ಪ್ರಾತಿನಿಧಿಕ ಚಿತ್ರ
ಮಡಿಕೇರಿ: ‘ಮುಕ್ಕೋಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ ಅವರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ, ಏಲಕ್ಕಿ ಗಿಡಗಳನ್ನು ಅಮಾನವೀಯವಾಗಿ ಕತ್ತರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ವಜಾಗೊಳಿಸಬೇಕು ಹಾಗೂ ನಾಣಿಯಪ್ಪ ಅವರಿಗೆ ₹ 30 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸೆ. 26ರಂದು ಇಲ್ಲಿನ ಅರಣ್ಯ ಭವನದ ಮುಂಭಾಗ ಅಹೊರಾತ್ರಿ ಪ್ರತಿಭಟನೆ ನಡೆಸಲಾಗುವುದು’ ಎಂದು ಕೊಡಗು ಜಿಲ್ಲಾ ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ತಿಳಿಸಿದರು.
‘ಕಾಳಚಂಡ ನಾಣಿಯಪ್ಪ ಅವರು ಪೈಸಾರಿ ಜಾಗದಲ್ಲಿ ತೋಟ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದರು. ಯಾವುದೇ ಜಂಟಿ ಸರ್ವೇ ನಡೆಸದೇ ಏಕಾಏಕಿ ತೋಟವನ್ನು ನಾಶಪಡಿಸಲಾಗಿದೆ. ಇದೊಂದು ಅಮಾನವೀಯ ಕ್ರಮ’ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಅರಣ್ಯ ಇಲಾಖೆಯೇ ಎಲ್ಲ ವಿಧದ ಕ್ರಮಗಳನ್ನು ಕೈಗೊಳ್ಳುತ್ತದೆ ಎನ್ನುವುದಾದರೆ ಇತರ ಇಲಾಖೆಗಳಾದರೂ ಏಕೆ ಬೇಕು’ ಎಂದು ಪ್ರಶ್ನಿಸಿದ ಅವರು, ‘ಸರ್ವೇ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಹೀಗೆ ಜಂಟಿ ಸರ್ವೆ ಮಾಡಬೇಕು ಎಂದು ಸ್ಪಷ್ಟವಾದ ಆದೇಶ ಇದ್ದಾಗ್ಯೂ ಅವುಗಳನ್ನೆಲ್ಲ ಬದಿಗೊತ್ತಿ ಅರಣ್ಯ ಇಲಾಖೆ ಏಕಪಕ್ಷೀಯ ತೀರ್ಮಾನ ಕೈಗೊಂಡಿದೆ’ ಎಂದು ಹರಿಹಾಯ್ದರು.
‘ನಾವು ತೆರಿಗೆ ಪಾವತಿಸಿದರೆ ಸಿಬ್ಬಂದಿಗೆ ಸಂಬಳ ಬರುತ್ತದೆ ಎನ್ನುವುದನ್ನು ಮರೆಯಬಾರದು. ಬೆಳೆದು ನಿಂತ, ಫಸಲು ಬಿಡಲು ತಯಾರಾದ ಗಿಡಗಳನ್ನು ಕತ್ತರಿಸಲು ಮನಸ್ಸಾದರೂ ಹೇಗೆ ಬಂತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ನಾವು ಸಿ ಮತ್ತು ಡಿ ಭೂಮಿ ಸಂಬಂಧ ಸೋಮವಾರಪೇಟೆ ಬಂದ್ ನಡೆಸಿದ ಕೆಲವೇ ದಿನಗಳಲ್ಲಿ ಈ ಕೃತ್ಯ ನಡೆದಿದೆ. ಬಂದ್ ನಡೆಸಿದಾಗ ಜಿಲ್ಲಾಡಳಿತ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ, ಈಗ ಅರಣ್ಯ ಇಲಾಖೆ ಏಕಪಕ್ಷೀಯ ತೀರ್ಮಾನ ಕೈಗೊಂಡಿದೆ’ ಎಂದು ದೂರಿದರು.
ಮುಖಂಡರಾದ ಹೊಸೂರು ಗಿರೀಶ, ನಾಗಂಡ ಭವಿನ್, ನಂದೀರ ಸಜನ್, ಓಡಿಯಂಡ ಸುಜನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.