ADVERTISEMENT

ಕೊಡಗು: ಮೈದುಂಬಿ ಹರಿಯುತ್ತಿರುವ ಝರಿ, ತೊರೆ

ಜಲಪಾತ ಕಣ್ತುಂಬಿಕೊಳ್ಳಲು ಇದು ಸಕಾಲ, ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲಧಾರೆಗಳು

ಸಿ.ಎಸ್.ಸುರೇಶ್
Published 13 ಸೆಪ್ಟೆಂಬರ್ 2019, 10:28 IST
Last Updated 13 ಸೆಪ್ಟೆಂಬರ್ 2019, 10:28 IST
ನಾಪೋಕ್ಲು ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಜಲಪಾತ ನಯನ ಮನೋಹರವಾಗಿದೆ
ನಾಪೋಕ್ಲು ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಜಲಪಾತ ನಯನ ಮನೋಹರವಾಗಿದೆ   

ನಾಪೋಕ್ಲು: ಮಳೆಯ ಬಿರುಸು ಕಡಿಮೆಯಾಗುತ್ತಿದ್ದಂತೆ ಬೆಟ್ಟ ಶ್ರೇಣಿಗಳಲ್ಲಿ ಹರಿದು ಬರುತ್ತಿರುವ ಜಲಧಾರೆಗಳು ಮನಸೆಳೆಯುತ್ತಿವೆ.

ಮೈದುಂಬಿ ಹರಿಯುತ್ತಿರುವ ಝರಿ ತೊರೆಗಳು ವೀಕ್ಷಕರಿಗೆ ಮುದ ನೀಡುತ್ತಿವೆ. ಸಮೀಪದ ಕಕ್ಕಬ್ಬೆಯ ಮೇದುರ ಜಲಪಾತ, ಚೆಯ್ಯಂಡಾಣೆ ಬಳಿಯ ಚೇಲಾವರ ಜಲಪಾತ, ನೆಲಜಿ ಗ್ರಾಮದ ಪಾರೆಕಟ್ಟು ಜಲಪಾತ, ಪೇರೂರು ಗ್ರಾಮದ ದೇವರಗುಂಡಿ ಜಲಪಾತಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಇವುಗಳಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಹತ್ತು ಹಲವು ಜಲಪಾತಗಳು ಮೈದುಂಬಿ ಹರಿಯುತ್ತಿವೆ.

ಭೋರ್ಗರೆಯುವ ಚೇಲಾವರ ಜಲಪಾತ ಕೊಡಗಿನ ಪ್ರವಾಸಿ ತಾಣಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಮಳೆಗಾಲದಲ್ಲಿ ಈ ಜಲಪಾತದ ಚೆಲುವು ಮನಮೋಹಕ. ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿ ಚೇಲಾವರ ಗ್ರಾಮದಲ್ಲಿರುವ ಎರಡು ರಮಣೀಯ ಜಲಪಾತಗಳು ತಮ್ಮ ಚೆಲುವಿನಿಂದ ಪ್ರವಾಸಿಗರ ಮನಸೆಳೆದಿವೆ. ಕೊಡಗಿನಲ್ಲಿ ಅತಿ ಎತ್ತರವಾದ ತಡಿಯಂಡಮೋಳ್‌ ಶಿಖರ, ಬ್ರಹ್ಮಗಿರಿ ಬೆಟ್ಟ ಸಾಲುಗಳು ಮುಗಿಲನ್ನು ಚುಂಬಿಸುತ್ತಾ ನಿಂತಿವೆ.

ADVERTISEMENT

ಬ್ರಹ್ಮಗಿರಿ ಬೆಟ್ಟದ ಬುಡದಿಂದ ಕಾವೇರಿ ನದಿ ಹುಟ್ಟಿದರೆ, ತಡಿಯಂಡಮೋಳ್ ಶಿಖರದ ಸರಹದ್ದಿನಲ್ಲಿರುವ ಇಗ್ಗುತಪ್ಪ ಬೆಟ್ಟದಿಂದ ಬಲಿಯಟ್ರ ನದಿ ಮತ್ತು ಚೋಮಕುಂದು ಬೆಟ್ಟದಿಂದ ಸೋಮನ ನದಿಗಳು ಹರಿದು ಬರುತ್ತವೆ.ಈ ಎರಡು ನದಿಗಳು ವಿರಾಜಪೇಟೆ ತಾಲ್ಲೂಕಿನ ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದಲ್ಲಿ ಧುಮ್ಮಿಕ್ಕುತ್ತವೆ. ಹಾಗೆಯೇ ಹರಿದು ಅನತಿ ದೂರದಲ್ಲಿ ಸಂಗಮವಾಗಿ ಬಲಮುರಿ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತವೆ.

ಬಂಡೆಗಲ್ಲುಗಳ ಮೇಲಿನಿಂದ ಧುಮ್ಮಿಕ್ಕುವ ಚೇಲಾವರದ ಪ್ರಮುಖ ಜಲಪಾತ ಏಮೆಪಾರೆ ಜಲಪಾತ. ಹಸಿರು ವನರಾಶಿಯ ನಡುವೆ ಹಾಲ್ನೊರೆಯಂತೆ ಧರೆಗಿಳಿಯುವ ಈ ಜಲಪಾತ ನಯನ ಮನೋಹರ. ಮಳೆಗಾಲದಲ್ಲಿ ತಮ್ಮ ವೈಭವವನ್ನು ಮೆರೆಯುವ ಜಲಪಾತಗಳಲ್ಲಿ ಚೇಲಾವರ ಜಲಪಾತ ವಿಶಿಷ್ಟವಾಗಿ ಆಕರ್ಷಿಸುತ್ತದೆ. ವಿರಾಜಪೇಟೆಯಿಂದ ಸುಮಾರು 26 ಕಿ.ಮೀ ದೂರದಲ್ಲಿರುವ ಪುಟ್ಟ ಊರು ಚೆಯ್ಯಂಡಾಣೆಗೆ ತೆರಳಿ ಅಲ್ಲಿಂದ ಕವಲು ಹಾದಿಯಲ್ಲಿ 5 ಕಿ.ಮೀ. ದೂರಕ್ಕೆ ಸಾಗಿದರೆ ನಿಸರ್ಗದ ನಡುವಿನ ಅಪೂರ್ವ ಜಲಧಾರೆಗಳ ಸೊಬಗು ಸವಿಯಬಹುದು. ಸಮೀಪದಲ್ಲಿಯೇ ಬಲಿಯಟ್ರ ಜಲಪಾತವಿದೆ. ಚೇಲಾವರ ಜಲಪಾತಗಳ ಸನಿಹಕ್ಕೆ ತೆರಳಿ ನೀರಿನಲ್ಲಿ ಚೆಲ್ಲಾಟ ಆಡುವುದನ್ನು ಈಗ ನಿರ್ಬಂಧಿಸಲಾಗಿದೆ.

ಮನಮೋಹಕ ಮೇದುರ ಜಲಪಾತ

ಕಕ್ಕಬ್ಬೆ ಬಳಿಯ ಮೇದುರ ಜಲಪಾತ ಮತ್ತೊಂದು ಮನಮೋಹಕ ಜಲಧಾರೆ. ನಿತ್ಯ ಹರಿದ್ವರ್ಣದ ದಟ್ಟ ಕಾಡಿನಲ್ಲಿ ಹೆಜ್ಜೆ ಹಾಕ ತೊಡಗಿದರೆ ಎಲ್ಲಿಂದಲೋ ನೀರು ಭೋರ್ಗರೆದು ಧುಮ್ಮಿಕ್ಕುವ ಸದ್ದು ಕೇಳಿ ಬರುತ್ತದೆ. ಸುತ್ತಲಿನ ಬೆಟ್ಟಗುಡ್ಡಗಳತ್ತ ದೃಷ್ಟಿ ಹಾಯಿಸುತ್ತಾ ಹೆಜ್ಜೆ ಹಾಕುತ್ತಿದ್ದಂತೆ ಕಪ್ಪು ಬಂಡೆಯ ಮೇಲಿಂದ ಭೋರ್ಗರೆಯುತ್ತಾ ಧುಮ್ಮಿಕ್ಕುವ ರಮಣೀಯವಾದ ಜಲಪಾತದ ದರ್ಶನವಾಗುತ್ತದೆ. ತಡಿಯಂಡಮೋಳ್ ಬೆಟ್ಟ ಶ್ರೇಣಿಯ ಮಾದಂಡ ಅಬ್ಬಿ ಹಾಗೂ ನೆಲಜಿ ಗ್ರಾಮದ ಪಾರೆಕಟ್ಟು ಜಲಪಾತ ನೋಡಬಹುದು. ಇನ್ನು ಪೇರೂರು ಗ್ರಾಮ ಬೆಟ್ಟಗಳಲ್ಲಿ ಸಾಲು ಸಾಲು ಜಲಧಾರೆಗಳು ಕಾಣಸಿಗುತ್ತವೆ. ಬೆಟ್ಟಗಳಿಂದ ಹರಿದು ಬರುವ ಜಲಧಾರೆ ಅಲ್ಲಲ್ಲಿ ಬಂಡೆಗಳ ಮೇಲೆ ಬೆಳ್ನೊರೆಯಾಗಿ ಬೀಳುತ್ತಿರುವ ದೃಶ್ಯ ಕಣ್ಮನ ಸೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.