
ಮಡಿಕೇರಿ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕಲಾಜಾಥ ವಿಶೇಷ ಪ್ರಚಾರಾಂದೋಲನಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕಂಜರ ಬಾರಿಸುವ ಮೂಲಕ ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ‘ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಸೇರಿದಂತೆ ಸರ್ಕಾರದ ಹಲವು ವಿಷಯಗಳ ಕುರಿತು ವಿಶೇಷ ಪ್ರಚಾರಾಂದೋಲನವನ್ನು ಜಿಲ್ಲೆಯ ಹಲವು ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದರು.
‘ಸರ್ಕಾರದ ಗ್ಯಾರಂಟಿ ಯೋಜನೆಗಳು ಒಂದಲ್ಲ ಒಂದು ರೀತಿಯಲ್ಲಿ ಜನರಿಗೆ ತಲುಪುತ್ತಿದ್ದು, ಈ ಯೋಜನೆಗಳ ಮಹತ್ವ ಕುರಿತು ಕಲಾಜಾಥ ಮೂಲಕ ವಿಶೇಷ ಪ್ರಚಾರಾಂದೋಲನ ಆಯೋಜಿಸಲಾಗಿದೆ’ ಎಂದರು.
ಕಲಾವಿದ ಈ.ರಾಜು ಮತ್ತು ತಂಡದವರು ಯೋಜನೆ ‘ಯೋಜನೆ ಬಂತಣ್ಣ, ಗ್ಯಾರಂಟಿ ಯೋಜನೆ ಬಂತಣ್ಣ.. ಮಹಿಳೆಯರ ಪಾಲಿಗೆ ದಾರಿ ದೀಪವಣ್ಣ, ಬಡವರ ಮುಖದಲ್ಲಿ ನಗೆ ಮೂಡಿತಣ್ಣ...’ ಹಾಡು ಹಾಡುವ ಮೂಲಕ ಗಮನ ಸೆಳೆದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಭೀಮರಾಯ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಹೇಮಂತ್ ರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.