ADVERTISEMENT

ಹೊಸ ಡಿ.ಸಿಗೆ ಸಾಲು ಸಾಲು ಹಳೆ ಸಮಸ್ಯೆ:ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 5:12 IST
Last Updated 7 ಜನವರಿ 2026, 5:12 IST
ಕೊಡಗು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸಂವಾದದಲ್ಲಿ ಮಾತನಾಡಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನುಕಾರ್ಯಪ್ಪ ಭಾಗವಹಿಸಿದ್ದರು
ಕೊಡಗು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸಂವಾದದಲ್ಲಿ ಮಾತನಾಡಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನುಕಾರ್ಯಪ್ಪ ಭಾಗವಹಿಸಿದ್ದರು   

ಮಡಿಕೇರಿ: ಹೊಸ ಜಿಲ್ಲಾಧಿಕಾರಿ ಎಸ್.ಜಿ.ಸೋಮಶೇಖರ್ ಅವರಿಗೆ ಎದುರಾಗಿದ್ದು ಸಾಲು ಸಾಲು ಹಳೆಯ ಸಮಸ್ಯೆಗಳು.

ಇಲ್ಲಿನ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ನಡೆದ ಸಂವಾದದಲ್ಲಿ ಹಲವು ಸಮಸ್ಯೆಗಳು ಪ್ರತಿಧ್ವನಿಸಿದವು.

ಕೊಡಗೆಂದರೆ ರಾಜ್ಯದ ‘ಸ್ಕಾಟ್‌ಲ್ಯಾಂಡ್’, ಪ್ರಕೃತಿ ಸೌಂದರ್ಯದ ತಾಣ ಎಂಬ ಭಾವನೆಯಲ್ಲೇ ಬಂದಿದ್ದ ಅವರಿಗೆ ಇಲ್ಲಿ ಕಂಡಿದ್ದು ಸಾಲು ಸಾಲು ಸಮಸ್ಯೆಗಳು. ಮನವಿಗಳ ಮಹಾಪೂರ. ಎಲ್ಲವನ್ನೂ ತಮ್ಮ ಡೈರಿಯಲ್ಲಿ ಬರೆದುಕೊಂಡ ಅವರು ಆದ್ಯತೆಯ ವಿಷಯವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.

ADVERTISEMENT

ಸಂವಾದಕ್ಕೂ ಮೊದಲೇ ಸಂಘದ ಅಧ್ಯಕ್ಷ ಬಾಚರಣಿಯಂಡ ಅನುಕಾರ್ಯಪ್ಪ ಅವರು ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

ನೆರೆ ಸಂತ್ರಸ್ತರಿಗೆ ಇನ್ನೂ ಮನೆ ಕೊಟ್ಟಿಲ್ಲ, ಇನ್ಫೋಸಿಸ್ ವತಿಯಿಂದ ನಿರ್ಮಿಸಿದ ಮನೆಗಳನ್ನೂ ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿಲ್ಲ, ನದಿ ತೀರದಲ್ಲಿ ಮನೆ ಕಟ್ಟಲು ಅವಕಾಶ ಕೊಡಬಾರದು, ನಾಯಿಮರಿಗಳನ್ನು ಬೀದಿ ಬದಿಯಲ್ಲಿ ಬಿಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ರಾಜಾಸೀಟ್ ಸುತ್ತಮುತ್ತ ವಾಹನ ದಟ್ಟಣೆ, ಅನಧಿಕೃತ ಹೋಂಸ್ಟೇಗಳು ಹೀಗೆ ಅನೇಕ ಸಮಸ್ಯೆಗಳನ್ನು ಅವರು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸೋಮಶೇಖರ್ ಅವರು, ‘ನೆರೆ ಸಂತ್ರಸ್ಥರಿಗೆ ಮನೆ ಕೊಡಲು ಕ್ರಮ ವಹಿಸುವೆ, ನದಿ ತೀರದಲ್ಲಿ ಬಫರ್‌ ವಲಯವನ್ನು ಕಡ್ಡಾಯವಾಗಿ ಬಿಡಲೇಬೇಕು, ಬೀದಿ ನಾಯಿ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ, ವಾಹನ ದಟ್ಟಣೆ, ನಿಲುಗಡೆ ಸಮಸ್ಯೆ ನಿವಾರಣೆಗೆ ಕಾಲಾವಕಾಶ ಬೇಕು, ಹೋಂಸ್ಟೇಗಳಿಗೆ ಸಂಬಂಧಿಸಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿನ ಸ್ಥಿತಿ ಅಧ್ಯಯನ ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಅವರು, ಕಾವೇರಿ ನದಿ ಕಲುಷಿತವಾಗಿರುವ ಕುರಿತು ಪ್ರಸ್ತಾಪಿಸಿದರು. ಜೊತೆಗೆ, ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಸಮರ್ಪಕವಾಗಿ ಅನುಷ್ಠಾನವಾಗದಿರುವ ಕುರಿತು ಮಾತನಾಡಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಈ ಸಂಬಂಧ ನಾನು ಈಗಾಗಲೇ ‍ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಜೊತೆ ಮಾತನಾಡಿರುವೆ’ ಎಂದರು.

ಸಂಘದ ರಾಜ್ಯ ನಿರ್ದೇಶಕಿ ಬಿ.ಆರ್.ಸವಿತಾ ರೈ ಅವರು, ನಗರದಲ್ಲಿ ತಲೆ ಎತ್ತಿರುವ ತಾತ್ಕಾಲಿಕ ಶೆಡ್‌ಗಳು, ಬೀದಿನಾಯಿಗಳ ಹಾವಳಿ, ನಿಯಮ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಹಲವು ಕಟ್ಟಡಗಳು, ಕಸ ವಿಲೇವಾರಿ, ಅನಧಿಕೃತ ಹೋಂಸ್ಟೇಗಳ ಸಮಸ್ಯೆ ಕುರಿತು ವಿಷಯ ಪ್ರಸ್ತಾಪಿಸಿದರು.

ಪತ್ರಕರ್ತರಾದ ಟಿ.ಆರ್.ಪ್ರಭುದೇವ್, ಗೋಪಾಲ್ ಸೋಮಯ್ಯ, ರವಿಕುಮಾರ್, ಮಲ್ಲಿಕಾರ್ಜುನ, ಜೆರಾಲ್ಡ್ ಥೋಮಸ್, ವಿಶ್ವಕುಂಬೂರು, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಸೇರಿದಂತೆ ಹಲವು ಮಂದಿ ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಜಿಲ್ಲಾಧಿಕಾರಿ ಗಮನ ಸೆಳೆದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಸಂಘದ ಖಜಾಂಚಿ ಸುನಿಲ್ ಪೊನ್ನೇಟಿ ಭಾಗವಹಿಸಿದ್ದರು.

‘ರಸ್ತೆ ಬಗ್ಗೆ ಅತೀವ ನಿರ್ಲಕ್ಷ್ಯ’

ಕೊಡಗು ಜಿಲ್ಲೆಯಲ್ಲಿನ ರಸ್ತೆಗಳ ಕುರಿತು ಅತೀವ ನಿರ್ಲಕ್ಷ್ಯ ವಹಿಸಲಾಗಿದೆ. ಈ ಸಂಬಂಧ ಗಮನ ಹರಿಸುವಂತೆ ಪತ್ರಿಕೋದ್ಯಮಿ ಜಿ.ರಾಜೇಂದ್ರ ಮನವಿ ಮಾಡಿದರು. ಇದಕ್ಕಾಗಿ ಜಿಲ್ಲಾ ಪಂಚಾಯಿತಿ ನಗರಸಭೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಒಟ್ಟಾಗಿ ಸಭೆ ಮಾಡಬೇಕು ಎಂದು ಸಲಹೆ ನೀಡಿದರು. ಜೊತೆಗೆ ಸಂಪಿಗೆ ಕಟ್ಟೆ ಬಳಿ ರಸ್ತೆ ತೀರಾ ಅಪಾಯಕಾರಿಯಾಗಿದೆ. ಹಿಂದಿನ ಯುಜಿಡಿ ಯೋಜನೆ ಹಾಗೂ ಈ ನಡೆಯುತ್ತಿರುವ ಅಮೃತ್–2 ಯೋಜನೆಯಿಂದಾಗುತ್ತಿರುವ ತೊಂದರೆಗಳ ಕುರಿತು ಗಮನ ಸೆಳೆದರು.

ಜಿಲ್ಲಾಧಿಕಾರಿ ಹೇಳಿದ್ದೇನು ?

* ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಕಾಲಮಿತಿಯೊಳಗೆ ಪರಿಹರಿಸಲು ಪ್ರಯತ್ನ ಮಾಡುವೆ

* ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ವೇಳೆ ಪೃಕೃತಿಗೆ ಹಾನಿಯಾಗದಂತೆ ನೋಡಿಕೊಳ್ಳಲು ವ್ಯಯಕ್ತಿಕವಾಗಿಯೂ ಕಾಳಜಿ ವಹಿಸುವೆ

* ಅಕ್ಕಪಕ್ಕದ ರಾಜ್ಯಗಳಲ್ಲಿ ಹೋಂಸ್ಟೇ ವ್ಯವಸ್ಥೆ ಹೇಗೆ ಕಾರ್ಯಾಚರಿಸುತ್ತಿದೆ ಎನ್ನುವುದನ್ನು ಅಧ್ಯಯನ ಮಾಡಿ ಕೊಡಗಿನಲ್ಲೂ ಯಾವುದೇ ಸಮಸ್ಯೆ ಆಗದಂತೆ ಹೋಂಸ್ಟೇ ನಡೆಸಲು ಅವಕಾಶ ಮಾಡಿಕೊಡಲಾಗುವುದು.

* ನೆರೆ ಸಂತ್ರಸ್ತರಿಗೆ ಶೀಘ್ರ ವಸತಿ ಸೌಲಭ್ಯ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು

* ಕೊಡಗಿನಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಳೆ ಸುರಿದಿದ್ದು ವೇಗವಾಗಿ ಬೆಳೆಯುತ್ತಿರುವ ನಗರೀಕರಣ ಇಳಿಜಾರಿನ ಪ್ರದೇಶದಲ್ಲಿ ಅವೈಜ್ಞಾನಿಕ ಕೆಲಸಗಳಿಂದ ಭೂಕುಸಿತಗಳು ಸಂಭವಿಸಿವೆ. ಹಾಗಾಗಿ ಭೂಪರಿವರ್ತನೆಗೆ ಅನುಮತಿ ಕೊಡುವಾಗ ಸಾಕಷ್ಟು ಯೋಚಿಸಬೇಕಾಗಿದೆ.

* ವಾಹನ ದಟ್ಟಣೆ ವಾಹನ ನಿಲುಗಡೆ ಸಮಸ್ಯೆ ನಿವಾರಣೆಗೆ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಪರ್ಯಾಯ ಕ್ರಮಗಳ ಬಗ್ಗೆ ಚಿಂತನೆ ಹರಿಸಲಾಗುವುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.