
ಮಡಿಕೇರಿ: ಯುನೆಸ್ಕೊದಿಂದ ಘೋಷಣೆಯಾದ ಭಾರತದ ಎಲ್ಲ ವಿಶ್ವ ಪಾರಂಪರಿಕ ಸ್ಥಳಗಳ ಛಾಯಾಚಿತ್ರಗಳು, ಕೊಡಗಿನ ಐತಿಹಾಸಿಕ ಸ್ಥಳಗಳ ಛಾಯಾಚಿತ್ರಗಳು, ಕೊಡಗಿನ ಪಾರಂಪರಿಕ ವಸ್ತುಗಳು, ಪ್ರಾಚೀನ ನಾಣ್ಯ ಮತ್ತು ನೋಟುಗಳು, ಕರಕುಶಲ ವಸ್ತುಗಳು ಇವೆಲ್ಲವೂ ಒಂದೇ ಸೂರಿನಡಿ ವೀಕ್ಷಿಸಲು ಲಭ್ಯವಿದೆ.
ಇಲ್ಲಿನ ಐತಿಹಾಸಿಕ ಕೋಟೆಯೊಳಗಿನ ಅರಮನೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಬುಧವಾರ ಆರಂಭವಾದ ವಿಶ್ವ ಪಾರಂಪರ ಸಪ್ತಾಹ ಹಾಗೂ ಶಾಶ್ವತ ಛಾಯಾಚಿತ್ರ ಪ್ರದರ್ಶನ, ಗ್ಯಾಲರಿ ಸಹಿತ ವ್ಯಾಖ್ಯಾನ ಕೇಂದ್ರದಲ್ಲಿ ಇನ್ನು 7 ದಿನಗಳವರೆಗೆ ಇವೆಲ್ಲವನ್ನೂ ಸಾರ್ವಜನಿಕರು ಮುಕ್ತವಾಗಿ ಕಣ್ತುಂಬಿಕೊಳ್ಳಬಹುದು. ಇದರೊಂದಿಗೆ, ಪಿ.ಕೆ.ಕೇಶವಮೂರ್ತಿ ಅವರ ನಾಣ್ಯ ಮತ್ತು ನೋಟುಗಳ ಪ್ರದರ್ಶನವೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಇಲ್ಲಿ ಅತಿ ಹಳೆಯ ಶಿಲಾಸಮಾಧಿಗಳಿಂದ ಹಿಡಿದು, ಅರಮನೆಯವರೆಗಿನ ಛಾಯಾಚಿತ್ರಗಳು ಮನುಕುಲದ ಯಾತ್ರೆಗೆ ಕೈಗನ್ನಡಿ ಹಿಡಿಯುವಂತಿದೆ. ಕೊಡಗನ್ನು ಆಳಿದ ಅರಸರ ಅಪರೂಪದ ಛಾಯಾಚಿತ್ರಗಳು, ಕೊನೆಯ ದೊರೆ ಚಿಕ್ಕವೀರರಾಜೇಂದ್ರ ಮಗಳು ರಾಜಕುಮಾರಿ ಗೌರಮ್ಮ ಅವರ 1852ರಲ್ಲಿ ತೆಗೆದ ಚಿತ್ರಗಳೂ ಸೇರಿದಂತೆ ಅನೇಕ ಅಪರೂಪದ ಚಿತ್ರಗಳು ಸಾವಿರ ಪದಗಳನ್ನು ಗುಣುಗುಣಿಸುತ್ತಿವೆ.
ನಿಶ್ಚಲವಾದಂತೆ ಕಾಣಬರುವ ನಾಣ್ಯಗಳೂ ಹಲವು ಐತಿಹಾಸಿಕ ಕಥನಗಳನ್ನು ಅನುರಣಿಸುತ್ತಿವೆ. ಇಷ್ಟೆಲ್ಲ ಅಪರೂಪದ ವಸ್ತು, ಛಾಯಾಚಿತ್ರಗಳ ಪ್ರದರ್ಶನವು ಪ್ರವಾಸಿಗರಿಗೆ, ಪ್ರಾಚ್ಯವಸ್ತು ಆಸಕ್ತರಿಗೆ ರಸಗವಳದಂತಿವೆ.
ಮೊದಲ ದಿನವಾದ ಬುಧವಾರ ಉದ್ಘಾಟನಾ ಸಮಾರಂಭದಲ್ಲಿ ಮಡಿಕೇರಿ ಕೊಡವ ಸಮಾಜದ ತಂಡದವರಿಂದ ಉಮ್ಮತ್ತಾಟ್ ಕಲಾಪ್ರದರ್ಶನ, ಕಚ್ಚಿದುಡಿ ಕೂಟದವರಿಂದ ಬಾಳೋಪಾಟ್, ಬೊಳಕಾಟ್ ಮತ್ತು ಕೋಲಾಟ ಕಲಾ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರುಗು ತುಂಬಿದವು.
ರಾಜ್ಯ ಸರ್ಕಾರದಿಂದ ₹ 10 ಕೋಟಿ ಬಿಡುಗಡೆಯಾಗಿದ್ದು ಕೋಟೆಯ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ.– ಸುಜಿತ್ ನಯನ್, ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕ.
ಕೋಟೆ ರಕ್ಷಿಸಬೇಕು: ಯದುವೀರ್
ವಿಶ್ವ ಪರಂಪರೆ ಸಪ್ತಾಹವನ್ನು ಉದ್ಘಾಟಿಸಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ‘ಮಡಿಕೇರಿಯಲ್ಲಿ ಕೋಟೆಯನ್ನು ಜತನದಿಂದ ರಕ್ಷಿಸಬೇಕು’ ಎಂದು ಹೇಳಿದರು.
ನಗರದ ಕೋಟೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಒದಗಿಸಲಾಗುವುದು. ಕೋಟೆಯನ್ನು ಶಾಶ್ವತ ಪಾರಂಪರಿಕ ಕೇಂದ್ರವನ್ನಾಗಿ ಮಾಡುವಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕಲೆ ಸಂಸ್ಕೃತಿ ಸಾಹಿತ್ಯ ಪರಂಪರೆ ಸಂಬಂಧ ನಗರದ ಕೋಟೆ ಹಳೇ ವಿಧಾನಸಭಾ ಸಭಾಂಗಣದಲ್ಲಿ ಕಾರ್ಯಕ್ರಮಗಳು ಸಹ ಜರುಗುವಂತಾಗಬೇಕು. ಸಾರ್ವಜನಿಕರು ಸಹ ವೀಕ್ಷಣೆಗೆ ಅವಕಾಶವಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಕೊಡಗಿಗೆ ಅನನ್ಯವಾದ ಇತಿಹಾಸ ಪರಂಪರೆಯೇ ಇದೆ. ಬಹಳ ಪ್ರಾಚೀನ ಕಾಲದ ವಸ್ತುಗಳು ಇಲ್ಲಿ ಸಿಕ್ಕಿವೆ. ಪ್ರಾಚೀನ ಕಾಲದ ಆಚರಣೆಗಳೂ ಇಲ್ಲಿವೆ. ಇವೆಲ್ಲವನ್ನೂ ಉಳಿಸಬೇಕಿದೆ ಎಂದರು. ಕೊಡಗು ಕದಂಬರ ಆಳ್ವಿಕೆಯ ಕಾಲದಿಂದಲೂ ತನ್ನ ಐತಿಹಾಸಿಕತೆಯನ್ನು ಹೊಂದಿದೆ. ಹಿಂದೆ ನಮ್ಮ ವಂಶದ ಚಿಕ್ಕದೇವರಾಜ ಒಡೆಯರ್ ಅವರಿಗೂ ಕೊಡಗಿನ ಅರಸರಿಗೂ ಯುದ್ದವಾಗಿರುವ ಕುರಿತ ದಾಖಲೆಗಳಿವೆ. ಇಷ್ಟಾದರೂ ಮೈಸೂರು ದಸರೆ ಮುಗಿದ ಬಳಿಕ ಮಡಿಕೇರಿ ದಸರೆ ಆರಂಭಿಸುವಂತಹ ಸೌಹಾರ್ದ ಪರಂಪರೆಯನ್ನು ಇಲ್ಲಿ ಕಾಣಬಹುದು. ಇಡಿ ದೇಶದಲ್ಲಿ ಏಕತೆಯಲ್ಲಿ ವೈವಿಧ್ಯತೆ ಇದೆ ಎಂದು ಪ್ರತಿಪಾದಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಮಾತನಾಡಿದರು. ಪುರಾತತ್ವ ಇಲಾಖೆ ಅಧೀಕ್ಷಕರಾದ ಡಾ.ಆರ್.ಎನ್.ಕುಮಾರನ್ ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ.ರೇಖಾ ಭಾಗವಹಿಸಿದ್ದರು.
ಕೋಟೆ ಇನ್ನಷ್ಟು ಅಭಿವೃದ್ಧಿ: ಡಿಸಿ
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ‘ಪಾರಂಪರಿಕ ಸ್ಥಳಗಳಲ್ಲಿ ಹಲವು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಬೇಕು. ಜಿಲ್ಲೆಯ ಪರಂಪರೆ ಇತಿಹಾಸ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ನಗರದ ಕೋಟೆಯು ಬಹಳಷ್ಟು ಸುಧಾರಣೆಯಾಗಿದ್ದು ಇನ್ನೂ ಸುಧಾರಣೆಯಾಗಬೇಕಿದೆ ಎಂದರು. ಕೋಟೆಯ ಒಳ ಆವರಣದಲ್ಲಿರುವ ಕಟ್ಟಡವನ್ನು ನಿಯಮಾನುಸಾರ ತೆರವುಗೊಳಿಸಲು ಕ್ರಮವಹಿಸಬೇಕು. ಪಾರಂಪರಿಕ ಕಟ್ಟಡದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಬೇಕು. ಕೋಟೆಯನ್ನು ಅಭಿವೃದ್ಧಿಪಡಿಸುವಲ್ಲಿ ಎಲ್ಲರ ಸಲಹೆ ಸಹಕಾರ ಅತ್ಯಗತ್ಯ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.