
ನಾಪೊಕ್ಲು: ಕಣ್ಣುಗಳೆರಡು ಸಾಲದಮ್ಮ ನಿನ್ನ ನೋಡಲು... ಈ ಭಕ್ತಿಗೀತೆಯ ಶುಶ್ರಾವ್ಯ ಧ್ವನಿ ಕಿವಿಗೆ ಬಿದ್ದಾಗ ಎಲ್ಲರೂ ತನ್ಮಯರಾಗುತ್ತಾರೆ. ಪೂರ್ತಿ ಹಾಡಿಗೆ ಕಿವಿಗೊಡುತ್ತಾರೆ.
ಬಲಮುರಿಯ ಅಗಸ್ತೇಶ್ವರ ದೇವಾಲಯದ ಪ್ರಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಲಮುರಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಗೀತ ಗಾಯನ ಕಾರ್ಯಕ್ರಮದಲ್ಲಿ ಹಲವರ ಮನ ಸೂರೆಗೊಂಡ ಈ ಗಾಯಕ ರವಿ ಓಂಕಾರ್.
ಇವರು ನಾಪೋಕ್ಲುವಿನ ಬೇತು ಗ್ರಾಮದವರು. ನಾಪೋಕ್ಲು ಹೋಬಳಿ ವ್ಯಾಪ್ತಿಯ ದೇವಾಲಯಗಳಲ್ಲಿ ನಡೆಯುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿನ ಭಕ್ತಿ ಗೀತೆ ಗಾಯನ ಕಾರ್ಯಕ್ರಮದಲ್ಲಿ ಕೇಳಿ ಬರುವ ಮೊದಲ ಹೆಸರು ರವಿ ಓಂಕಾರ್. ಸ್ಥಳೀಯ ಕಲಾವಿದರ ಸಮೂಹ ಓಂಕಾರ್‌ನಲ್ಲಿ ರವಿ ಹೆಸರು ಜನಜನಿತ. ಕಳೆದ ಹತ್ತು ಹದಿನೈದು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ರವಿ ಸುಶ್ರಾವ್ಯವಾಗಿ ಹಾಡುತ್ತಾರೆ, ವೀಕ್ಷಕರನ್ನು ಸೆಳೆಯುತ್ತಾರೆ.
ಕಾವೇರಿ ಸಂಕ್ರಮಣ, ಬಲಮುರಿ ಜಾತ್ರೆ, ಶಿವರಾತ್ರಿ ಹೀಗೆ ವಿವಿಧ ಹಬ್ಬಗಳಲ್ಲಿ ದೇವಾಲಯಗಳಲ್ಲಿ ನಡೆಯುವ ಪೂಜೆ ಪುನಸ್ಕಾರಗಳ ಜೊತೆಯಲ್ಲಿ ಆಯೋಜಿಸಲಾಗುವ ಭಕ್ತಿ ಗೀತೆ ಗಾಯನ ಕಾರ್ಯಕ್ರಮ ವೀಕ್ಷಕರ ಮನಸೆಳೆಯುತ್ತದೆ. ಇಲ್ಲಿ ರವಿ ಮೈಕ್ ಹಿಡಿದರೆಂದರೆ ಶುಶ್ರಾವ್ಯವಾಗಿ ಭಕ್ತಿ ಗೀತೆಗಳ ಗಾಯನ ಹೊರಹೊಮ್ಮುತ್ತದೆ. ಹಾಡಿನ ಮೋಡಿಗೆ ವೀಕ್ಷಕರು ತಲೆದೂಗುತ್ತಾರೆ.
ಓಂಕಾರ್ ತಂಡವನ್ನು ಕಟ್ಟಿಕೊಂಡು ರವಿ ಚಿರಪರಿಚಿತರಾಗಿದ್ದಾರೆ. ನಾಪೋಕ್ಲು ಸುತ್ತಮುತ್ತ ಸಂಗೀತದ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಓಂಕಾರ್ ತಂಡದಲ್ಲಿ ಪ್ರಮೀಳಾ, ಮುಬಾರಕ್, ಪನಿಲ್, ಟೆರಿನಾ, ಮಿಷನ್ ಬಿದ್ದಪ್ಪ ಸೇರಿದಂತೆ ಹಲವು ಸ್ಥಳೀಯ ಕಲಾವಿದರಿದ್ದಾರೆ. ಭಕ್ತಿಗೀತೆ, ಭಾವಗೀತೆ, ಚಲನಚಿತ್ರ ಗೀತೆಗಳು ವೀಕ್ಷಕರ ಮನಸೂರೆಗೊಳ್ಳುತ್ತವೆ. ಮಡಿಕೇರಿ, ಕುಶಾಲನಗರ ಸೇರಿದಂತೆ ಕೊಡಗಿನ ಹಲವೆಡೆ ಇವರು ಗೀತ ಗಾಯನ ಕಾರ್ಯಕ್ರಮಗಳು ನಡೆಸಿಕೊಟ್ಟಿದ್ದಾರೆ. ಬೆಂಗಳೂರು, ಮೈಸೂರು, ಹೊಳೆನರಸೀಪುರ, ಹಾಸನ ಭಾಗಗಳಿಗೂ ಇವರ ಗಾಯನ ಸುಧೆ ವಿಸ್ತರಿಸಿದೆ. ರವಿ ನಾಪೋಕ್ಲುವಿನಲ್ಲಿ ಪಿಗ್ಮಿ ಸಂಗ್ರಹಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರವಿ ಗಾಯನವನ್ನು ಮನೆಯಲ್ಲೇ ಕಲಿತವರು. ಇಲ್ಲಿನ ಸಂಗೀತ ಶಿಕ್ಷಕಿ ಸರಸ್ವತಿ ಮನೋಹರಿ ಅವರಿಂದ ಲಘು ಸಂಗೀತವನ್ನು ಸ್ವಲ್ಪಮಟ್ಟಿಗೆ ಅಭ್ಯಾಸ ಮಾಡಿದ್ದಾರೆ. ಉಳಿದಂತೆ, ತಮ್ಮ ಪ್ರತಿಭೆಯಿಂದಲೇ ಅವರು ಮೇಲೆ ಬಂದರು.
ಬಿ.ಕಾಂ.ಪದವಿ ಗಳಿಸಿರುವ ಅವರು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಜಿಲ್ಲಾಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಜಿಲ್ಲಾಮಟ್ಟದ ಅಂತರ ಕಾಲೇಜು ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಮಿಂಚಿದ ಪ್ರತಿಭೆ
ಈಚೆಗೆ ಬೆಂಗಳೂರಿನ ಸ್ನೇಹ ಸ್ಪಂದನ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಕೊಡಗಿನ ಓಂಕಾರ್ ರವಿ ಭಾಗವಹಿಸಿ ಬಹುಮಾನಕ್ಕೆ ಭಾಜನರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸ್ನೇಹ ಸ್ಪಂದನ ಬೆಂಗಳೂರಿನ ಗಿರಿನಗರದಲ್ಲಿ ಆಯೋಜಿಸಿದ್ದ ನನ್ನೆದೆಯ ಹಾಡು ಸೀಸನ್- 2 ಕರೋಕೆ ಸಂಗೀತ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ.
ಹಲವು ದೇವಾಲಯಗಳಲ್ಲಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ವಿವಿಧೆಡೆ ಭಕ್ತಿಗೀತೆಗಳನ್ನು ಹಾಡಲು ಅವಕಾಶ ಲಭಿಸಿದೆ. ಓಂಕಾರ್ ತಂಡದ ಮೂಲಕ ಸ್ಥಳೀಯ ಹಲವು ಗಾಯಕರಿಗೆ ಹಾಡಲು ಅವಕಾಶ ಲಭಿಸಿದೆ.– ಓಂಕಾರ್ ರವಿ, ಗಾಯಕ ನಾಪೋಕ್ಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.