ADVERTISEMENT

ಮಡಿಕೇರಿ ಜಿಲ್ಲಾಸ್ಪತ್ರೆ ಶೀಘ್ರ ಮೇಲ್ದರ್ಜೆಗೆ

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗುವತ್ತ ದಾಪುಗಾಲು

ಕೆ.ಎಸ್.ಗಿರೀಶ್
Published 4 ಜನವರಿ 2026, 5:46 IST
Last Updated 4 ಜನವರಿ 2026, 5:46 IST
ಮಡಿಕೇರಿಯಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ ಕಟ್ಟಡ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಬಹುತೇಕ ಅಂತಿಮ ಹಂತ ತಲುಪಿದೆ
ಮಡಿಕೇರಿಯಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ ಕಟ್ಟಡ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಬಹುತೇಕ ಅಂತಿಮ ಹಂತ ತಲುಪಿದೆ   

ಮಡಿಕೇರಿ: ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ) ಈ ವರ್ಷ ಉನ್ನತ ದರ್ಜೆಗೇರುವತ್ತ ದಾಪುಗಾಲಿಡಲಿದೆ.

ಇಲ್ಲಿ ರೋಗಿಗಳು ತಂಗುವುದಕ್ಕೆಂದೇ ಧರ್ಮಶಾಲಾ, ಕ್ರಿಟಿಕಲ್ ಕೇರ್ ಯೂನಿಟ್, ಕ್ಯಾಥ್‌ಲ್ಯಾಬ್ ಸೇರಿದಂತೆ ಹಲವು ಹೊಸ ಹೊಸ ವಿಭಾಗಗಳು ಆರಂಭವಾಗುವ ನಿರೀಕ್ಷೆ ಬಲವಾಗಿದೆ. ಮುಖ್ಯವಾಗಿ, ಆಸ್ಪತ್ರೆಯ ಕಾಮಗಾರಿಗಳು ಈ ವರ್ಷ ಮುಗಿದು, ಆಸ್ಪತ್ರೆ ಸಂಪೂರ್ಣ ಕಾರ್ಯಾರಂಭ ಮಾಡುವ ನಿರೀಕ್ಷೆ ಮೂಡಿಸಿದೆ.

ಈಗ 550 ಹಾಸಿಗೆ ಸಾಮರ್ಥ್ಯ ಇರುವ ಆಸ್ಪತ್ರೆ ವರ್ಷಾಂತ್ಯದ ಹೊತ್ತಿಗೆ 700ರಿಂದ 750 ಆಸ್ಪತ್ರೆ ಸಾಮರ್ಥ್ಯದ ಆಸ್ಪತ್ರೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ನೆಲಮಹಡಿ ಸೇರಿದಂತೆ ಒಟ್ಟು 8 ಮಹಡಿಗಳಲ್ಲಿನ ಬಹುತೇಕ ಎಲ್ಲ ಕಾಮಗಾರಿಗಳೂ ಈ ವರ್ಷವೇ ಮುಗಿಯುವ ಅಂದಾಜು ಇದೆ.

ADVERTISEMENT

‘ಆಸ್ಪತ್ರೆಯ ಎಲ್ಲ ಮಹಡಿಗಳ ಕೆಲಸ ಅತಿ ಶೀಘ್ರದಲ್ಲೇ ಮುಗಿಯಲಿದ್ದು, ಉಪಕರಣಗಳ ಖರೀದಿಯು ಟೆಂಡರ್ ಹಂತದಲ್ಲಿದೆ. ಹೀಗಾಗಿ, ವರ್ಷಾಂತ್ಯದ ಹೊತ್ತಿಗೆ ಆಸ್ಪತ್ರೆಯ ಹೊಸ ಕಟ್ಟಡ ಸಂಪೂರ್ಣವಾಗಿ ರೋಗಿಗಳ ಸೇವೆಗೆ ತೆರೆದುಕೊಳ್ಳಲಿದೆ’ ಎಂದು ಕೊಡಗು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎ.ಜೆ.ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಬಳಿ ನಿರ್ಮಿಸುತ್ತಿರುವ ‘ಧರ್ಮಶಾಲಾ’ ಕಟ್ಟಡದಲ್ಲಿ ರೋಗಿಗಳ ಸಂಬಂಧಿಕರು ತಂಗುವುದಕ್ಕೆ ಅವಕಾಶವಾಗಲಿದೆ. ಆದಿವಾಸಿಗಳಿಗೆ ಮೊದಲ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಈ ಕಟ್ಟಡದ ಕಾಮಗಾರಿ ಬಹುಪಾಲು ಮುಗಿಯುವ ಹಂತಕ್ಕೆ ಬಂದಿದೆ.

ತಜ್ಞ ವೈದ್ಯರನ್ನು ತಾತ್ಕಾಲಿಕವಾಗಿ ಕರ್ತವ್ಯಕ್ಕೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿಸಲು ಸಹ ತೀರ್ಮಾನಿಸಲಾಗಿದೆ. ಇದರಿಂದ ಹಂತಹಂತವಾಗಿ ತಜ್ಞ ವೈದ್ಯರ ಕೊರತೆ ನಿವಾರಣೆಯಾಗುವ ವಿಶ್ವಾಸವೂ ಮೂಡಿದೆ.

ಕಿಮೊಥೆರ‍ಪಿ ಹಗಲು ಆರೈಕೆ ಕೇಂದ್ರಕ್ಕಾಗಿ ಸಿದ್ಧತೆಗಳು ನಡೆದಿದ್ದು, ಸದ್ಯ ಮೈಸೂರು ವೈದ್ಯಕೀಯ ಕಾಲೇಜಿನಿಂದ ಒಬ್ಬ ತಜ್ಞ ವೈದ್ಯರು ವಾರಕ್ಕೊಮ್ಮೆ ಭೇಟಿ ನೀಡುತ್ತಿದ್ದಾರೆ. ಈ ಕೇಂದ್ರವೂ ಈ ವರ್ಷದಲ್ಲಿ ಸಂಪೂರ್ಣ ಕಾರ್ಯನಿರ್ವಹಿಸುವ ಸಾಧ್ಯತೆಗಳಿವೆ.

ವಿರಾಜಪೇಟೆಯಲ್ಲಿ ಜಿಲ್ಲಾಸ್ಪತ್ರೆ ದರ್ಜೆಯ ಕಟ್ಟಡ ಹಾಗೂ ಕುಶಾಲನಗರದಲ್ಲಿ ತಾಲ್ಲೂಕು ಆಸ್ಪತ್ರೆ ಕಟ್ಟಡಗಳ ಕಾಮಗಾರಿಗಳು ಈ ವರ್ಷವೇ ಆರಂಭವಾಗಲಿವೆ.

ಮಡಿಕೇರಿಯಲ್ಲಿ ನಡೆಯುತ್ತಿರುವ ಕ್ರಿಟಿಕ‌ಲ್ ಕೇರ್ ಯೂನಿಟ್ ಕಟ್ಟಡದ ಕಾಮಗಾರಿಯನ್ನು ಕೊಡಗು ವೈದ್ಯಕೀಯ ವಿಜ್ಞಾನಗಳ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎ.ಜೆ.ಲೋಕೇಶ್ ಶನಿವಾರ ಪರಿಶೀಲನೆ ನಡೆಸಿದರು
ಈ ವರ್ಷ ಮಲ್ಲಿಸ್ಪೆಷಾಲಿಟಿ ಆಸ್ಪತ್ರೆ ಆಗಲಿದ್ದು ಕೆಲವೊಂದು ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ದರ್ಜೆಗೂ ಏರಲಿದೆ. ಧರ್ಮಶಾಲಾ ‘ಕ್ಯಾತ್‌ಲ್ಯಾಬ್’ ‘ಕ್ರಿಟಿಕಲ್ ಕೇರ್ ಯೂನಿಟ್’ಗಳು ಕಾರ್ಯಾರಂಭ ಮಾಡಲಿವೆ.
ಡಾ.ಎ.ಜೆ.ಲೋಕೇಶ್ ಕೊಡಗು ವೈದ್ಯಕೀಯ ವಿಜ್ಞಾನಗಳ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ.
ವಿರಾಜಪೇಟೆಯಲ್ಲಿ ಜಿಲ್ಲಾಸ್ಪತ್ರೆ ದರ್ಜೆಯ ಕಟ್ಟಡ ಕುಶಾಲನಗರದಲ್ಲಿ ತಾಲ್ಲೂಕು ಆಸ್ಪತ್ರೆ ಕಟ್ಟಡಗಳ ಕಾಮಗಾರಿಗಳು ಈ ವರ್ಷವೇ ಆರಂಭವಾಗಲಿವೆ.
ಡಾ.ಕೆ.ಎಂ.ಸತೀಶ್‌ಕುಮಾರ್ ಜಿಲ್ಲಾ ಆರೋಗ್ಯಾಧಿಕಾರಿ.

20 ಹಾಸಿಗೆ ಸಾಮರ್ಥ್ಯದ ‘ಕ್ಯಾತ್‌ಲ್ಯಾಬ್‌’

ಕಳೆದ ಸೆಪ್ಟೆಂಬರ್‌ನಲ್ಲೇ ಸರ್ಕಾರ ಕೊಡಗು ವೈದ್ಯಕೀಯ ವಿಜ್ಞಾನಗಳ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಬೋಧನಾ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸಾ ಕೇಂದ್ರ ‘ಕ್ಯಾತ್‌ಲ್ಯಾಬ್; ತೆರೆಯಲು ಅನುಮತಿ ನೀಡಿತ್ತು. ₹ 10.89 ಕೋಟಿ ವೆಚ್ಚದ ಈ ಘಟಕದಲ್ಲಿ 20 ತೀವ್ರ ನಿಗಾ ಹಾಸಿಗೆಗಳಿಗೆ (ಐಸಿಯು) ವ್ಯವಸ್ಥೆ ಮಾಡಲಾಗುತ್ತಿದೆ. ಈ ವರ್ಷವೇ ಇದು ಕಾರ್ಯಾರಂಭ ಮಾಡಲಿದ್ದು ಹೃದ್ರೋಗಿಗಳಿಗೆ ಇದು ವರದಾನ ಎನಿಸಲಿದೆ.

ತುರ್ತು ಚಿಕಿತ್ಸಾ ಘಟಕ ಸಜ್ಜು

ಹಲವು ವರ್ಷಗಳಿಂದ ನಡೆಯುತ್ತಿರುವ ಕ್ರಿಟಿಕಲ್ ಕೇರ್ ಯೂನಿಟ್ (ಕ್ರಿಟಿಕಲ್ ಕೇರ್ ಯೂನಿಟ್) ಕಾಮಗಾರಿ ಅಂತಿಮ ಹಂತ ತಲುಪಿದೆ. ಇದರಿಂದ ಈ ವರ್ಷವೇ ಇದು ಸೇವೆಗೆ ತೆರೆದುಕೊಳ್ಳುವ ಸಾಧ್ಯತೆಗಳಿವೆ. ಇದರಲ್ಲಿ 50 ಹಾಸಿಗೆ ಸಾಮರ್ಥ್ಯವಿದ್ದು ಅಪಘಾತ ಮತ್ತಿತ್ತರ ತುರ್ತು ಚಿಕಿತ್ಸೆಗಳಿಗೆ ಬೇರೆ ಜಿಲ್ಲೆಗಳಿಗೆ ಹೋಗುವ ಅನಿವಾರ್ಯತೆ ತಪ್ಪಲಿದೆ.

29 ಪಿಜಿ ಸೀಟ್‌ಗೆ ಪ್ರಸ್ತಾವ

ಕೊಡಗು ವೈದ್ಯಕೀಯ ವಿಜ್ಞಾನಗಳ ಕಾಲೇಜಿನಲ್ಲಿ ಸದ್ಯ 74 ಸ್ನಾತಕೋತ್ತರ ಪದವಿ ಸೀಟುಗಳಿವೆ. ಇದರೊಂದಿಗೆ ಇನ್ನೂ 29 ಹೆಚ್ಚು ಸೀಟ್‌ಗಳ ಮಂಜೂರಾತಿಗಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಪ್ರಸ್ತಾವ ಸಲ್ಲಿಸಿದೆ. ಒಂದು ವೇಳೆ ಮಂಜೂರಾತಿ ಸಿಕ್ಕರೆ ಸ್ನಾತಕೋತ್ತರ ಪದವಿಯ ಸೀಟುಗಳ ಸಂಖ್ಯೆ 103ಕ್ಕೆ ಹೆಚ್ಚಳವಾಗಲಿದೆ. ರೇಡಿಯೊಲಜಿ ಬಿಟ್ಟರೆ ಉಳಿದೆಲ್ಲ ವಿಭಾಗಗಳಲ್ಲಿಯೂ ಪಿ.ಜಿ ಸೀಟ್‌ಗಳು ಲಭ್ಯವಾಗಲಿವೆ.