಮ್ಯೂನ್ಯವಲ್ ಟಿ. ರಾಮಪುರಮ್ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮಾಯಮುಡಿಯ ಪ್ರಗತಿ ಪರ ಕೃಷಿಕ ಕೆ.ಎಂ.ತಿಮ್ಮಯ್ಯ ಹಾಗೂ ಶನಿವಾರಸಂತೆಯ ಪ್ರಗತಿ ಪರ ಕರಿಮೆಣಸು ಬೆಳೆಗಾರ ಕೆ.ಎಂ.ಕಾಂತರಾಜು ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.