ADVERTISEMENT

ಮೈಸೂರು ಉಸ್ತುವಾರಿ ಕೈತಪ್ಪಿದ್ದಕ್ಕೆ ಕೊಡಗಿನ ಮೇಲೆ ಮುನಿಸಿಕೊಂಡರೇ ಸೋಮಣ್ಣ?

ಬದಲಾವಣೆ ಬೆನ್ನಲೇ ಸಚಿವರ ಮಡಿಕೇರಿ ಪ್ರವಾಸ ರದ್ದು!

ಅದಿತ್ಯ ಕೆ.ಎ.
Published 11 ಏಪ್ರಿಲ್ 2020, 5:03 IST
Last Updated 11 ಏಪ್ರಿಲ್ 2020, 5:03 IST
ವಿ.ಸೋಮಣ್ಣ
ವಿ.ಸೋಮಣ್ಣ   

ಮಡಿಕೇರಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಸಂಜೆ ಕೆಲವು ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ್ದು ಅದು ಕೆಲವರ ಅಸಮಾಧಾನಕ್ಕೂ ಕಾರಣವಾಗಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಪೂರ್ಣ ಪ್ರಮಾಣದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆಯನ್ನು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ನೀಡಲಾಗಿತ್ತು. ಸೋಮಣ್ಣಗೆ ಹೆಚ್ಚುವರಿಯಾಗಿ ಕೊಡಗು ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ವಹಿಸಲಾಗಿತ್ತು.

ಸೋಮಣ್ಣಗೆ ಮೈಸೂರು ಪೂರ್ಣ ಜವಾಬ್ದಾರಿಯಿದ್ದ ಕಾರಣದಿಂದ ಸಂಪುಟಕ್ಕೆ ಹೊಸ ಸಚಿವರ ಸೇರ್ಪಡೆಯಾದ ಮೇಲೆ ಈ ಜಿಲ್ಲೆಗೆ ಹೊಸ ಉಸ್ತುವಾರಿ ಬರುವ ನಿರೀಕ್ಷೆಗಳಿದ್ದವು. ಆದರೆ, ಸೋಮಣ್ಣಗೆ ಮೈಸೂರಿನ ಜವಾಬ್ದಾರಿ ಕೈತಪ್ಪಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಶುಕ್ರವಾರ (ಮಾರ್ಚ್‌ 10) ಸೋಮಣ್ಣ ಕೊಡಗು ಪ್ರವಾಸ ಹಮ್ಮಿಕೊಂಡಿದ್ದರು. ಆದರೆ, ಪ್ರವಾಸ ದಿಢೀರ್‌ ರದ್ದುಗೊಂಡಿತು. ಮೈಸೂರು ಜವಾಬ್ದಾರಿ ಕೈತಪ್ಪಿದ್ದಕ್ಕೇ ಅವರು ಮುನಿಸಿಕೊಂಡರೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ರಾಜಕೀಯ ವಲಯದಲ್ಲೂ ಅನುಮಾನ ಮೂಡಿಸಿದೆ. ಈ ಅಸಮಾಧಾನ ಕೊರೊನಾ ಹೊತ್ತಿನಲ್ಲಿ ಸ್ಫೋಟಗೊಂಡಿಲ್ಲ ಅಷ್ಟೇ ಎಂದು ಮುಖಂಡರೊಬ್ಬರು ಹೇಳುತ್ತಾರೆ.

ಮೈಸೂರಿನ ಮೇಲೆಯೇ ಕಣ್ಣು!:ಸೋಮಣ್ಣ ಅವರಿಗೆ ಮೈಸೂರು ಜಿಲ್ಲೆಯ ಮೇಲೆಯೇ ಕಣ್ಣಿತ್ತು. ಕೊಡಗು ಜಿಲ್ಲೆಯಲ್ಲಿ ಮಾಡಿದ್ದ ಪ್ರವಾಸಕ್ಕಿಂತ ಅಲ್ಲಿಯೇ ಅವರ ಓಡಾಟ ಜೋರಾಗಿತ್ತು.ಮೈಸೂರು ಜವಾಬ್ದಾರಿಯನ್ನು ಕಸಿದುಕೊಂಡು ಸಚಿವ ಎಸ್‌.ಟಿ.ಸೋಮಶೇಖರ್‌ಗೆ ನೀಡಿದ್ದಕ್ಕೆ ದಿಢೀರ್ ಆಗಿ ಪ್ರವಾಸ ರದ್ದು ಮಾಡಿದರೆ ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಅಥವಾ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಲ್ಲಿ ಒಬ್ಬರಿಗೆ ಕೊಡಗಿನ ಜವಾಬ್ದಾರಿ ನೀಡುವ ನಿರೀಕ್ಷೆಯಿತ್ತು. ಕೊನೆಯಲ್ಲಿ ಲೆಕ್ಕಾಚಾರ ಬುಡಮೇಲಾಗಿದೆ.

ತಲೆದಂಡಕ್ಕೆ ಕಾರಣವಾದರೂ ಏನು?:ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಸ್‌ ದಿನದಿಂದ ಕ್ಷಿಪ್ರವಾಗಿ ಹರಡುತ್ತಿದ್ದು ಅದನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಆರಂಭದಲ್ಲಿ ನಿರ್ಲಕ್ಷ್ಯ ತೋರಿದ್ದೇ ಇದಕ್ಕೆಲ್ಲಾ ಕಾರಣವೆಂಬ ಆರೋಪವೂ ಇದೆ. ಅದಕ್ಕೆ ಸೋಮಣ್ಣ ಅವರ ತಲೆತಂಡವಾಯಿತೇ ಎಂದು ಪಕ್ಷದ ಮುಖಂಡರೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಶುಕ್ರವಾರ ಬೆಳಿಗ್ಗೆ 11ಕ್ಕೆ ಜಿಲ್ಲೆಯ ವಿರಾಜಪೇಟೆ ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಕೊರೊನಾ ವೈರಸ್ ವ್ಯಾಪಿಸದಂತೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಬೇಕಿತ್ತು. ಬಳಿಕ ವಿರಾಜಪೇಟೆ ನಿರಾಶ್ರಿತರ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಕುಂದುಕೊರತೆ ಪರಿಶೀಲನೆ ನಡೆಸಬೇಕಿತ್ತು. ಮಧ್ಯಾಹ್ನ 2.30ಕ್ಕೆ ಮಡಿಕೇರಿಯಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ, ಅಧಿಕಾರಿಗಳ ಸಭೆ ನಡೆಸಿ ಕೊಡಗಿಗೆ ಕೊರೊನಾ ಸೋಂಕು ವ್ಯಾಪಿಸದಂತೆ ತಡೆಗಟ್ಟಲು ಕೆಲವು ಸಲಹೆ – ಸೂಚನೆ ನೀಡಬೇಕಿತ್ತು. ಅದ್ಯಾವುದೂ ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.