ಮಡಿಕೇರಿ: ಕೋವಿಡ್–19ರ ಅವಧಿಯಲ್ಲಿ ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ 53 ಆಮ್ಲಜನಕ ಸಾಂದ್ರಕಗಳು (ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳು) ಕೊಡುಗೆಯಾಗಿ ನೀಡಿದ್ದ ಅಮೆರಿಕದ ಮೀರಾ ವೆಲ್ಸ್, ಅವರ ಪತಿ ಐಬಿಎಂ ಸಂಸ್ಥೆಯ ನಿರ್ದೇಶಕ ಕೋರ್ಟ್‍ಲ್ಯಾಂಡ್, ನಿವೃತ್ತ ಐಎಎಸ್ ಅಧಿಕಾರಿ ಎ.ಕೆ.ಮೊಣ್ಣಪ್ಪ ಮತ್ತು ಸ್ಥಳೀಯ ವೈದ್ಯ ಡಾ.ಸಣ್ಣುವಂಡ ಕಾವೇರಪ್ಪ ಅವರು ಭೇಟಿ ನೀಡಿದರು.
ಈ ವೇಳೆ ಅವರು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಎ.ಜೆ.ಲೋಕೇಶ್ ಮತ್ತು ತಂಡದವರೊಂದಿಗೆ ಸಮಾಲೋಚನೆ ನಡೆಸಿದರು. ಲೋಕೇಶ್ ಅವರು ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದ್ದ ಕ್ಷಣಗಳನ್ನು ನೆನೆದು ಕೃತಜ್ಞತೆ ಅರ್ಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಂಡದವರು ಮುಂದೆಯೂ ಸಂಸ್ಥೆಗೆ ಸಾಧ್ಯವಿರುವ ನೆರವಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್, ಸಂಸ್ಥೆಯ ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ರೋಹಿಣಿ ಭಾಗವಹಿಸಿದ್ದರು.
ನೆರವು ನೀಡಿದ್ದು ಹೀಗೆ...: ಕೋವಿಡ್ ಸಂಕಷ್ಟದ ಸಮಯದಲ್ಲಿ ಡಾ.ಶೋಭಾ ಚೊಟ್ಟೇರಾ, ಮಾಜಿ ಐಎಎಸ್ ಅಧಿಕಾರಿ ಎ.ಕೆ. ಮೊಣ್ಣಪ್ಪ ಅವರು ನಾಪೋಕ್ಲುವಿನ ಡಾ.ಸಣ್ಣುವಂಡ ಎಂ.ಕಾವೇರಪ್ಪ ಅವರನ್ನು ಸಂಪರ್ಕಿಸಿ ಕೊಡಗಿನಲ್ಲಿ ಆಮ್ಲಜನಕದ ಸಾಂದ್ರೀಕರಣದ ಅಗತ್ಯವಿದೆಯೇ ಎಂದು ವಿಚಾರಿಸಿದ್ದರು. ಇದರ ನಂತರ, ಡಾ.ಕಾವೇರಪ್ಪ ಅವರು ಅಂದಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಅವರನ್ನು ಸಂಪರ್ಕಿಸಿ ಉಪಕರಣದ ಅವಶ್ಯಕತೆ ಬಗ್ಗೆ ಹೇಳಿದ್ದರು. ಯುನೈಟೆಡ್ ಸ್ಟೇಟ್ಸ್ ಮೂಲದ ವೈದ್ಯಕೀಯ ತಜ್ಞರಾದ ಡಾ.ಮೀರಾ ವೆಲ್ಸ್ ಅವರ ನೇತೃತ್ವದಲ್ಲಿ 2021ರ ಮೇ 23ರಂದು ಕೊಡಗು ವೈದ್ಯಕೀಯ ಕಾಲೇಜಿಗೆ 53 ಆಮ್ಲಜನಕ ಸಾಂದ್ರಕಗಳನ್ನು ದಾನ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.