ಸುಂಟಿಕೊಪ್ಪ: ಸಮೀಪದ ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ಮಲ್ಲಿಕಾರ್ಜುನ ಕಾಲೊನಿಯಲ್ಲಿ ಬದುಕು ಸಾಗಿಸುತ್ತಿರುವ 80 ವರ್ಷ ಬೈರಿ ಮತ್ತು ಮಗ ವಿಶ್ವನಾಥ (ಬಾಡು)(45) ಅವರ ನೆರವಿಗೆ ಜಿಲ್ಲಾಡಳಿತ, ಶಾಸಕರು, ಅಧಿಕಾರಿಗಳು ಮುಂದಾಗಬೇಕಾಗಿದೆ.
ಈ ಬೈರಿ ಅವರ ಪತಿ ಕಳೆದ ಹಲವು ವರ್ಷಗಳ ಹಿಂದೆ ಮೃತರಾಗಿದ್ದು, ಇದ್ದಂತಹ ಮನೆಯು ಗಾಳಿ, ಮಳೆಗೆ ಬಿದ್ದು ಹೋದ ನಂತರದಲ್ಲಿ ಪ್ಲಾಸ್ಟಿಕ್ ಹೊದಿಕೆಯ ತಾತ್ಕಾಲಿಕ ಶೆಡ್ಡಿನಲ್ಲಿ ತಾಯಿ-ಮಗ ಬದುಕು ಸಾಗಿಸುತ್ತಿದ್ದಾರೆ.
ಈ ಬೈರಿಗೆ ಅಣ್ಣು ಮತ್ತು ವಿಶ್ವನಾಥ ಎಂಬಿಬ್ವರೂ ಮಕ್ಕಳಿದ್ದು, ಅಣ್ಣು ಹೊರ ಊರಿನಲ್ಲಿ ನೆಲೆಸಿದ್ದಾರೆ. ಅನಾರೋಗ್ಯಪೀಡಿತನಾದ ಮಗ ವಿಶ್ವನಾಥ ತಾಯಿಯೊಂದಿಗೆ ಬಹಳ ಕಷ್ಟದ ಬದುಕನ್ನು ಸಾಗಿಸುತ್ತಿದ್ದಾರೆ.
ಈ ಬಡ ತಾಯಿ ಬೈರಿಗೆ ಯಾವುದೇ ಗುರುತಿನ ಚೀಟಿಯಾಗಲಿ, ಆಧಾರ್ ಕಾರ್ಡ್, ಪಡಿತರಚೀಟಿ ಆಗಲಿ ಮತ್ತು ಇನ್ನಿತರ ದಾಖಲಾತಿಗಳು ಇಲ್ಲದೆ ಕಳೆದ ಹಲವು ವರ್ಷಗಳಿಂದ ಗಾಳಿ ಚಳಿಯಲ್ಲಿಯೇ ಪ್ಲಾಸ್ಟಿಕ್ ಹೊದಿಕೆಯ ಶೆಡ್ಡಿನಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ.
ಈ ಬಡ ಕುಟುಂಬಕ್ಕೆ ಜಿಲ್ಲಾಡಳಿತ, ಅಧಿಕಾರಿಗಳು, ಶಾಸಕರು ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ನಿವಾಸಿಗಳ ಕೋರಿಕೆಯಾಗಿದೆ.
ಸಮರ್ಪಕವಾದ ಗೋಡೆಗಳಿಲ್ಲದೆ ಪ್ಲಾಸ್ಟಿಕ್ ಹೊದಿಕೆಯಿಂದ ನಿರ್ಮಿಸಿದ ಈಗಲೂ ಆಗಲೂ ಗಾಳಿಯಿಂದ ಹಾರಿಹೋಗುವ ಸ್ಥಿತಿಯಲ್ಲಿ ಭಯದಿಂದಲೇ ಬದುಕು ಸಾಧಿಸುತ್ತಿದ್ದಾರೆ.
ರಭಸದಿಂದ ಬೀಸುವ ಮಳೆ, ಗಾಳಿಗೆ ಎಲ್ಲಿ ಬೀಳುತ್ತದೋ ಎಂಬ ಹೆದರಿಕೆಯಿಂದಲೇ ನಿದ್ದೆ ಮಾಡದೇ ದಿನ ದೂಡುತ್ತಿದ್ದಾರೆ ಈ ತಾಯಿ ಮತ್ತು ಮಗ.
ತಾಯಿ ಬೈರಿಗೆ ಕಿವಿ ಕೇಳದ ಸ್ಥಿತಿಯಲ್ಲಿದ್ದರೆ ಮಗ ವಿಶ್ವನಾಥ ಅನಾರೋಗ್ಯಪೀಡಿತನಾಗಿ ಅಕ್ಕಪಕ್ಕದವರು ನೀಡುವ ಮತ್ತು ತನ್ನ ಮಗ ಅಣ್ಣು ನೀಡುವ ಆಹಾರ ಮತ್ತು ಇನ್ನಿತರ ಸಾಮಗ್ರಿಗಳಿಂದ ತನ್ನ ಬದುಕನ್ನು ಸಾಗಿಸುತ್ತಿದ್ದಾರೆ. ಈ ಬಡ ವೃದ್ಧ ತಾಯಿಗೆ ಸರ್ಕಾರ ಮುಂದಾಗಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
‘ಇಂತಹ ಬದುಕು ಯಾರಿಗೂ ಬರಬಾರದು. ಹರದೂರು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯ ಅದರಲ್ಲೂ ಮುಖ್ಯವಾಗಿ ಪಿಡಿಒ ಮತ್ತು ಈ ಭಾಗಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಸದಸ್ಯರ ನಿರ್ಲಕ್ಷ್ಯದಿಂದಾಗಿ ಇವರ ಬದುಕು ಜರ್ಜರಿತವಾಗಿದೆ. ಗಾಳ ನೀಡಿ ಪ್ಲಾಸ್ಟಿಕ್ ಅನ್ನು ನೀಡದ ಪರಿಸ್ಥಿತಿ ಗ್ರಾಮ ಪಂಚಾಯಿತಿಗೆ ಬಂದಿರುವುದು ದುರಂತ ಎನಿಸಿದೆ’ ಎನ್ನುತ್ತಾರೆ ಸ್ಥಳೀಯರಾದ ಅಬ್ಬಾಸ್.
ಈ ಬಗ್ಗೆ ಮಾಹಿತಿ ನೀಡಿದ ಪಿಡಿಒ ಪೂರ್ಣಿಮಾ, ‘ನಾವು ಅವರ ಬೆಂಬಲಕ್ಕೆ ನಿಂತಿದ್ದೇವೆ. ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹೊದಿಕೆ ನೀಡಲಾಗಿದೆ. ಅವರಿಗೆ ಗ್ರಾಮ ಪಂಚಾಯತಿಯಿಂದ ಸಹಾಯ ಮಾಡಲಾಗುವುದು’ ಎಂದರು.
‘2005ರಿಂದ 2020 ರವರೆಗೆ ನಾನು ಗ್ರಾಮ ಪಂಚಾಯಿತಿಯಲ್ಲಿ ಸದಸ್ಯನಾಗಿ, ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ನೂರಾರು ಬಡ ಕುಟುಂಬದವರಿಗೆ ಮನೆ ಮಂಜೂರಾತಿ ಮಾಡುವ ಸಮಯದಲ್ಲಿ ಬೈರಿಯ ಮಕ್ಕಳಾದ ಅಣ್ಣು ಮತ್ತು ವಿಶ್ವನಾಥ್ ಅವರಿಗೆ ಮನೆ ಮಂಜೂರಾತಿ ಮಾಡಲಾಗಿತ್ತು. ಆದರೆ, ವಿಶ್ವನಾಥ್ ಅವರ ಬಡತನ ಅವರಿಗೆ ಮನೆ ಕಟ್ಟುವುದಕ್ಕೆ ಸಾಧ್ಯವಾಗಲಿಲ್ಲ. ಗ್ರಾಮ ಪಂಚಾಯಿತಿ ಈ ಬಗ್ಗೆ ಗಮನ ಹರಿಸಬಹುದಾಗಿತ್ತು’ ಎನ್ನುತ್ತಾರೆ ಹರದೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಎಂ.ಪಿ ದೇವಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.