ADVERTISEMENT

ಮಡಿಕೇರಿ | 900ಕ್ಕೂ ಅಧಿಕ ಗೋಲುಗಳನ್ನು ಕಂಡ ಹಾಕಿ ಉತ್ಸವ

ಕೊಡವ ಕೌಟುಂಬಿಕ ಹಾಕಿ ಉತ್ಸವ: 9 ರಂದು ಫೈನಲ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 6:23 IST
Last Updated 7 ಏಪ್ರಿಲ್ 2023, 6:23 IST
 ನಾಪೋಕ್ಲುವಿನ ಚೆರಿಯಪರಂಬುವಿನಲ್ಲಿ ನಡೆಯುತ್ತಿರುವ ಅಪ್ಪಚೆಟ್ಟೋಳಂಡ ಕಪ್ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಗುರುವಾರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
 ನಾಪೋಕ್ಲುವಿನ ಚೆರಿಯಪರಂಬುವಿನಲ್ಲಿ ನಡೆಯುತ್ತಿರುವ ಅಪ್ಪಚೆಟ್ಟೋಳಂಡ ಕಪ್ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಗುರುವಾರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.   

ಮಡಿಕೇರಿ: ಇಲ್ಲಿನ ನಾಪೋಕ್ಲುವಿನ ಚೆರಿಯಪರಂಬುವಿನಲ್ಲಿ ನಡೆಯುತ್ತಿರುವ ಅಪ್ಪಚೆಟ್ಟೋಳಂಡ ಕಪ್ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಇದುವರೆಗೂ 967ಕ್ಕೂ ಹೆಚ್ಚು ಗೋಲುಗಳು ದಾಖಲಾಗಿದ್ದು, ಹಲವು ವೈಶಿಷ್ಟ್ಯಗಳಿಗೆ ವೇದಿಕೆಯಾಗಿದೆ ಎಂದು ಹಾಕಿ ಉತ್ಸವದ ಸಂಚಾಲಕ ಮನುಮುತ್ತಪ್ಪ ತಿಳಿಸಿದರು.

ಒಟ್ಟು 336 ತಂಡಗಳು ನೋಂದಣಿ ಮಾಡಿಕೊಂಡಿದ್ದು, 320 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. 3 ವರ್ಷದ ಬಾಲಕನಿಂದ ಹಿಡಿದು 87 ವರ್ಷದ ಹಿರಿಯರವರೆಗೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಐವರು ಮಹಿಳೆಯರು ಒಂದೇ ತಂಡದಲ್ಲಿ ಆಡಿದ್ದಾರೆ. ತಂದೆ, ತಾಯಿ, ಮಗ, ಸೊಸೆ ಒಟ್ಟಿಗೆ ಆಡುವ ಮೂಲಕ ಹಲವು ವಿಶಿಷ್ಟ ಕಥನಗಳಿಗೆ ಇಂದು ಸಾಕ್ಷಿಯಾಗಿದೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಏ. 9ರಂದು ನಡೆಯಲಿರುವ ಫೈನಲ್‌ ಪಂದ್ಯಾವಳಿಯಲ್ಲಿ ಜಯಶಾಲಿಯಾದ ತಂಡಕ್ಕೆ ₹ 3 ಲಕ್ಷ, ದ್ವಿತೀಯ ಬಹುಮಾನವಾಗಿ ₹ 2 ಲಕ್ಷ, ತೃತೀಯ ₹ 1.5 ಲಕ್ಷ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ₹ 50 ಸಾವಿರ ಬಹುಮಾನ ಮತ್ತು ಟ್ರೋಫಿಗಳನ್ನು ನೀಡಲಾಗುವುದು ಎಂದರು.

ADVERTISEMENT

ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡಿದ 25 ಯುವಕರನ್ನು ಗುರುತಿಸಿ ಅವರಿಗೆ ಸಂಘ, ಸಂಸ್ಥೆಗಳಿಂದ ತರಬೇತಿ ಕೊಡಿಸಲಾಗುವುದು. ಫೈನಲ್‌ ನಡೆಯುವ ದಿನದಂದು ರಕ್ತದಾನ ಶಿಬಿರವೂ ನಡೆಯಲಿದೆ. ಯುವಕರ ತಂಡವೊಂದು ಅಂದು ಸೈಕಲ್‌ ಮೂಲಕ ಬೆಂಗಳೂರಿನಿಂದ ಬಂದು ಮೈದಾನ ಪ್ರವೇಶಿಸಲಿದೆ ಎಂದು ಹೇಳಿದರು.

ಮಣಿಪಾಲ ಆಸ್ಪತ್ರೆಯ ವೈದ್ಯರ ತಂಡವು ಪಂದ್ಯಾವಳಿ ನಡೆಯುವಷ್ಟು ದಿನ ವೈದ್ಯಕೀಯ ಸೇವೆ ನೀಡಿದೆ. ಡಾ.ದೀಪಿಕಾ ಅವರು ಮಾನಸಿಕ ಕಾಯಿಲೆ ಕುರಿತು ಜಾಗೃತಿ ಮೂಡಿಸಿದ್ದಾರೆ ಎಂದರು.

ಹಾಕಿ ಉತ್ಸವ ಸಮಿತಿಯ ಮಿಥುನ್ ಮಾಚಯ್ಯ, ಮನುಮಾದಪ್ಪ, ಸೋಮಣ್ಣ, ರಾಧಿಕಾ ಮಾದಪ್ಪ, ಶಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.