ADVERTISEMENT

ಉಳಿಯಬೇಕಿದೆ ಕಾಫಿನಾಡಿನ ಸ್ವಾತಂತ್ರ್ಯದ ಹೆಜ್ಜೆ ಗುರುತುಗಳು

ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳಾದರೂ ಇರಬೇಕು ಗಾಂಧಿ ಭವನದಲ್ಲಿ, ಕೋಟೆಯಲ್ಲಿ

ಕೆ.ಎಸ್.ಗಿರೀಶ್
Published 15 ಆಗಸ್ಟ್ 2025, 3:43 IST
Last Updated 15 ಆಗಸ್ಟ್ 2025, 3:43 IST
ಗಾಂಧಿ ಬಂದ ಗಾಂಧಿ ಮೈದಾನ ಇನ್ನೂ ಅಭಿವೃದ್ಧಿಯನ್ನೇ ಕಂಡಿಲ್ಲ. ಗಾಂಧಿ ಮಂಟಪದ ಕಾಮಗಾರಿ ಇನ್ನೂ ತೆವಳುತ್ತಲೇ ಸಾಗುತ್ತಿದೆ.  ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಗಾಂಧಿ ಬಂದ ಗಾಂಧಿ ಮೈದಾನ ಇನ್ನೂ ಅಭಿವೃದ್ಧಿಯನ್ನೇ ಕಂಡಿಲ್ಲ. ಗಾಂಧಿ ಮಂಟಪದ ಕಾಮಗಾರಿ ಇನ್ನೂ ತೆವಳುತ್ತಲೇ ಸಾಗುತ್ತಿದೆ.  ಪ್ರಜಾವಾಣಿ ಚಿತ್ರ/ರಂಗಸ್ವಾಮಿ   

ಮಡಿಕೇರಿ: ಬ್ರಿಟಿಷರ ನೇರ ಆಳ್ವಿಕೆಯಲ್ಲಿದ್ದ ಕೊಡಗಿನಲ್ಲಿಯೂ ಸ್ವಾತಂತ್ರ್ಯ ಹೋರಾಟ ಬೇರೆ ಜಿಲ್ಲೆಗಳಿಗಿಂತ ಹೆಚ್ಚಾಗಿಯೇ ನಡೆದಿದ್ದು, ಅವುಗಳೆಲ್ಲವೂ ಈಗ ತೆರೆಮರೆಯತ್ತ ಸರಿಯುತ್ತಿವೆ. ಸ್ವಾತಂತ್ರ್ಯ ಹೋರಾಟದ ಕುರುಹುಗಳೂ ಮಾಸುತ್ತಿವೆ.

ಲಿಂಗಾಯಿತ ಅರಸರ ಆಳ್ವಿಕೆಯಲ್ಲಿದ್ದ ಕೊಡಗನ್ನು ಬ್ರಿಟಿಷರು ತಮ್ಮ ನೇರ ಆಡಳಿತಕ್ಕೆ ತೆಗೆದುಕೊಂಡ ನಂತರ ಉಂಟಾದ ಕಲ್ಯಾಣಸ್ವಾಮಿ ದಂಗೆಯು 1857ಕ್ಕೂ ಮುನ್ನವೇ ನಡೆದಿತ್ತು. ಹಾಗಾಗಿ, ಇದನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದೂ ಕರೆಯಬಹುದಾಗಿದೆ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಬ್ರಿಟಿಷರ ವಿರುದ್ಧದ ಇಂತಹದ್ದೊಂದು ಘಟನೆಯ ಉಲ್ಲೇಖ ಜಿಲ್ಲೆಯಲ್ಲಿ ಎಲ್ಲೂ ಸಹ ಪ್ರಸ್ತಾಪವಾಗಿಲ್ಲ.

ನಂತರ, ಬ್ರಿಟಿಷರ ವಿರುದ್ದ ಸಿಡಿದೆದ್ದ ವೀರ ಸೇನಾನಿ ಸುಬೇದಾರ್ ಅಪ್ಪಯ್ಯಗೌಡ ಅವರನ್ನು ಮಡಿಕೇರಿಯ ಕೋಟೆ ಆವರಣದ ಮುಂಭಾಗದಲ್ಲಿ 1837 ಅಕ್ಟೋಬರ್ 31 ರಂದು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಈ ಜಾಗವನ್ನೂ ಮರೆಯಲಾಗಿದೆ. ಇಂತಹ ಅನೇಕ ಹೋರಾಟಗಳು ಕೊಡಗಿನಲ್ಲಿ ನಡೆದಿವೆಯಾದರೂ, ಅವುಗಳನ್ನು ದಾಖಲಿಸುವ ಪ್ರಯತ್ನಗಳು ಮಾತ್ರ ನಡೆದಿಲ್ಲ.

ADVERTISEMENT

1930ರ ಹೊತ್ತಿಗೆ ಇಲ್ಲಿನ ಕೋಟೆಯಲ್ಲಿ ಹಾರುತ್ತಿದ್ದ ಬ್ರಿಟಿಷರ ಧ್ವಜವನ್ನು ಬಿ.ಜಿ.ಗಣಪಯ್ಯ, ಮಂಡೇಪಂಡ ಕಾರ್ಯಪ್ಪ ಮತ್ತು ಮಲೇಂಗಡ ಚಂಗಪ್ಪ ಅವರು ಕೆಳಗಿಳಿಸಿ ರಾಷ್ಟ್ರೀಯ ಧ್ವಜವನ್ನು ಹಾರಿಸಿದ ಪ್ರಸಂಗದ ವಿವರೂ ಕೋಟೆಯಲ್ಲಿ ಎಲ್ಲಿ ಹುಡುಕಿದರೂ ಈಗ ಸಿಗುವುದಿಲ್ಲ.

ಆ ನಂತರ  1934ರಲ್ಲಿ ಮಹಾತ್ಮ ಗಾಂಧೀಜಿ ಅವರು ಕೊಡಗಿಗೆ ಭೇಟಿ ನೀಡಿದಾಗ ಸಾಹಿತಿ ಕೊಡಗಿನ ಗೌರಮ್ಮ ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ ಆಭರಣಗಳನ್ನು ನೀಡಿದ ವಿವರಗಳೂ ಎಲ್ಲೂ ಕಾಣ ಸಿಕ್ಕುವುದಿಲ್ಲ. ಮಾತ್ರವಲ್ಲ, ಗಾಂಧೀಜಿ ಕೊಡಗಿಗೆ ಬಂದು, ಸ್ವಾತಂತ್ರ್ಯ ಚಳವಳಿಗೆ ಇನ್ನಷ್ಟು ಹುರುಪು ತುಂಬಿದರು. ಈ ಭೇಟಿಯ ನೆನಪುಗಳನ್ನು ಉಳಿಸುವ ಕಾರ್ಯಕ್ಕೆ ವೇಗ ದೊರಕಿಲ್ಲ. ಗಾಂಧಿ ಹೆಸರಿನ ಮೈದಾನದ ಅಭಿವೃದ್ಧಿ ಕಾರ್ಯ, ಗಾಂಧಿ ಚಿತಾಭಸ್ಮ ಇರಿಸಲು ಮಂಟಪದ ನಿರ್ಮಾಣ ಕಾರ್ಯ ‌ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ಇನ್ನೂ ನಡೆಯುತ್ತಲೆ ಇವೆ.

ಇನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ಹೆಸರಿಸುತ್ತಾ ಹೋದರೆ ನೂರಾರು ಮಂದಿ ಸಿಗುತ್ತಾರೆ. ಪಂದ್ಯಂಡ ಬೆಳ್ಯಪ್ಪ, ಕೆ.ಮಲ್ಲಪ್ಪ, ಎನ್.ಸೋಮಣ್ಣ, ನಂಜುಂಡೇಶ್ವರ, ಕೆ.ಸಿ.ಕರುಂಬಯ್ಯ, ವೆಂಕಪಯ್ಯ, ಕೆ.ಪದ್ಮನಾಭಯ್ಯ, ಕಾವೇರಿ ಹೀಗೆ ಅನೇಕ ಮಂದಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ. ಇವರ ಹೆಸರುಗಳನ್ನು ಕನಿಷ್ಠ ಹೊಸದಾಗಿ ನಿರ್ಮಾಣವಾಗಿರುವ ಗಾಂಧಿ ಭವನದಲ್ಲೂ ಹಾಕಿಲ್ಲ.

ಕೊಡಗಿನ ಸ್ವಾತಂತ್ರ್ಯ ಚಳವಳಿಯ ನೆನಪುಗಳನ್ನು ಸಂಗ್ರಹಿಸಿಡುವ ಕಾರ್ಯ ಜಿಲ್ಲೆಯಲ್ಲಿ ನಡೆಯಬೇಕಾದ ಅಗತ್ಯ ಇದೆ.

ಸ್ವಾತಂತ್ರ್ಯ ದಿನಾಚರಣೆ ನಡೆಯಲಿರುವ ಮಡಿಕೇರಿ ಕೋಟೆ ಆವರಣದಲ್ಲಿ ಸಿದ್ಧತಾ ಕಾರ್ಯ ಗುರುವಾರ ನಡೆಯಿತು

ಹಬ್ಬದಂತಹ ವಾತಾವರಣ ಇತ್ತು

ಸ್ವಾತಂತ್ರ್ಯ ಬಂದಾಗಿನ ನೆನಪಿನ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಹಿರಿಯ ನಾಯಕರಾದ ಎಂ.ಸಿ.ನಾಣಯ್ಯ ‘ಅಂದು ಎಲ್ಲೆಡೆ ಹಬ್ಬದಂತಹ ವಾತಾವರಣ ಇತ್ತು’ ಎಂದು ನೆನಪಿಸಿಕೊಂಡರು. ‘ನನ್ನ ತಂದೆ ಕಂದಾಯಾಧಿಕಾರಿಯಾಗಿದ್ದರು. ಆಗ ನಾವು ನಾಪೋಕ್ಲುವಿನಲ್ಲಿದ್ದೆವು. ಸ್ವಾತಂತ್ರ್ಯ ಬಂದಾಗ ಹಿರಿಯರು ಬಾವುಟ ಹಿಡಿದು ಓಡಾಡಿದ್ದು ಹಾಗೂ ಶಾಲೆಗಳಲ್ಲಿ ಸಂಭ್ರಮಪಟ್ಟಿದ್ದು ಹಬ್ಬದಂತಹ ವಾತಾವರಣ ನಿರ್ಮಾಣವಾಗಿದ್ದು ಈಗಲೂ ನೆನಪಿನಲ್ಲಿದೆ’ ಎಂದು ಹೇಳಿದು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.