ADVERTISEMENT

ಮಡಿಕೇರಿ ದಸರಾ: ಚೈತನ್ಯ ತುಂಬಿದ ಜಾನಪದ ಸೊಗಡು

ಪ್ರೇಕ್ಷಕರ ಮನ ಸೆಳೆದ ಪ್ರಥಮ ಜಾನಪದ ಉತ್ಸವ, ಮೆರವಣಿಗೆಯ ವೈಭವ

ಅದಿತ್ಯ ಕೆ.ಎ.
Published 3 ಅಕ್ಟೋಬರ್ 2019, 19:30 IST
Last Updated 3 ಅಕ್ಟೋಬರ್ 2019, 19:30 IST
ಜಾನಪದ ಉತ್ಸವದಲ್ಲಿ ಡೊಳ್ಳು ಕುಣಿತದ ಆಕರ್ಷಣೆ
ಜಾನಪದ ಉತ್ಸವದಲ್ಲಿ ಡೊಳ್ಳು ಕುಣಿತದ ಆಕರ್ಷಣೆ   

ಮಡಿಕೇರಿ: ಐತಿಹಾಸಿಕ ‘ಮಡಿಕೇರಿ ದಸರಾ’ ಅಂಗವಾಗಿ ಜಾನಪದ ಪರಿಷತ್‌ ಆಶ್ರಯದಲ್ಲಿ ಇದೇ ಪ್ರಥಮ ಬಾರಿಗೆ ಆಯೋಜಿಸಿದ್ದ‘ಜಾನಪದ ಉತ್ಸವ’ ಅದರ ಸೊಗಡನ್ನು ಮಂಜಿನ ನಗರಿಯ ಕಲಾ ಆರಾಧಕರಿಗೆ, ಪ್ರವಾಸಿಗರಿಗೆ ಉಣಬಡಿಸಿತು.

ಈ ನಾಡಿನ ಮಣ್ಣಿನಲ್ಲಿ ಅಡಕವಾಗಿರುವ ಜಾನಪದ ಚೈತನ್ಯ, ಅದರ ಮೌಲ್ಯವು ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಹೂವಾಗಿ ಅರಳಿತು. ಅದರ ಪ್ರಸ್ತುತತೆಯನ್ನು ಇಡೀ ಕಾರ್ಯಕ್ರಮವು ಒತ್ತಿ ಹೇಳಿತು. ಉತ್ಸವ ಉದ್ಘಾಟಿಸಿದ ಗಣ್ಯರೂ, ‘ಜಾನಪದ ವಿಷಯವು ಶಿಕ್ಷಣ ಭಾಗವಾಗಲಿ’ ಎಂದು ಪ್ರತಿಪಾದಿಸಿದರು.

ಇಷ್ಟು ದಿನ ಯುವ ಮನಸ್ಸು ಹಾಗೂ ಮಕ್ಕಳನ್ನು ಸೆಳೆಯುತ್ತಿದ್ದ ಕಲಾ ಸಂಭ್ರಮ ವೇದಿಕೆಯು ಗುರುವಾರ ಎಲ್ಲ ವಯೋಮಾನದ ಪ್ರೇಕ್ಷಕರನ್ನೂ ತನ್ನತ್ತ ಸೆಳೆದುಕೊಂಡಿತು. ಅದರು ನಡುವೆಯೂ ಪ್ರೇಕ್ಷಕರ ಕೊರತೆ ಸ್ವಲ್ಪ ಕಾಡಿದ್ದು ಸತ್ಯ.

ರಾಮನಗರ ಪಾರ್ಥಸಾರಥಿ ತಂಡದ ಡೊಳ್ಳು ಕುಣಿತ, ಮದ್ದೂರಿನ ವೀರಗಾಸೆ, ಮಾಲ್ದಾರೆಯ ಚಂಡೆ ವಾದ್ಯವು ತಮ್ಮ ಅಗತ್ಯವನ್ನು ಪ್ರತಿಪಾದಿಸಿದವು. ಅಷ್ಟಲ್ಲದೇ ನಮ್ಮದು ಅಬ್ಬರವಲ್ಲ, ನಾದ ಲೋಕಕ್ಕೆ ಕೊಂಡೊಯ್ಯುವ ಸಾಧನೆವೆಂಬ ಸಂದೇಶ ಸಾರಿದವು.

ADVERTISEMENT

‘ದಫ್‌’ ನೃತ್ಯವೂ ಏಕತೆ ಸಂದೇಶ ಸಾರಿದರೆ; ಕಡಗಡಾಳು ಸರ್ಕಾರಿ ಶಾಲಾ ಮಕ್ಕಳ ಕುಂದಲಿ ಕ್ಯಾಮ್‌ ನೃತ್ಯವು ವನ್ಯಜೀವಿ ಸಂರಕ್ಷಣೆ ಕುರಿತು ಹೇಳಿತು.ಅರೆಭಾಷೆ ನೃತ್ಯ ಸೊಬಗು, ಲಿಟ್ಲ್‌ ಫ್ಲವರ್‌ ಶಿಕ್ಷಕಿಯರ ಜಾನಪದ ಹಾಡು, ಬೊಳಕಾಟ್‌, ಪಟಕುಣಿತ, ಪೂಜಾಕುಣಿತ, ಗೊಂದಳ್ಳಿ ಹಾಡು, ಮಡಿಕೇರಿಯ ನಾಟ್ಯ ಗಣಪತಿ ತಂಡದಿಂದ ಸುಗ್ಗಿ ಕುಣಿತ, ಸ್ಫೂರ್ತಿ ಮಹಿಳಾ ತಂಡದಿಂದಜಾನಪದಹಾಡು, ಸೋಮವಾರಪೇಟೆಯ ಕಾವೇರಿ ಕಲಾ ತಂಡದಿಂದ ಜನಪದ ನೃತ್ಯ, ಹಿರಿಯ ಕಲಾವಿದೆ ರಾಣಿಮಾಚಯ್ಯ ತಂಡದಿಂದ ಉಮ್ಮತ್ತಾಟ್ ಕಲಾ ಆರಾಧಕರ ಮನ ಸೆಳೆದವು. ಅಲ್ಲದೇ ಜಾನಪದ ಪರಿಕರಗಳ ವಸ್ತು ಪ್ರದರ್ಶನವೂ ಆಕರ್ಷಕವಾಗಿತ್ತು.

ಮೆರವಣಿಗೆ ವೈಭವ:ಜನರಲ್‌ ತಿಮ್ಮಯ್ಯ ವೃತ್ತದಿಂದ ಕಲಾ ಜಾಥಾ ಆರಂಭಗೊಂಡಿತು. ಎಲ್ಲ ತಂಡಗಳೂ ಪ್ರದರ್ಶನ ನೀಡುತ್ತಲೇ ವೇದಿಕೆ ಆವರಣಕ್ಕೆ ತಲುಪಿದವು.

ಪಠ್ಯದಲ್ಲಿ ಸೇರ್ಪಡೆಗೆ ಒತ್ತಾಯ: ಪುತ್ತೂರಿನ ವಾಗ್ಮಿ ಕೃಷ್ಣ ಉಪಾಧ್ಯಾಯ ಮಾತನಾಡಿ, ‘ಜಾನಪದವು ಶಿಕ್ಷಣದಲ್ಲಿ ಅಡಕವಾಗಬೇಕು’ ಎಂದು ಕೋರಿದರು.

‘ಜಾನಪದ ಹಾಡುಗಳಲ್ಲಿ ಮೌಲ್ಯ ಇರುತ್ತದೆ. ತಂದೆ, ತಾಯಿ ಹಾಗೂ ಹಿರಿಯರನ್ನು ಗೌರವಿಸುವಂತೆ ಜಾನಪದ ಹೇಳುತ್ತದೆ. ಜಾನಪದ ಹುಟ್ಟಿದ್ದು ಅನಕ್ಷರಸ್ಥರಿಂದಲೇ ಆಗಿದ್ದರೂ, ಅದಕ್ಕೆ ಸಾಕಷ್ಟು ಮೌಲ್ಯವಿದೆ’ ಎಂದು ನುಡಿದರು.

‘ಭೂಮಿಯ ಫಲವತ್ತತೆ ಉಳಿಯಬೇಕಾದರೆ ಪ್ಲಾಸ್ಟಿಕ್‌ ಮುಕ್ತವಾಗಬೇಕು. ಪ್ಲಾಸ್ಟಿಕ್‌ ತುಂಬಿಸಿದರೆ ಜಾನಪದಕ್ಕೆ ಮಾಡುವ ಅವಮಾನ’ ಎಂದು ಎಚ್ಚರಿಕೆ ನುಡಿ ಹೇಳಿದರು.

‘ಕರಾವಳಿ ಭಾಗದಲ್ಲಿ ಇರುವ ಜಾನಪದೀಯ ಸಂಗತಿಗಳನ್ನು ಪಠ್ಯದಲ್ಲಿ ಸೇರಿಸುವಂತೆ ಒತ್ತಾಯಿಸಿದಾಗ ಅದು ಮೂಢನಂಬಿಕೆ ಎಂಬ ಮಾತು ಅಧಿಕಾರಿಗಳ ವಲಯದಿಂದಲೇ ಕೇಳಿಬಂತು. ವೇದದಷ್ಟೇ ಜಾನಪದ ಪ್ರಾಕಾರಗಳೂ ಪ್ರಾಮುಖ್ಯವಾದವು’ ಎಂದು ಪ್ರತಿಪಾದಿಸಿದರು.

ಕರ್ನಾಟಕ ಜಾನಪದ ‍ಪರಿಷತ್‌ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ‘ಕೊಡಗು ಘಟಕವು ಸಾಂಸ್ಕೃತಿಕ ಹಾಗೂ ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದೆ. ಇದು ರಾಜ್ಯಕ್ಕೆ ಮಾದರಿ ಪರಿಷತ್‌’ ಎಂದು ಹೇಳಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್‌ ದೇವಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌, ಜಾನಪದ್‌ ಪರಿಷತ್‌ ಉತ್ಸವ ಸಮಿತಿ ಸಂಚಾಲಕ ಎಚ್‌.ಟಿ. ಅನಿಲ್‌, ಆರ್‌.ಬಿ. ರವಿ, ಎಸ್‌.ಐ. ಮುನೀರ್‌ ಅಹ್ಮದ್‌ ಚಂದ್ರಮೋಹನ್‌, ಮಹೇಶ್‌ ನಾಚಯ್ಯ, ಸುಮಿ ಸುಬ್ಬಯ್ಯ, ಎಸ್‌.ಡಿ. ಪ್ರಶಾಂತ್‌, ಸುಜಲಾದೇವಿ, ರುಬಿನಾ ಹಾಜರಿದ್ದರು.

ಸನ್ಮಾನ:ಇದೇ ವೇಳೆ ಸಂಗೀತ ಕ್ಷೇತ್ರದಿಂದ ಚಕ್ಕೇರ ತ್ಯಾಗರಾಜ್‌, ಕನ್ನಡ ಭಾಷಾ ಕ್ಷೇತ್ರದಿಂದ ಬಿ.ಎಸ್‌.ಲೋಕೇಶ್‌ ಸಾಗರ್‌, ಸಾಹಿತ್ಯ ಸೇವೆ ಕ್ಷೇತ್ರದಿಂದ ವೈಲೇಶ್ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.