ADVERTISEMENT

ಕೊಡಗು: ಗಬ್ಬೆದ್ದು ನಾರುತ್ತಿದೆ ಕೀರೆಹೊಳೆ

40 ವರ್ಷದ ಹಿಂದೆ ಸ್ವಚ್ಛವಾಗಿದ್ದ ಹೊಳೆ ಇಂದು ಮಲಿನ

ಜೆ.ಸೋಮಣ್ಣ
Published 1 ಜೂನ್ 2023, 23:30 IST
Last Updated 1 ಜೂನ್ 2023, 23:30 IST
ಗೋಣಿಕೊಪ್ಪಲಿನಲ್ಲಿ ಹರಿಯುತ್ತಿರುವ ಕೀರೆಹೊಳೆ ಹೂಳು ತುಂಬಿ ಗಿಡಗಂಟಿಗಳು ಬೆಳೆದು ಕಾಡಿನಂತಾಗಿದೆ. ಹೊಳೆ ನೀರು ಸಂಪೂರ್ಣ ಮಲಿನವಾಗಿದೆ
ಗೋಣಿಕೊಪ್ಪಲಿನಲ್ಲಿ ಹರಿಯುತ್ತಿರುವ ಕೀರೆಹೊಳೆ ಹೂಳು ತುಂಬಿ ಗಿಡಗಂಟಿಗಳು ಬೆಳೆದು ಕಾಡಿನಂತಾಗಿದೆ. ಹೊಳೆ ನೀರು ಸಂಪೂರ್ಣ ಮಲಿನವಾಗಿದೆ   

ಗೋಣಿಕೊಪ್ಪಲು: ಲಕ್ಷ್ಮಣತೀರ್ಥ ನದಿಯನ್ನು ಸೇರುವ ಕೀರೆಹೊಳೆ ಸಂಪೂರ್ಣ ಮಲಿನಗೊಂಡಿದೆ. ಪಟ್ಟಣದ ಹೃದಯ ಭಾಗದಲ್ಲಿ ಈ ಹೊಳೆ ಹರಿಯುತ್ತಿದ್ದರೂ ಇದಕ್ಕೆ ಸೇರುತ್ತಿರುವ ಮಲೀನ ನೀರನ್ನು ತಡೆಯಲು ಯಾರೊಬ್ಬರೂ ಪ್ರಯತ್ನಿಸಿಲ್ಲ. ಗ್ರಾಮ ಪಂಚಾಯಿತಿ ಪ್ರತಿ ವರ್ಷ ಗಿಡಗಂಟಿಗಳನ್ನಷ್ಟೇ ತೆರವುಗೊಳಿಸಿ ಸುಮ್ಮನಾಗುತ್ತಿದೆ. ಈ ಬಾರಿ ಗಿಡಗಂಟಿಗಳ ತೆರವು ಕಾರ್ಯವೂ ನಡೆದಿಲ್ಲ.

ಪಟ್ಟಣದ ಮನೆಗಳ ಶೌಚಾಲಯದ ನೀರು ನೇರವಾಗಿ ಕೀರೆಹೊಳೆ ಸೇರುತ್ತಿದೆ. ಜತೆಗೆ, ಸಾರ್ವಜನಿಕರು ಕೂಡ ತ್ಯಾಜ್ಯವನ್ನು ಹೊಳೆಗೆ ಎಸೆಯುತ್ತಿದ್ದಾರೆ. ಈ ತ್ಯಾಜ್ಯ ಮಳೆಗಾಲದಲ್ಲಿ ಹರಿಯುವ ನೀರಿಗೆ ಸಿಕ್ಕಿ ಸೇತುವೆ ಬಳಿ ನಿಲ್ಲುತ್ತದೆ. ಇದರಿಂದ ನೀರಿನ ಹರಿವಿಗೆ ಅಡ್ಡಿಯಾಗಿ ಮಳೆಯ ನೀರು ಪಟ್ಟಣದ ತಗ್ಗಿನಲ್ಲಿರುವ ಮನೆಗಳಿಗೆ ನುಗ್ಗುತ್ತದೆ. ಇದರಿಂದಾಗಿಯೇ 2018 ಮತ್ತು 2019ರಲ್ಲಿ ಗೋಣಿಕೊಪ್ಪಲು ಪಟ್ಟಣದ ಅರ್ಧದಷ್ಟು ಮನೆಗಳು ಪ್ರವಾಹದಲ್ಲಿ ಮುಳುಗಿದ್ದವು.

ಅಂದಿನಿಂದ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಪ್ರತಿವರ್ಷ ಮುಂಗಾರು ಮಳೆ ಆರಂಭವಾಗುವ ಮುನ್ನ ಕೀರೆಹೊಳೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುತ್ತಿತ್ತು. ಆದರೆ, ಈ ಬಾರಿ ಕೆಲಸ ಇನ್ನೂ ಆರಂಭಗೊಂಡಿಲ್ಲ. ಇದರ ಜತೆಗೆ, ಪಟ್ಟಣದ ಬೈಪಾಸ್ ರಸ್ತೆ ಬಳಿ ಇರುವ ಕೈ ತೋಡುವಿನಲ್ಲೂ ಗಿಡಗಂಟಿಗಳು ಬೆಳೆದು ಮುಚ್ಚಿ ಹೋಗಿದೆ.

ADVERTISEMENT

ಈಗ ಕೀರೆಹೊಳೆಯಲ್ಲಿ ಹೂಳು ತುಂಬಿ, ಕಾಡು ಬೆಳೆದು ಕಿರುಅರಣ್ಯದಂತಾಗಿದೆ. ಪಟ್ಟಣದ ಪಶ್ಚಿಮ ದಿಕ್ಕಿನ ನೇತಾಜಿ ಬಡಾವಣೆಯಿಂದ ಹಿಡಿದು ಪೂರ್ವದ ಸೀಗೆತೋಡುವರೆಗೂ ಹೊಳೆ ಕಾಣಿಸುವುದೇ ಇಲ್ಲ. ಹೊಳೆ ನೀರು ಸಂಪೂರ್ಣವಾಗಿ ಒಣಗಿ ಹೋಗಿದೆ. ಹೊಳೆಯ ಹಳ್ಳದಲ್ಲಿ ಪಟ್ಟಣದ ಚರಂಡಿ ನೀರು ತುಂಬಿದೆ. ಇದೀಗ ಮಳೆ ಬಿದ್ದಿರುವುದರಿಂದ ಹೊಳೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಸಮೃದ್ಧವಾಗಿ ಬೆಳೆದಿವೆ. ದಟ್ಟ ಹಸಿರಿನಿಂದ ಕೂಡಿರುವ ಹೊಳೆಯ ಮಧ್ಯಭಾಗ ಮತ್ತು ದಡಗಳು ದನಕರುಗಳು ಹಾಗೂ ಮೇಕೆಗಳು ಮೇಯುವ ಹುಲ್ಲುಗಾವಲಾಗಿದೆ.

ಕೀರೆಹೊಳೆಗೆ ಪಟ್ಟಣದ ಪಟೇಲ್ ನಗರಕ್ಕೆ ತೆರಳಲು ಮಾರುಕಟ್ಟೆ ಕೆಳಭಾಗದಲ್ಲಿ 20 ವರ್ಷಗಳ ಹಿಂದೆಯೇ ಸೇತುವೆ ನಿರ್ಮಾಣಗೊಂಡಿದೆ. ಈ ಸೇತುವೆಯ ಮತ್ತೊಂದು ಬದಿಯಲ್ಲಿ ಹಳ್ಳವಿದ್ದು, ಇದೂ ತ್ಯಾಜ್ಯ ತುಂಬಿಸುವ ಹೊಂಡವಾಗಿತ್ತು. 25 ವರ್ಷಗಳ ಹಿಂದೆ ಈ ಜಾಗದಲ್ಲಿ ನಿವೇಶನ ರಹಿತ ಕಾರ್ಮಿಕರು ಒಬೊಬ್ಬರೇ ಬಂದು ಗುಡಿಸಲು ಕಟ್ಟಿಕೊಂಡು ವಾಸಿಸತೊಡಗಿದರು. ಇದೀಗ ಇಲ್ಲಿ ನೂರಾರು ಮನೆಗಳು ತಲೆ ಎತ್ತಿವೆ. ಆದರೆ, ಸ್ವಚ್ಚತೆ ಎಂಬುದು ದೂರವಾಗಿದೆ.

ಪಟ್ಟಣದ ನಿವಾಸಿ ಫಯಾಜ್ ಖಾನ್ ಮಾತನಾಡಿ, ‘ಈ ಹೊಳೆಯ ನೀರನ್ನು 45 ವರ್ಷಗಳ ಹಿಂದೆ ಕುಡಿಯುವುದಕ್ಕೆ ಬಳಸುತ್ತಿದ್ದರು. ಮೀನುಗಳನ್ನೂ ಹಿಡಿಯುತ್ತಿದ್ದರು. ಆದರೆ, ಹೊಳೆಯಲ್ಲಿ ಬಟ್ಟೆ ತೊಳೆಯಲೂ ಆಗದಷ್ಟು ಮಲಿನವಾಗಿದೆ. ಇದರ ದಡಕ್ಕೂ ಹೋಗಲಾರದಷ್ಟು ದುರ್ವಾಸನೆ ಹೊಮ್ಮುತ್ತಿದೆ. ಪಟ್ಟಣದ ಹೋಟೆಲ್, ಬೇಕರಿ ಮನೆಗಳ ತ್ಯಾಜ್ಯ ಮತ್ತು ನೀರೆಲ್ಲ ತುಂಬಿ ಕೊಳೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಾಬಾಲು ಮಾತನಾಡಿ, ‘ಇನ್ನು ಒಂದೆರಡು ದಿನಗಳಲ್ಲಿ ಕೀರೆಹೊಳೆಯಲ್ಲಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಲಾಗುವುದು’ ಎಂದು ಹೇಳಿದರು.

ಕೀರೆಹೊಳೆ ಇತಿಹಾಸ

ಕಿರುಹೊಳೆಯನ್ನು ಆಡುಭಾಷೆಯಲ್ಲಿ ಕೀರೆಹೊಳೆ ಎಂದು ಕರೆಯಲಾಗುತ್ತಿದೆ. ಇಂತಹ ಕೀರೆಹೊಳೆಗಳು ಕೊಡಗಿನಲ್ಲಿ ಬಹಳಷ್ಟಿವೆ. ಆದರೆ, ಗೋಣಿಕೊಪ್ಪಲು ಭಾಗದಲ್ಲಿ ಹರಿಯುವ ಕೀರೆಹೊಳೆ ಅಮ್ಮತ್ತಿ ಭಾಗದಲ್ಲಿ ಹುಟ್ಟಿ ಅನೇಕ ತೋರೆ, ತೋಡುಗಳನ್ನು ಸೇರಿಸಿಕೊಂಡು ಗೋಣಿಕೊಪ್ಪಲಿಗೆ ಪ್ರವೇಶಿಸುತ್ತದೆ. ಮುಂದೆ ಕಿರುಗೂರು, ನಲ್ಲೂರು, ಬೆಸಗೂರು ಮಾರ್ಗವಾಗಿ ಹರಿದು ಲಕ್ಷ್ಮಣತೀರ್ಥ ನದಿ ಸೇರುತ್ತದೆ.

ಗೋಣಿಕೊಪ್ಪಲಿನಲ್ಲಿ ಹರಿಯುತ್ತಿರುವ ಕೀರೆಹೊಳೆ ಹೂಳು ತುಂಬಿ ಗಿಡಗಂಟಿಗಳು ಬೆಳೆದು ಕಾಡಿನಂತಾಗಿದೆ. ಹೊಳೆ ನೀರು ಸಂಪೂರ್ಣ ಮಲೀನವಾಗಿದೆ.
ಗೋಣಿಕೊಪ್ಪಲಿನ ಬೈಪಾಸ್ ರಸ್ತೆ ತೋಡಿನಲ್ಲಿ ಗಿಡಗಂಟಿಗಳು ಸಮೃದ್ಧವಾಗಿ ಬೆಳೆದಿರುವುದು.

ಹೊಳೆಗೆ ಸೇರುವ ಮಲಿನ ನೀರು ತಡೆಯಲು ಆಗ್ರಹ ಇಂಗುಗುಂಡಿಗಳ ನಿರ್ಮಾಣಕ್ಕಷ್ಟೇ ಸೀಮಿತವಾದ ಗ್ರಾಮ ಪಂಚಾಯಿತಿ ಕೀರೆಹೊಳೆಯನ್ನು ಶುದ್ಧೀಕರಿಸಲು ಒತ್ತಾಯ

ಕೀರೆಹೊಳೆಯನ್ನು ಆದಷ್ಟು ಬೇಗ ಸ್ವಚ್ಚಗೊಳಿಸಬೇಕು. ಇಲ್ಲದಿದ್ದರೆ ಕಸಕಡ್ಡಿ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ನೀರಿನ ಹರಿವಿಗೆ ಅಡ್ಡಿಯಾಗಿ ಮಳೆಗಾಲದಲ್ಲಿ ಪ್ರವಾಹ ಎದುರಾಗುವ ಸಂಭವವಿದೆ. ನಾರಾಯಣ ಸ್ವಾಮಿ ನಾಯ್ಡು ಸಾಮಾಜಿಕ ಕಾರ್ಯಕರ್ತ

ಇನ್ನು ಒಂದೆರಡು ದಿನಗಳಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸಲಾಗುವುದು. ಮಲಿನ ನೀರು ಸೇರದಂತೆ ಇಂಗುಗುಂಡಿಗಳನ್ನು ಸ್ಥಾಪಿಸಲಾಗುತ್ತಿದೆ. ಶ್ರೀನಿವಾಸ್ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.