ADVERTISEMENT

ಕೊಡಗು ಪ್ರವಾಹ: ಅಸುರಕ್ಷಿತ ಪ್ರದೇಶವಾದ ‘ನಿವೃತ್ತರ ಸ್ವರ್ಗ’ ಕುಶಾಲನಗರ

ನಿವೇಶನ ಖರೀದಿಗೂ ಜನರ ಹಿಂದೇಟು

ರಘು ಹೆಬ್ಬಾಲೆ
Published 9 ಸೆಪ್ಟೆಂಬರ್ 2018, 13:08 IST
Last Updated 9 ಸೆಪ್ಟೆಂಬರ್ 2018, 13:08 IST
ಕುಶಾಲನಗರ ಪಟ್ಟಣದ ದೃಶ್ಯ
ಕುಶಾಲನಗರ ಪಟ್ಟಣದ ದೃಶ್ಯ   

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದ್ದ ‘ವಾಣಿಜ್ಯ ನಗರಿ’ ಕುಶಾಲನಗರ ಪಟ್ಟಣ ಈಚೆಗೆ ನೆರೆ ಪ್ರವಾಹದಿಂದ ಭಾಗಶಃ ಮುಳುಗಡೆಯಾಗಿತ್ತು. ಅದರಿಂದ ನಿರಂತರವಾಗಿ ನಡೆಯುತ್ತಿದ್ದ ರಿಯಲ್ ಎಸ್ಟೇಟ್ ದಂಧೆಗೆ ಬ್ರೇಕ್ ಬಿದ್ದಂತಾಗಿದೆ. ನಿವೇಶನ ಖರೀದಿಗೂ ಜನರು ಹಿಂದೇಟು ಹಾಕುತ್ತಿದ್ದಾರೆ.

ಕಾವೇರಿ ನದಿ ದಂಡೆ ಮೇಲೆ ರೂಪುಗೊಂಡಿರುವ ಕುಶಾಲನಗರ ಪಟ್ಟಣ ಕೂಡ ಇದೀಗ ಅಸುರಕ್ಷಿತ ಪ್ರದೇಶವಾಗಿ ಮಾರ್ಪಟ್ಟಿದ್ದು, ಮಹಾಮಳೆ ಹಾಗೂ ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ಕುಶಾಲನಗರ ಪಟ್ಟಣವೂ ತತ್ತರಿಸಿ ಹೋಗಿದೆ. ನೀರಿನಲ್ಲಿ ಮುಳುಗಡೆಯಾದ ಅನೇಕ ಮನೆಗಳು ಧರೆಗೆ ಉರುಳಿದ್ದವು. ನೂರಾರು ಜನರು ಮನೆಗಳು ಇದ್ದರೂ ನಿರಾಶ್ರಿತರಾಗುವಂತಹ ಪರಿಸ್ಥಿತಿ ಉಂಟಾಗಿತ್ತು.

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ನೆರೆ ಪ್ರವಾಹದಿಂದ ಉಂಟಾದ ಅನಾಹುತದಿಂದ ಎಚ್ಚೆತ್ತುಗೊಂಡಿರುವ ಜನರು ಈಗ ಪಟ್ಟಣದಿಂದ ದೂರದಲ್ಲಿ ನದಿ ದಂಡೆ ಹೊರತುಪಡಿಸಿ ಸುರಕ್ಷಿತ ಪ್ರದೇಶಗಳಲ್ಲಿ ಮನೆ ನಿರ್ಮಾಣದತ್ತ ಒಲವು ತೋರುತ್ತಿದ್ದಾರೆ.

ADVERTISEMENT

ಇದರಿಂದ ನಿವೇಶನ ಖರೀದಿಯಲ್ಲಿ ಗಣನೀಯವಾಗಿ ಇಳಿಕೆ ಕಂಡುಬರುತ್ತಿದ್ದು, ರಿಯಲ್ ಎಸ್ಟೇಟ್ ದಂಧೆಗೂ ಕಡಿವಾಣ ಬಿದ್ದಂತಾಗಿದೆ.

ಪಟ್ಟಣ ಸೇರಿದಂತೆ ಮುಳ್ಳುಸೋಗೆ, ಗುಡ್ಡೆಹೊಸೂರು, ಕೂಡುಮಂಗಳೂರು, ಕೂಡಿಗೆ ವ್ಯಾಪ್ತಿಯಲ್ಲಿ ಕೆಲವು ವರ್ಷಗಳಿಂದ ರಿಯಲ್ ಎಸ್ಟೇಟ್ ದಂಧೆ ಎಗ್ಗಿಯಿಲ್ಲದೆ ನಡೆಯುತ್ತಿತ್ತು. ಈ ದಂಧೆಗೆ ಕೆಲವು ಅಧಿಕಾರಿಗಳು ಶಾಮೀಲಾಗಿ ಬಡಾವಣೆ ನಿರ್ಮಾಣಕ್ಕೆ ಬೆಂಬಲವಾಗಿ ನಿಂತಿದ್ದರು. ಕುಶಾಲನಗರ ಪಟ್ಟಣದಲ್ಲಿ ಸುಮಾರು 50ಕ್ಕೂ ಹೆಚ್ಚು ಬಡಾವಣೆಗಳು ರೂಪುಗೊಂಡಿದ್ದು, 12ಕ್ಕೂ ಹೆಚ್ಚಿನ ಹೊಸ ಬಡಾವಣೆಗಳು ನಿರ್ಮಾಣಗೊಂಡಿವೆ. ಪಟ್ಟಣದ ವಿವಿಧ ಕೆರೆ, ತಗ್ಗು ಪ್ರದೇಶಗಳು ಹಾಗೂ ಬಫರ್ ಜೋನ್ ಪ್ರದೇಶಗಳು ಸೇರಿದಂತೆ ರಾಜಕಾಲುವೆಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡಲಾಗಿತ್ತು. ಈ ದಂಧೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡ ಸಹಕಾರ ನೀಡಿದ್ದರು ಎಂಬ ಆರೋಪವು ಬಲವಾಗಿತ್ತು.

ಸರ್ಕಾರಿ, ಪೈಸಾರಿ ಜಾಗ ಹಾಗೂ ಕೆರೆ ಕಟ್ಟೆಗಳ ಅಕ್ರಮ ಒತ್ತುವರಿ ವಿರುದ್ಧ ಕೆಲವು ಸಂಘಟನೆಗಳು ಹೋರಾಟ ನಡೆಸಿದರೂ ಇದುವರೆಗೂ ಒತ್ತುವರಿ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ. ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಮಾಡಲಾಗಿತ್ತು ಎಂದು ಪ್ರಜ್ಞಾವಂತರು ಆರೋಪಿಸಿದ್ದರು.

ಲಕ್ಷಾಂತರ ರೂಪಾಯಿಗೆ ಖರೀದಿಯಾಗುತ್ತಿದ್ದ ನಿವೇಶನಗಳನ್ನು ಇದೀಗ ಕೇಳುವವರಿಲ್ಲ. ಬೆಂಗಳೂರು, ಮೈಸೂರು ಹಾಗೂ ಕೊಡಗಿನ ರಿಯಲ್ ಎಸ್ಟೇಟ್ ಪ್ರತಿನಿಧಿಗಳು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ನಿರ್ಮಿಸಿರುವ ಬಡಾವಣೆಗಳು ಖಾಲಿ ಹೊಡೆಯುತ್ತಿವೆ. ರಿಯಲ್ ಎಸ್ಟೇಟ್ ಮಾಲೀಕರು ಹೇಳಿದಷ್ಟು ಹಣಕ್ಕೆ ನಿವೇಶನ ಮತ್ತು ಮನೆಗಳನ್ನು ಖರೀದಿಸುತ್ತಿದ್ದ ಜಿಲ್ಲೆಯ ಗಡಿಭಾಗದ ಕೇರಳದ ಜನರು ಇತ್ತ ಸುಳಿಯದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಮಹಾಮಳೆಯಿಂದ ಉಕ್ಕಿ ಹರಿದ ಕಾವೇರಿ, ಹಾರಂಗಿ ನದಿಯಂಚಿನಲ್ಲಿನ ಬಡಾವಣೆಗಳು ನೆರೆ ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾದ ಪರಿಣಾಮ ಇದೀಗ ಜನರು ನದಿ ದಂಡೆಯಲ್ಲಿ ವಾಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಲಕ್ಷಾಂತರ ರೂಪಾಯಿ ನೀಡಿ, ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಂಡಿರುವ ಅಧಿಕಾರಿ ವರ್ಗ, ನಿವೃತ್ತ ಸೈನಿಕರು, ನೌಕರರು ಚಿಂತೆಗೆ ಒಳಗಾಗಿದ್ದಾರೆ. ‘ನಿವೃತ್ತ ನೌಕರರ ಸ್ವರ್ಗ’ ಎಂದೇ ಬಿಂಬಿತವಾಗಿದ್ದ ಕುಶಾಲನಗರ ಪಟ್ಟಣ ಈಗ ಅಸುರಕ್ಷಿತ ತಾಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.