ದಸರೆ
ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವ ಆರಂಭವಾಗಲು ಇರುವುದು ಇನ್ನು ಕೇವಲ 6 ದಿನಗಳು ಮಾತ್ರ. ಹೀಗಿದ್ದರೂ, ಅತಿಥಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಸರ್ಕಾರದಿಂದ ಅನುದಾನವೂ ಘೋಷಣೆಯಾಗಿಲ್ಲ. ಪ್ರತಿವರ್ಷದಂತೆ ಈ ವರ್ಷವೂ ಅಂತಿಮ ಗಳಿಗೆಯಲ್ಲೇ ನಡೆಯಬೇಕಿದೆ ಸಿದ್ಧತೆ. ಕಾಡಿ ಬೇಡಿಯೇ ಅನುದಾನ ತರಬೇಕಿದೆ.
ಇದು ಸದ್ಯ ಮಡಿಕೇರಿ ದಸರಾ ಜನೋತ್ಸವದ ಚಿತ್ರಣ. ಮೈಸೂರು ದಸರೆಯಂತೆ ಮುಂಚಿತವಾಗಿ ಅನುದಾನ ಇಲ್ಲಿ ಘೋಷಣೆಯಾಗುವುದೂ ಇಲ್ಲ, ಸಭೆಗಳೂ ನಡೆಯುವುದಿಲ್ಲ. ಯಾವುದೇ ರೂಪುರೇಷೆಯೂ ಸಿದ್ಧವಾಗುವುದಿಲ್ಲ. ದಸರಾ ದಿನಾಂಕ ಸಮೀಪಿಸಿದರೂ ಕರೆಯುವ ಅತಿಥಿಗಳ ಪಟ್ಟಿಯೂ ಅಂತಿಮವಾಗುವುದಿಲ್ಲ.
ಜಿಲ್ಲಾಧಿಕಾರಿ ವೆಂಕಟರಾಜಾ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಡಿಕೇರಿ ನಗರ ದಸರಾ ಸಮಿತಿ ಪ್ರಮುಖರ ಸಭೆಯಲ್ಲಿಯೂ ಸಹ ಅತಿಥಿಗಳು ಅಂತಿಮಗೊಳ್ಳದೇ ಕೇವಲ ಕಾರ್ಯಕ್ರಮದ ಪಟ್ಟಿಯಷ್ಟೇ ನಿಗದಿಯಾಯಿತು.
ಮಡಿಕೇರಿ ದಸರಾ ಜನೋತ್ಸವದಲ್ಲಿ ಸಾಂಸ್ಕೃತಿಕ, ಸ್ವಾಗತ, ವೇದಿಕೆ, ಕವಿಗೋಷ್ಠಿ, ಕ್ರೀಡೆ, ಅಲಂಕಾರ, ಹೀಗೆ ಕೆಲವಾರು ಸಮಿತಿಗಳಿವೆ. ಈ ಸಮಿತಿಗಳಿಗೆ ನಿರ್ದಿಷ್ಟವಾಗಿ ಇಂತಿಷ್ಟು ಅನುದಾನ ಎಂದು ಮೊದಲೇ ಘೋಷಣೆಯಾಗುವುದಿಲ್ಲ. ಘೋಷಣೆಯ ನಂತರ ತಕ್ಷಣವೇ ಬಿಡುಗಡೆಯೂ ಆಗುವುದಿಲ್ಲ. ಹೀಗಾಗಿ, ಈ ಸಮಿತಿಗಳು ತಮ್ಮ ವ್ಯಾಪ್ತಿಯ ಕಾರ್ಯಕ್ರಮಗಳ ಅತಿಥಿಗಳನ್ನು ಬೇಗನೇ ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಕಾರ್ಯಕ್ರಮದ ರೂಪುರೇಷೆಯನ್ನು ಅಂತಿಮಗೊಳಿಸಲೂ ಸಾಧ್ಯವಾಗುತ್ತಿಲ್ಲ. ಎಲ್ಲವೂ ಗೊಂದಲದ ಗೂಡಾಗುತ್ತಿದೆ.
ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಜನೋತ್ಸವಕ್ಕೆ ಅನುದಾನವನ್ನು ಸರ್ಕಾರ ಬಜೆಟ್‌ನಲ್ಲೇ ನಿಗದಿಪಡಿಸಬೇಕು, ಬಜೆಟ್ ಮಂಡನೆ ವೇಳೆಯೇ ಘೋಷಿಸಬೇಕು ಎನ್ನುವ ಇಲ್ಲಿನ ದಸರೆ ಪ್ರಿಯರ ಕೂಗು ಯಾವ ಸರ್ಕಾರವನ್ನೂ ತಲುಪಿಲ್ಲ. ಎಲ್ಲ ಸರ್ಕಾರಗಳು ಕೊನೆಗಳಿಗೆಯಲ್ಲೇ ಒಂದಿಷ್ಟು ಅನುದಾನ ನೀಡಿ ಸುಮ್ಮನಾಗುತ್ತಿವೆ. ಪ್ರತಿ ವರ್ಷವೂ ಇಲ್ಲಿನ ವಿವಿಧ ದಸರಾ ಸಮಿತಿಗಳ ಸದಸ್ಯರು ಜನಪ್ರತಿನಿಧಿಗಳಿಗೆ ಮನವಿ ಮಾಡಬೇಕಾಗಿದೆ.
ಈ ಬಗೆಯ ನೀತಿಯಿಂದಾಗಿ ಕೊನೆಗಳಿಗೆಯಲ್ಲಿ ಕೂಗಳತೆಯಲ್ಲಿ ಸಿಕ್ಕ ಅತಿಥಿಗಳಿಗೆ ಮಣೆ ಹಾಕಬೇಕಾಗಿದೆ. ದೂರದ ಅತಿಥಿಗಳಿಗೆ ಒಂದಷ್ಟು ದಿನಗಳ ಮೊದಲೇ ಆಹ್ವಾನ ನೀಡಬೇಕಾಗುತ್ತದೆ. ಕನಿಷ್ಠ ಪಕ್ಕದ ಜಿಲ್ಲೆಯ ಅತಿಥಿಗಳೂ ಬಹಳಷ್ಟು ದಸರೆಗೆ ಲಭ್ಯರಾಗುವುದಿಲ್ಲ. ಅನುದಾನ ಕೈಗೆ ಸಿಗದೇ ಯಾವುದೂ ಅಂತಿಮವಾಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.